- ಹಾನಿಗೊಳಗಾದ ಬೇರುಗಳಿಂದ ಮರವು ಹೆಚ್ಚು ಕಾಲ ಉಳಿಯುವುದಿಲ್ಲ
- ಮರಗಳ ಆರೋಗ್ಯದ ಬಗ್ಗೆ ನಿಗಾ ಇಡುವಲ್ಲಿ ವಿಫಲವಾದ ಬಿಬಿಎಂಪಿ
ಬೆಂಗಳೂರಿನ ಮಿಲ್ಲರ್ಸ್ ರಸ್ತೆ ಜಂಕ್ಷನ್ನಲ್ಲಿ ಬೃಹತ್ ಮರ ಉರುಳಿಬಿದ್ದು 18 ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿದ್ದು, ನಗರದಲ್ಲಿ ಪಾದಚಾರಿಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೊಂಡಿರುವ ಕೆಲವು ಅವೈಜ್ಞಾನಿಕ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಇಂತಹ ಹಲವು ಘಟನೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
“ಇಂತಹ ಅವಘಡಗಳಿಗೆ ಮರದ ಬೇರುಗಳ ಸುತ್ತ ಕಾಂಕ್ರಿಟೀಕರಣವೇ ಪ್ರಮುಖ ಕಾರಣ. ಬಿಬಿಎಂಪಿ ಈ ಸಮಸ್ಯೆ ಬಗೆಹರಿಸದೆ, ಕಣ್ಣು ಮುಚ್ಚಿ ಕೂತಿದೆ. ಮರಗಳ ಸುತ್ತ ಕಾಂಕ್ರಿಟೀಕರಣದ ಪರಿಣಾಮದ ಬಗ್ಗೆ ಪದೇಪದೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ಆದರೆ, ಅವರು ನಿರ್ಲಕ್ಷಿಸಿದ್ದಾರೆ. ದುರ್ಬಲವಾದ ಮತ್ತು ಹಾನಿಗೊಳಗಾದ ಬೇರುಗಳಿಂದ, ಮರವು ಹೆಚ್ಚು ಕಾಲ ಉಳಿಯುವುದಿಲ್ಲ. ಮರಗಳು ಬೀಳಬಹುದು ಎಂಬುದು ಸ್ಪಷ್ಟವಾಗಿದೆ” ಎಂದು ಪರಿಸರವಾದಿ ವಿಜಯ್ ನಿಶಾಂತ್ ಹೇಳಿದರು.
“ಬಿಬಿಎಂಪಿ ಮರಗಳ ಸವರುವಿಕೆಗೆ ಸೀಮಿತವಾಗಿದೆ ಮತ್ತು ಮರದ ಆರೋಗ್ಯದ ಬಗ್ಗೆ ನಿಗಾ ಇಡುವಲ್ಲಿ ವಿಫಲವಾಗಿದೆ. ಮರವನ್ನು ನೋಡುವ ಮೂಲಕ ಅದು ಆರೋಗ್ಯಕರವಾಗಿದೆಯೇ ಎಂದು ನಿರ್ಧರಿಸುವುದು ಸುಲಭವಲ್ಲ. ಅಧಿಕಾರಿಗಳು ಕೆಲವು ದಿನಗಳ ಕಾಲ ಮರವನ್ನು ವೀಕ್ಷಿಸಿ ನಂತರ ಅದು ಆರೋಗ್ಯಕರವಾಗಿದೆಯೇ ಎಂದು ನಿರ್ಧರಿಸಬೇಕು”ಎಂದು ಎಂದು ನಿಶಾಂತ್ ಹೇಳಿದರು.
