- ಹಿಮಂತ್ ಬಿಸ್ವಾ ಶರ್ಮಾ ಅವರ ಹೇಳಿಕೆ ಖಂಡಿಸಿದ ಒಮರ್ ಅಬ್ದುಲ್ಲಾ, ಓವೈಸಿ
- ಗುವಾಹಟಿಯಲ್ಲಿ ಬೆಲೆ ಏರಿಕೆ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಬಿಸ್ವಾ ಶರ್ಮಾ
ತರಕಾರಿ ಬೆಲೆ ಏರಿಕೆಯು ರಾಜಕೀಯಕ್ಕೂ ಕಾಲಿಟ್ಟಿದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ನೀಡಿರುವ ಹೇಳಿಕೆಯು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ತರಕಾರಿ ಬೆಲೆ ಏರಿಕೆ ಕುರಿತು ಶನಿವಾರ ಗುವಾಹಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹಿಮಂತ ಬಿಸ್ವಾ ಶರ್ಮಾ, “ತರಕಾರಿ ಬೆಲೆ ಏರಿಕೆಗೆ ಮಿಯಾಗಳು (ಬಂಗಾಳಿ ಮಾತನಾಡುವ ಮುಸ್ಲಿಮರು) ಕಾರಣ” ಎಂದು ಹೇಳಿದ್ದರು.
“ಅಸ್ಲಾಂನ ಗ್ರಾಮೀಣ ಪ್ರದೇಶದಲ್ಲಿ ತರಕಾರಿ ಬೆಲೆ ಏರಿಕೆಯಾಗಿಲ್ಲ. ನಗರ ಪ್ರದೇಶದಲ್ಲಿ ಬೆಲೆ ಏರಿಕೆಯಾಗಲು ಬಂಗಾಳಿ ಮಾತನಾಡುವ ಮುಸ್ಲಿಂ ವ್ಯಾಪಾರಿಗಳು ಕಾರಣರಾಗಿದ್ದಾರೆ. ಅಸ್ಸಾಮಿನ ವ್ಯಾಪಾರಿಗಳು ಜನರು ಬೆಲೆ ನೋಡಿ ಓಡಿ ಹೋಗುವಂತೆ ಮಾಡುತ್ತಿರಲಿಲ್ಲ” ಎಂದು ಹೇಳಿದ್ದರು.
“ಗುವಾಹಟಿಯ ಎಲ್ಲ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವುದರ ಮೂಲಕ ನಮ್ಮ ಅಸ್ಸಾಮಿ ಜನರು ಮುಂದೆ ಬಂದು ತಮ್ಮ ವ್ಯವಹಾರಗಳನ್ನು ಪ್ರಾರಂಭಿಸುವಂತೆ ಮಾಡುತ್ತೇನೆ” ಎಂದು ಬಿಸ್ವಾ ಶರ್ಮಾ ಹೇಳಿದ್ದರು.
ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಬಿಸ್ವಾ ಶರ್ಮಾ ಅವರ ಹೇಳಿಕೆಗೆ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಯಾವುದೇ ವಸ್ತುಗಳ ಬೆಲೆ ಏರಿಕೆಗೆ ಯಾವುದೇ ಸಮುದಾಯವನ್ನು ಹೊಣೆಯಾಗಿಸಬಾರದು. ತೈಲವನ್ನು ಇದಕ್ಕೆ ಹೊರತಾಗಿಸಬಹುದು. ಏಕೆಂದರೆ ತೈಲವನ್ನು ಮುಸ್ಲಿಂ ರಾಷ್ಟ್ರಗಳಿಂದ ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.
