2024-25ನೇ ಶೈಕ್ಷಣಿಕ ವರ್ಷದಲ್ಲಿ 60%ಗಿಂತ ಕಡಿಮೆ ಫಲಿತಾಂಶ ಬಂದಿರುವ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್ ನೀಡುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಶನಿವಾರ, ಶಿಕ್ಷಣ ಇಲಾಖೆಯ ಪ್ರಗತಿಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಸಿಇಒಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. “ಎಸ್‌ಎಸ್‌ಎಲ್‌ಸಿಯಲ್ಲಿ ಫಲಿತಾಂಶ ಕಡಿಮೆ ಬಂದಿರುವುದಕ್ಕೆ ಶಿಕ್ಷಕರು ಮತ್ತು ಸಿಬ್ಬಂದಿ ಕೊರತೆ ಎಂದು ನೆಪ ಹೇಳಬೇಡಿ. 60%ಗಿಂತ ಕಡಿಮೆ ಫಲಿತಾಂಶ ಬಂದಿರುವ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್ ನೀಡಬೇಕು. ಡಿಡಿಪಿಐಗಳ ಉತ್ತರ ಸಮರ್ಪಕವಾಗಿ ಇಲ್ಲದಿದ್ದರೆ, ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ಶಿಕ್ಷಕರು ಮತ್ತು ಡಿಡಿಪಿಐಗಳು ಆಸಕ್ತಿಯಿಂದ ಕೆಲಸ ಮಾಡಬೇಕು. ಅವರು ಕೆಲಸ ಮಾಡಿದರೆ, ಎಲ್ಲ ಕಡೆಯೂ ಉತ್ತಮ ಫಲಿತಾಂಶವೇ ಬರುತ್ತದೆ. ಡಿಡಿಪಿಐಗಳು ಜವಾಬ್ದಾರಿ ತೆಗೆದುಕೊಂಡು, ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು” ಎಂದು ತಾಕೀತು ಮಾಡಿದ್ದಾರೆ.
ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ @siddaramaiah ಅವರು ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಜೊತೆ ಸಭೆ ನಡೆಸಿ ನೀಡಿದ ಸೂಚನೆಗಳು pic.twitter.com/JRQLRpTAhv
— CM of Karnataka (@CMofKarnataka) May 31, 2025
“ಬಿಇಒಗಳು ಮತ್ತು ಡಿಡಿಪಿಐಗಳು ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆಯೇ ಎಂಬ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಗಮನಿಸಬೇಕು. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಎಲ್ಲ ರೀತಿಯ ಸೌಲಭ್ಯ ಕೊಟ್ಟರೂ ದಾಖಲಾತಿ ಕುಸಿಯಲು ಕಾರಣವೇನು ಎಂಬುದನ್ನು ಕಂಡುಕೊಳ್ಳಬೇಕು. ಪರಿಹರಿಸಬೇಕು. ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದಂತೆ ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ನೆಪಗಳು ಮುಖ್ಯವಲ್ಲ, ಫಲಿತಾಂಶ ಮುಖ್ಯ. ಪ್ರಾಮಾಣಿಕ ಪ್ರಯತ್ನಕ್ಕೆ ಪ್ರಾಮಾಣಿಕ ಫಲಿತಾಂಶವೂ ದೊರೆಯುತ್ತದೆ” ಎಂದು ಹೇಳಿದ್ದಾರೆ.