ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಜನರು ಸಂಚಾರಕ್ಕೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
“ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಸರ್ಕಾರಿ ಪ್ರಾಥಮಿಕ ಶಾಲೆ ನಡುವೆ ನಿರ್ಮಿಸಬೇಕಾದ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳೆದ ಕೆಲ ತಿಂಗಳಿಂದ ನನೆಗುದಿಗೆ ಬಿದ್ದಿದೆ. ರಸ್ತೆಗೆ ಜಲ್ಲಿ ಕಲ್ಲು ಚೆಲ್ಲಿದ ಕಾರಣ ಮಳೆ ಹಾಗೂ ಚರಂಡಿ ನೀರು ಸಂಗ್ರಹವಾಗಿ ಜನ-ಜಾನುವಾರು ಓಡಾಡಲು ಅಡ್ಡಿಯಾಗಿದೆ. ಕೂಡಲೇ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು” ಎಂದು ಸ್ಥಳೀಯ ಬಸವರಾಜ ಭಾವಿದೊಡ್ಡಿ ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಮೋದಿ ವಿರುದ್ಧ ಒಂದಾಗಲು ಪ್ರತಿಪಕ್ಷಗಳಿಂದ ಸಭೆ; ಖಾಸಗಿ ಹೋಟೆಲ್ನಲ್ಲಿ ಭರದ ಸಿದ್ಧತೆ
“ಗ್ರಾಮದ ಮಧ್ಯ ಭಾಗದಲ್ಲಿ ಲೋಕೋಪಯೋಗಿ ಇಲಾಖೆಯ ಕೈಗೊಂಡಿರುವ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ನಿರ್ವಹಣೆಯಲ್ಲಿದೆ. ಸಿಸಿ ರಸ್ತೆ, ಚರಂಡಿ, ಗುಂಡಿ ಬಿದ್ದ ರಸ್ತೆ ಮೇಲೆ ಹಲವರು ಬಿದ್ದಿರುವ ಘಟನೆಗಳು ಜರುಗಿವೆ. ಇನ್ನು ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರರು, ಗ್ರಾಮ ಪಂಚಾಯಿತಿ ಪಿಡಿಒ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಪೂರ್ಣ ರಸ್ತೆ ಮೇಲೆ ಅನಾಹುತ ಸಂಭವಿಸಿದರೆ ಯಾರು ಜವಾಬ್ದಾರರು?” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.