“ನಾನು ಸೌಮ್ಯ ವ್ಯಕ್ತಿಯಾಗಿದ್ದರೂ ನನ್ನೊಳಗೆ ಕ್ರಾಂತಿ, ಬಂಡಾಯ ಅಡಗಿತ್ತು, ಅದನ್ನು ಸೃಜನಶೀಲ ಕಾವ್ಯದ ಮೂಲಕ ಬಂಡಾಯವನ್ನು ಕಾಣಬಹುದು ” ಎಂದು ಸತೀಶ್ ಆನ್ ಸ್ಕ್ರೀನ್ ಕಾರ್ಯಕ್ರಮದಲ್ಲಿ ಕವಿ ಸತೀಶ್ ಕುಲಕರ್ಣಿ ಅವರು ಸಂವಾದದಲ್ಲಿ ಹೇಳಿದರು.
ಹಾವೇರಿ ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಸಾಹಿತಿ ಕಲಾವಿದರ ಬಳಗ ಹಾಗಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಅಭಿಮಾನಿ ಬಳಗ ಸಹಯೋಗದಲ್ಲಿ ಸತೀಶ್ ON SCREEN ಶೀರ್ಷಿಕೆಯ ಅಡಿಯಲ್ಲಿ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಅವರು ಬರೆದ ಚಲನ ಚಿತ್ರಗೀತೆಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಕವಿ ಸತೀಶ್ ಕುಲಕರ್ಣಿ ಅವರು ಮಾತನಾಡಿ, “1992ರಲ್ಲಿ ಬಾಬ್ರಿ ಮಸೀದಿ ದ್ವಂಸ ಮಾಡಿದ ಸಂದರ್ಭದಲ್ಲಿ ಜನರ ನಡುವೆ ವೈಮನಸ್ಸು, ಕಂದಕ ಹುಟ್ಟಿತ್ತು. ಈ ವೈಮನಸ್ಸು, ಕಂದಕ ಹೊಡೆದೋಡಿಸಿ, ಸಹಬಾಳ್ವೆ ಕಟ್ಟುವ ಉದ್ದೇಶ ಒಳಗೊಂಡು ‘ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು ಒಡೆದ ಮನಸುಗಳ ಕಂಡ ಕನಸುಗಳ…’ ಹಾಡನ್ನು ಬರೆದು ಎಲ್ಲ ಕಡೆ ಹಾಡಿದೆ. ಗೌರಿ ಲಂಕೇಶ್, ಡಾ. ಎಂ ಎಂ ಕಲಬುರ್ಗಿ ಕೊನೆಯುಸಿರೆಳೆದಾಗ ಈ ಹಾಡು ಹಾಡುತ್ತಿದ್ದರು ಎಂದು ನೆನಪಿಸಿಕೊಂಡರು.
ಕಾರ್ಯಕ್ರಮಕ್ಕೆ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ್ ಕರಿಗಾರ ಚಾಲನೆ ನೀಡಿ ಮಾತನಾಡಿದ ಅವರು, ” ಹಾವೇರಿ ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ತಂದಂತಹ ಸಾಹಿತಿ ಸತೀಶ್ ಕುಲಕರ್ಣಿ ಅವರು ಚಳವಳಿ, ಹೋರಾಟಗಳಲ್ಲಿ ತೊಡಗಿಸಿಕೊಂಡು ಕ್ರಾಂತಿಗೀತೆಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದವರು. ಸಮಾಜದ ಒರೆಕೋರೆಗಳನ್ನು ಸಾಹಿತ್ಯದ ಮೂಲಕ ತಿದ್ದುತ್ತಾ ಬಂದಿದ್ದಾರೆ. ಸಮಾಜದ ವರ್ತಮಾನ ಸಂಕಟಗಳಿಗೆ ತಕ್ಷಣವೇ ಪ್ರತಿಕ್ರಿಯೆ ಕೊಡುವ ಜವಾಬ್ದಾರಿ ಹೊಂದಿರುವವರು. ಬೀದಿ ನಾಟಕಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದರು” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಶಾಲೆಗಳ ಆರಂಭದ ದಿನವೇ ಶಾಲಾ ಬಸ್ ಅಪಘಾತ; ಚಾಲಕನಿಗೆ ಗಂಭೀರ ಗಾಯ
ಹಿರಿಯ ಸಾಹಿತಿ ಸರಜೂಕಾಟ್ಕರ ಅವರ ಕಾದಂಬರಿ ಆಧಾರಿತ ಸಾವಿತ್ರಿಬಾಯಿ ಪುಲೆ, ಇಂಗಳೆ ಮಾರ್ಗ ಚಲನಚಿತ್ರಗಳಿಗೆ ಸತೀಶ್ ಕುಲಕರ್ಣಿ ಅವರ ರಚಿಸಿದ ಚಲನಚಿತ್ರ ಗೀತೆಗಳು ‘ಜಿಯಾ ಗಾಳಿಯು ಹಾಡುತಿದೆ ಕೇಳಾ…’, ‘ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ…’, ‘ಕುಂತ ಭೂಮ್ಯಾಗ ನಿಂತ ಹೇಳತೇನಿ ಭರತನ ದೇಶದ ಕತಿಯನ್ನ…’, ‘ಕನಸುಗಳು ಬಲಿ ದಾರಿಯಲಿ ಬರೀ ಬೇಲಿಗಳು ನೂರು…’, ‘ಮೇಲು ಕೀಳು ಎಂಬುದಿಲ್ಲ ನೀನು ತಾನು ಒಂದೇ…’ ಸಿನಿಮಾ ಹಾಡುಗಳ ವಿಡಿಯೋ ಪ್ರದರ್ಶನ on Screen ನಡೆಯಿತು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಜಿ. ಎಂ. ಒಂಕಾರಣ್ಣನವರ ಇನ್ನೂ ಅನೇಕರು ಉಪಸ್ಥಿತರಿದ್ದರು.