ಹಿಮಂತ್ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ಎಐಯುಡಿಎಫ್ (ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರೆಂಟ್) ಮುಖ್ಯಸ್ಥ ಬದ್ರುದ್ದೀನ್ ಅಜ್ಜಲ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
“ಮಿಯಾಗಳು ತರಕಾರಿ ಬೆಲೆಯನ್ನು ನಿಯಂತ್ರಿಸುವುದಿಲ್ಲ. ಮುಖ್ಯಮಂತ್ರಿ ಅವರ ಹೇಳಿಕೆ ಮಿಯಾ ಸಮುದಾಯಕ್ಕೆ ನೋವುಂಟು ಮಾಡಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಇಂತಹ ಹೇಳಿಕೆಗಳು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತವೆ. ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾದರೆ ಅದಕ್ಕೆ ಮುಖ್ಯಮಂತ್ರಿಗಳು ಮತ್ತು ಸರ್ಕಾರವೇ ನೇರ ಹೊಣೆ” ಎಂದು ಅವರು ಹೇಳಿದರು.
ಹಿಮಂತ್ ಬಿಸ್ವಾ ಶರ್ಮಾ ಅವರ ಹೇಳಿಕೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ. “ಈ ದೇಶದಲ್ಲಿರುವ ಒಂದು ವರ್ಗದ ಜನರು ತಮ್ಮ ಎಮ್ಮೆ ಹಾಲು ಕೊಡದಿದ್ದರೆ, ಕೋಳಿ ಮೊಟ್ಟೆ ಇಡದಿದ್ದರೆ, ಹೀಗೆ ತಮ್ಮ ವೈಫಲ್ಯಗಳಿಗೆಲ್ಲಾ ಮುಸ್ಲಿಮರನ್ನು ಕಾರಣರನ್ನಾಗಿಸುತ್ತಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಮುಸ್ಲಿಮರ ಜತೆ ಆಪ್ತ ಬಾಂಧವ್ಯ ಹೊಂದಿದ್ದಾರೆ. ಇಲ್ಲಿಯವರಿಗಾಗಿ ಅವರು ಅಲ್ಲಿಂದ ಕೆಲವು ಟೊಮ್ಯಾಟೊ, ಸೊಪ್ಪು ಮತ್ತು ಆಲೂಗಡ್ಡೆಗಳನ್ನು ತರಲಿ” ಎಂದು ವ್ಯಂಗ್ಯವಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೆಹಲಿ | ಯಮುನಾ ನದಿಯ ನೀರಿನ ಮಟ್ಟ ಇಳಿಕೆ; ಪರಿಹಾರ ಶಿಬಿರಗಳಲ್ಲಿ ಮೂಲಸೌಕರ್ಯಗಳ ಕೊರತೆ
“ನಿರುದ್ಯೋಗ, ಬೆಲೆ ಏರಿಕೆ, ಅಕ್ರಮ ವಲಸಿಗರು ಹೀಗೆ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಹಾಗಾಗಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ತಂತ್ರಗಳಲ್ಲಿ ತೊಡಗಿದೆ. ಜನರ ನಡುವೆ ಒಡಕು ಮೂಡಿಸುವ ಉದ್ದೇಶದಿಂದ ಹಿಮಂತ್ ಬಿಸ್ವಾ ಶರ್ಮಾ ಮತ್ತು ಬದ್ರುದ್ದೀನ್ ಅಜ್ಜಲ್ ಇಬ್ಬರೂ ಒಟ್ಟಾಗಿ ಈ ‘ಮಿಯಾ- ಅಸ್ಸಾಮಿ’ ವಿವಾದವನ್ನು ಸೃಷ್ಟಿಸಿದ್ದಾರೆ” ಎಂದು ಕಾಂಗ್ರೆಸ್ ಮುಖಂಡ ಭೂಪೇನ್ ಕುಮಾರ್ ಬೋರಾ ಹೇಳಿದರು.
“ಬಿಜೆಪಿ ತನ್ನ ವೈಫಲ್ಯಗಳನ್ನು ಮರೆಮಾಚಲು ಕೋಮು ಸೂಕ್ಷ್ಮ ವಿಷಯಗಳನ್ನು ಮುನ್ನೆಲೆ ತರುತ್ತಿದೆ” ಎಂದು ಅಮ್ ಆದ್ಮಿ ಪಕ್ಷದ (ಎಎಪಿ) ವಕ್ತಾರ ಹೇಮಂತ ಫುಕನ್ ಹೇಳಿದ್ದಾರೆ.