ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಶನಿವಾರ ಉತ್ತರ ಪ್ರದೇಶದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಅಲ್ಲಿ ಮಾತನಾಡುತ್ತಾ, “ಯೋಗಿ ಅವರು ಪ್ರಭಾವಶಾಲಿ. ಪ್ರಯಾಗ್‌ರಾಜ್ ಭೂಮಿ ಶಕ್ತಿಶಾಲಿ ಜನರಿಗೆ ಸೇರಿದೆ” ಎಂದಿದ್ದಾರೆ. ಹಾಗೆಯೇ ಈ ಬಗ್ಗೆ ನವೆಂಬರ್ 24ರ ನಂತರ ಮಾತಾಡುತ್ತೇನೆ ಎಂದು ಹೇಳಿ ಕುತೂಹಲ ಹುಟ್ಟಿಸಿದ್ದಾರೆ.
ನ್ಯಾಯಮೂರ್ತಿ ಗವಾಯಿ ಅವರು ಶನಿವಾರ ಅಲಹಾಬಾದ್ ಹೈಕೋರ್ಟ್‌ನಲ್ಲಿ ಹೊಸ ವಕೀಲರ ಕೊಠಡಿಗಳು ಮತ್ತು ಬಹು ಹಂತದ ಪಾರ್ಕಿಂಗ್ ಸೌಲಭ್ಯವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಪ್ರಭಾರ) ಅರ್ಜುನ್ ರಾಮ್ ಮೇಘವಾಲ್, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಮತ್ತು ಇತರರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಇದನ್ನು ಓದಿದ್ದೀರಾ? ಮುಂದಿನ ನೂತನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಗವಾಯಿ: ಸಿಜೆಐ ಖನ್ನಾ ಶಿಫಾರಸ್ಸು
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು, “ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಿಎಂ ಯೋಗಿ ಅವರು ದೇಶದ ಅತ್ಯಂತ ಶಕ್ತಿಶಾಲಿ ಮತ್ತು ಕಠಿಣ ಪರಿಶ್ರಮಿ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಹಾಗಾಗಿ ನಾನು ಇದರ ಬಗ್ಗೆ ಮಾತನಾಡಲು ಬಯಸುತ್ತೇನೆ. ಯೋಗಿ ಅವರು ಪ್ರಭಾವಿಗಳು. ಪ್ರಯಾಗ್‌ರಾಜ್ ಭೂಮಿ ಶಕ್ತಿಶಾಲಿ ಜನರಿಗೆ ಸೇರಿದೆ” ಎಂದು ಹೇಳಿದರು.
#WATCH | Prayagraj, Uttar Pradesh: Chief Justice of India BR Gavai says, "Meghwal ji (Law and Justice Minister) said that (CM) Yogi ji is the most powerful and hardworking CM of this country. I would like to say that Allahabad is the land of powerful people…" pic.twitter.com/V9ue9nOYaC
— ANI (@ANI) May 31, 2025
ಇನ್ನು, “ಇಂದು ಕೆಲವು ವಿಷಯಗಳನ್ನು ನಾನು ಹೇಳಲು ಬಯಸುವುದಿಲ್ಲ. ಆದರೆ ನವೆಂಬರ್ 24ರ ನಂತರ ನನ್ನ ಅಭಿಪ್ರಾಯಗಳನ್ನು ತಿಳಿಸುತ್ತೇನೆ” ಎಂದರು. ಸಿಜೆಐ ಈ ವರ್ಷ ನವೆಂಬರ್ 24ರಂದು ನಿವೃತ್ತರಾಗಲಿದ್ದಾರೆ.
ಈ ಕಾರ್ಯಕ್ರಮದಲ್ಲೇ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಸಿಜೆಐ ನೆನೆದರು. “ಸದ್ಯ ಸಂಪತ್ತು ಕೆಲವರ ಕೈಯಲ್ಲಿ ಮಾತ್ರ ಇದೆ. ಈ ಸಮಸ್ಯೆಯನ್ನು ನಾವು ಪರಿಹರಿಸದೆಯೇ ಪ್ರಜಾಪ್ರಭುತ್ವವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಎಚ್ಚರಿಸಿದ್ದರು” ಎಂದು ತಿಳಿಸಿದರು.
