ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು..’ ಎಂದು ಕನ್ನಡಿಗರ ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡಿರುವ, ಚಿತ್ರನಟ ಕಮಲ್ ಹಾಸನ್ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ, ಕರುನಾಡು ಸಂರಕ್ಷಣಾ ವೇದಿಕೆಯು ಮೇ 31 ರಂದು ಶಿವಮೊಗ್ಗದ ಡಿಸಿ ಕಚೇರಿ ಎದುರು ಪ್ರತಿಭಟನೆ.
ಕನ್ನಡ ಸಿನಿಮಾಗಳ ಮೂಲಕವೇ ಚಿತ್ರರಂಗದಲ್ಲಿ ಕಮಲ್ ಹಾಸನ್ ನೆಲೆ ಕಂಡುಕೊಂಡಿದ್ದರು. ಅವರು ಸದಾ ಕಾಲ ಕನ್ನಡ ಭಾಷೆಗೆ ಋಣಿಯಾಗಿರಬೇಕು. ಆದರೆ ಕನ್ನಡ ಭಾಷೆಯ ಅಸ್ಮಿತೆಯ ಬಗ್ಗೆಯೇ ಗೊಂದಲಕಾರಿ ಹೇಳಿಕೆ ನೀಡುವುದು ದುರಹಂಕಾರದ ಪರಮಾವಧಿಯಾಗಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಭಾಷೆಯಾಗಿದೆ. ತನ್ನದೇ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇದನ್ನು ಕಮಲ್ ಹಾಸನ್ ಅರಿತುಕೊಳ್ಳಬೇಕು. ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿ, ರಾಜ್ಯ ರಾಜ್ಯಗಳ ನಡುವೆ ಗೊಂದಲ ಸೃಷ್ಟಿಸುವ ಕಾರ್ಯ ನಡೆಸಬಾರದು ಎಂದು ಸಂಘಟನೆ ತಾಕೀತು ಮಾಡಿದೆ.ಕಮಲ್ ಹಾಸನ್ ವಿರುದ್ದ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕು. ಅವರು ಅಭಿನಯಿಸಿರುವ ಥಗ್ ಲೈಫ್ ಸಿನಿಮಾವನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಂದು ಸಂಘಟನೆ ವತಿಯಿಂದ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಾಗೆಯೇ ಕಮಲ್ ಹಾಸನ್ ಹೇಳಿಕೆ ಕುರಿತಂತೆ ಚಿತ್ರನಟ ಶಿವರಾಜ್ ಕುಮಾರ್ ಅವರು ಸೂಕ್ತ ಸ್ಪಷ್ಟನೆ ನೀಡಬೇಕು. ಜೊತೆಗೆ ನಟಿ ರಮ್ಯ ಅವರು ಕಮಲ್ ಹಾಸನ್ ಅವರನ್ನು ಸಮರ್ಥನೆ ಮಾಡಿಕೊಳ್ಳುವ ರೀತಿ ಹೇಳಿಕೆ ನೀಡಿರುವುದು ಖಂಡನಾರ್ಹವಾದುದಾಗಿದೆ ಎಂದು ಇದೆ ವೇಳೆ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ಎಸ್ ಪಿ ಶಿವಮೂರ್ತಿ, ಮುಖಂಡರಾದ ಹೆಚ್ ಎನ್ ಪ್ರಭು, ವೆಂಕಟೇಶ್, ಮೂರ್ತಿ, ರಾಜು, ಶಿವಣ್ಣ, ಮಂಜುನಾಥ್ ಕೆ ಟಿ ಸೇರಿದಂತೆ ಮೊದಲಾದವರಿದ್ದರು.