ಖ್ಯಾತ ಪರಿಸರ ತಜ್ಞ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ ಮಾತನಾಡಿ, “ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ಪೌರಕಾರ್ಮಿಕರು ಬೇರುಗಳನ್ನು ಕತ್ತರಿಸುತ್ತಾರೆ. ಹಾನಿಗೊಳಗಾದ ಬೇರುಗಳಿಗೆ ಸರಿಯಾಗಿ ರಕ್ಷಣೆ ಮಾಡುವುದಿಲ್ಲ. ಅಲ್ಲದೆ, ಒಳಚರಂಡಿ ಮಾರ್ಗಗಳಿಗೆ ದಾರಿ ಮಾಡಿಕೊಡಲು ಮರದ ಬೇರುಗಳನ್ನು ಕತ್ತರಿಸಿ ಮರದ ಸುತ್ತಲೂ ಕಾಂಕ್ರೀಟ್ ಸುರಿಯುತ್ತಾರೆ. ಪ್ರತಿ ಬಾರಿ ಬೇರುಗಳನ್ನು ಕತ್ತರಿಸಿದಾಗ, ಸೋಂಕನ್ನು ತಡೆಗಟ್ಟಲು ಆಂಟಿಫಂಗಲ್ ದ್ರಾವಣದಿಂದ ಅವುಗಳನ್ನು ಹೊದಿಸಬೇಕು. ಆದರೆ, ಏನೂ ಮಾಡಲಾಗುತ್ತಿಲ್ಲ. ಕಾಂಕ್ರೀಟ್ ಬೇರುಗಳ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಅಂತಿಮವಾಗಿ ಅಪಘಾತಗಳು ಉಂಟಾಗುತ್ತವೆ”ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೆಬ್ಬಾಳ ಸರ್ವೀಸ್ ರಸ್ತೆಯಲ್ಲಿ ಮುಂದಿನ ವಾರ ಸಂಚಾರ ಆರಂಭ ಸಾಧ್ಯತೆ
“ನಗರದಲ್ಲಿ ನಗರ ವೃಕ್ಷ ನಿರ್ವಹಣಾ ವ್ಯವಸ್ಥೆಯ ಅಗತ್ಯವಿದೆ. ಬಿಬಿಎಂಪಿ ಕೂಡಲೇ ಮರ ಗಣತಿ ನಡೆಸಿ ಪ್ರತಿಯೊಂದು ಮರದ ಆರೋಗ್ಯವನ್ನು ದಾಖಲಿಸಬೇಕು. ಅಲ್ಲದೆ, ರಸ್ತೆ ಮೂಲಸೌಕರ್ಯ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗ, ಬಿಬಿಎಂಪಿಯು ವೃಕ್ಷ ತಜ್ಞರನ್ನು ಸಂಪರ್ಕಿಸಬೇಕು. ವೆಚ್ಚದ ಕನಿಷ್ಠ 2 ಪ್ರತಿಶತವನ್ನು ವಿಸ್ತರಿಸಿದ ಮರಗಳನ್ನು ಬಲಪಡಿಸುವುದನ್ನು ಖಚಿತಪಡಿಸಿಕೊಳ್ಳಲು ಮೀಸಲಿಡಬೇಕು”ಎಂದು ಅವರು ಹೇಳಿದರು.
ಬಿಬಿಎಂಪಿ ವಿಶೇಷ ಆಯುಕ್ತೆ (ಅರಣ್ಯ) ಪ್ರೀತಿ ಗೆಹ್ಲೋಟ್ ಮಾತನಾಡಿ, “ಅಪಘಾತಗಳನ್ನು ತಡೆಗಟ್ಟಲು ಪಾಲಿಕೆಯು ದುರ್ಬಲ ಮರಗಳು ಮತ್ತು ಕೊಂಬೆಗಳನ್ನು ನಿಯಮಿತವಾಗಿ ಗುರುತಿಸುತ್ತಿದೆ. ಯಾವ ಮರ ಉರುಳುತ್ತದೆ ಎಂಬುದನ್ನು ಕಂಡುಹಿಡಿಯುವುದು ಕಷ್ಟ. ಸತ್ತ ಮತ್ತು ಅಪಾಯಕಾರಿ ಮರಗಳನ್ನು ಗುರುತಿಸಲು ನಾವು ನಿಯಮಿತ ತಪಾಸಣೆ ನಡೆಸುತ್ತೇವೆ” ಎಂದು ಹೇಳಿದರು.
ಶುಕ್ರವಾರ ಉರುಳಿಬಿದ್ದ ಮರವು ಒಳಗಿನಿಂದ ಕೊಳೆತಿದ್ದು, ಬೇರುಗಳು ಹಾನಿಗೊಳಗಾಗಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.