ಕಳೆದ ಕೆಲ ದಿನಗಳಿಂದ ಮುಂದುವರೆದ ಮುಂಗಾರಿನ ಅಬ್ಬರಕ್ಕೆ ರಾಜ್ಯದ ರೈತರು ತತ್ತರಿಸಿದ್ದಾರೆ. ಬೆಳೆದ ಭತ್ತ, ಜೋಳ, ರಾಗಿ, ಹತ್ತಿ, ಬಾಳೆ, ತಂಬಾಕು ಸೇರಿದಂತೆ ಹಲವು ಪ್ರಮುಖ ಬೆಳೆಗಳು ನೀರು ಪಾಲಾಗಿವೆ. ಸಾಲ ಮಾಡಿಕೊಂಡು ಈಗಾಗಲೇ ಸಂಕಷ್ಟದಲ್ಲಿರುವ ಕೃಷಿ ವಲಯ ಈಗ ಮಳೆಯಿಂದ ಮತ್ತೆ ಕಂಗೆಟ್ಟಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಮಲನಗರ ತಾಲೂಕಿನ ಬಾಲೂರು ಗ್ರಾಮದಲ್ಲಿ ಕೃಷಿ ಜಮೀನುಗಳು ಜಲಾವೃತಗೊಂಡಿವೆ. ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ.
ಶೇಂಗಾ, ಬೆಂಡೆಕಾಯಿ, ಬದನೆಕಾಯ, ಕಬ್ಬು ಸೇರಿದಂತೆ ಹಲವು ಬೆಳೆಗಳು ನಾಶವಾಗಿದೆ. ಜಮೀನಿನಲ್ಲಿ 2 ರಿಂದ 3 ಅಡಿ ನೀರು ನಿಂತಿದ್ದು, ಶೇಂಗಾ ಬಹುತೇಕ ಕೊಳೆತು ಹೋಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಅದೇ ಪಟ್ಟಣದ ಇಂದ್ರಾನಗರ ಕಾಲೋನಿಯ ಹಲವು ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ ಮನೆಯಲ್ಲಿದ್ದ ಅಕ್ಕಿ, ಈರುಳ್ಳಿ ಸೇರಿದಂತೆ ಧವಸ ದಾನ್ಯಗಳು ನೀರು ಪಾಲಾಗಿದೆ. ಮನೆಯಂಗಳಗಳು ಕೆರೆಯಾಗಿ ಮಾರ್ಪಟ್ಟಿವೆ.
ಚಿಕ್ಕಬಳ್ಳಾಪುರದಲ್ಲೂ ಮಳೆ ತನ್ನ ಅವಾಂತರ ಮುಂದುವರೆಸಿದೆ. ಸಾಲ ಮಾಡಿ ಒಂದುವರೆ ಎಕರೆಯಲ್ಲಿ ದಾಳಿಂಬೆ ಬೆಳೆದು, ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತ ಕ್ಯಾತಪ್ಪ ಆತಂಕ ಎದುರಿಸುತ್ತಿದ್ದಾರೆ. ಕಳೆದ ವಾರ ಸುರಿದ ಗಾಳಿ ಮಳೆಗೆ ದಾಳಿಂಬೆ ಗಿಡಗಳಲ್ಲಿದ್ದ ಹೂಗಳೆಲ್ಲವೂ ನೆಲಕ್ಕೆ ಉದುರಿ ಮಣ್ಣು ಪಾಲಾಗಿವೆ. ಕಳೆದ ವರ್ಷ 12 ಟನ್ ಇಳುವರಿ ಬಂದಿತ್ತು. ಈ ಬಾರಿಯೂ 12 ರಿಂದ 13 ಟನ್ ಇಳುವರಿ ಬರಲಿದೆ. ಒಳ್ಳೆಯ ರೇಟ್ ಸಿಕ್ರೆ ಲಕ್ಷಾಂತರ ರೂಪಾಯಿ ಆದಾಯವೂ ಬರಲಿದೆ ಎಂದು ಸಂತಸದಲ್ಲಿದ್ದರು ರೈತ ಕ್ಯಾತಪ್ಪ. ಆದರೆ ಒಂದು ಗಾಳಿ ಸಹಿತ ಮಳೆ ಅವರ ಆಸೆಗಳನ್ನೆಲ್ಲಾ ಕಮರಿಸಿದೆ. ದಾಳಿಂಬೆ ಗಿಡಗಳಲ್ಲಿದ್ದ ಹೂಗಳೆಲ್ಲವೂ ಮಣ್ಣು ಪಾಲಾಗಿ ಈಗ ಕೇವಲ 3-4 ಟನ್ ಮಾತ್ರ ಇಳುವರಿ ಬಂದರೆ ಹೆಚ್ಚು ಎಂದು ರೈತ ನೋವು ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಹುಣಸೂರು ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೊಳವಿಗೆಯ ರೈತ ನಾಗೇಶ್ ಅವರ ತಂಬಾಕು ಬೆಳೆ ನಾಶವಾಗಿದೆ. ತಗ್ಗು ಪ್ರದೇಶದ ಹೊಲದಲ್ಲಿ ನೀರು ನಿಂತು ಬೆಳೆ ಕೊಳೆಯುತ್ತಿದೆ. ಕಟಾವಿಗೆ ಬಂದ ತಂಬಾಕು ಹಳದಿ ಬಣ್ಣಕ್ಕೆ ತಿರುಗಿದೆ. ಇದರಿಂದ ಬೆಳೆ ನಷ್ಟದ ಭೀತಿಯಲ್ಲಿದ್ದಾರೆ ರೈತ ನಾಗೇಶ್.
ಎಕರೆಕೆ 1 ಲಕ್ಷ ಖರ್ಚು ಮಾಡಿ 5 ಎಕರೆಯಲ್ಲಿ ತಂಬಾಕು ಬೆಳೆದಿದ್ದೆ. ಈ ಬಾರಿ ಅವಧಿಗಿಂತ ಮೊದಲೇ ಮುಂಗಾರು ಆರಂಭವಾಗಿ ಬೆಳೆಯೆಲ್ಲಾ ನೀರುಪಾಲಾಗಿದೆ. ವಾಣಿಜ್ಯ ಬೆಳೆಯಾಗಿರುವುದರಿಂದ ವಿಮೆಯೂ ಇಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಕಂಗಾಲಾಗಿದ್ದಾರೆ ನಾಗೇಶ್.
