ಆಪರೇಷನ್ ಸಿಂಧೂರ ಕುರಿತ ಪೋಸ್ಟ್‌ವೊಂದಕ್ಕೆ ವಿದ್ಯಾರ್ಥಿನಿಯೊಬ್ಬರು ಮುಸ್ಲಿಂ ಸಮುದಾಯದ ಬಗ್ಗೆ ಆಕ್ಷೇಪಾರ್ಹವಾಗಿ ಪ್ರತಿಕ್ರಿಯಿಸಿದ್ದು, ಆಕೆಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿದ್ಯಾರ್ಥಿನಿಯನ್ನು ಪುಣೆಯ ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠ ಪನೋಲಿ ಎಂದು ಹೆಸರಿಸಲಾಗಿದೆ. ಆಕೆಯನ್ನು ಗುರುಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
“ವಿದ್ಯಾರ್ಥಿನಿಯು ಇಸ್ಲಾಂ ಧರ್ಮವನ್ನು ಗುರಿಯಾಗಿಸಿಕೊಂಡು ಬಾಲಿವುಡ್‌ನ ಮುಸ್ಲಿಂ ನಟರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ. ಆಕ್ಷೇಪಾರ್ಹ ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆಕೆಯ ವಿರುದ್ಧ ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಾದ ಕೂಡಲೇ ಪನೋಲಿ ಮತ್ತು ಆಕೆಯ ಕುಟುಂಬಸ್ಥರು ತಲೆ ಮರೆಸಿಕೊಂಡಿದ್ದರು ಎಂದು ವರದಿಯಾಗಿದೆ.
ತಮ್ಮ ಹೇಳಿಕೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪನೋಲಿ ಅವರು ಕ್ಷಮೆಯಾಚಿಸಿದ್ದರು. ಸಾಮಾಜಿಕ ಜಾಲತಾಣಗಳಿಂದ ಪೋಸ್ಟ್‌ಅನ್ನು ಡಿಲೀಟ್ ಮಾಡಿದ್ದರು.