ವಿಶೇಷ ಕಾರ್ಯಪಡೆ ರಚನೆಯಿಂದ ಕೋಮು ಹಿಂಸಾಚಾರಕ್ಕೆ ತಡೆ ನೀಡಲು ಸಾಧ್ಯವೇ?

Date:

Advertisements

ರಾಜ್ಯದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಕೋಮು ಗಲಾಟೆ ಮತ್ತು ಹತ್ಯೆ ತಡೆಗೆ, ಕೋಮು ಸೌಹಾರ್ದತೆ ಕದಡುವವರ ವಿರುದ್ಧ ಕ್ರಮಕ್ಕೆ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿಪಿ) ರ್‍ಯಾಂಕ್‌ನ ಅಧಿಕಾರಿ ನೇತೃತ್ವದ ವಿಶೇಷ ಕಾರ್ಯಪಡೆಯೊಂದನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕೋಮು ಗಲಭೆ, ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ವಿಶೇಷ ಕ್ರಮ ಕೈಗೊಳ್ಳುವಂತೆ ಎಲ್ಲೆಡೆ ಆಗ್ರಹ ಕೇಳಿಬಂದಿತ್ತು. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆಯನ್ನು ರಚಿಸಿ ಆದೇಶಿಸಿದೆ. ಹಾಲಿ ಅಸ್ತಿತ್ವದಲ್ಲಿರುವ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌)ಯ 656 ಹುದ್ದೆಗಳಲ್ಲಿ 248 ಸಿಬ್ಬಂದಿ, ಅಧಿಕಾರಿಗಳನ್ನು ಈ ವಿಶೇಷ ಕಾರ್ಯಪಡೆಗೆ ವರ್ಗಾಯಿಸಲಾಗಿದೆ.

ರಾಜ್ಯಮಟ್ಟದಲ್ಲಿ ಕಾರ್ಯ ನಿರ್ವಹಿಸಲಿರುವ ಈ ವಿಶೇಷ ಕಾರ್ಯಪಡೆಯು ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗದಲ್ಲಿ ತನ್ನ ಘಟಕಗಳನ್ನು ಹೊಂದಿರಲಿದೆ. ಈ ಕಾರ್ಯಪಡೆ ದ್ವೇಷ ಭಾಷಣ, ಉದ್ರೇಕಕಾರಿ ಘಟನೆಗಳು, ಕೋಮು ಸಂಬಂಧಿತ ಘಟನೆಗಳ ಮೇಲೆ ನಿಗಾವಹಿಸಬೇಕಿದೆ. ಇದಕ್ಕಾಗಿ ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾವಹಿಸಲು, ಗುಪ್ತಚರ ಮಾಹಿತಿ ಸಂಗ್ರಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ತಾಂತ್ರಿಕ ಕೋಶವನ್ನು ಒಳಗೊಂಡ ಗುಪ್ತಚರ ಘಟಕ ಹೊಂದಲಿದೆ.

Advertisements

ಸಂಭಾವ್ಯ ಕೋಮು ಹಿಂಸಾಚಾರದ ಬಗ್ಗೆ ಕಣ್ಗಾವಲು ಮತ್ತು ಮಾನವ ಗುಪ್ತಚರ ಮೂಲಕ ಎಚ್ಚರಿಕೆ ವ್ಯವಸ್ಥೆ ರಚಿಸಬೇಕು. ಮೂಲಭೂತವಾದ ಗುರುತಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿದೆ. ಅಲ್ಲದೆ, ವಲಯ ಐಜಿಪಿ ಅವರು ಕೋಮು ಗಲಭೆ ಸಂದರ್ಭದಲ್ಲಿ ವಿಶೇಷ ಕಾರ್ಯಪಡೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ತಿಳಿಸಲಾಗಿದೆ.

ಸರ್ಕಾರ ಈ ರೀತಿಯ ವಿಶೇಷ ಪಡೆಯನ್ನು ರಚಿಸುವುದರಿಂದ ಕೋಮು ಹಿಂಸಾಚಾರವನ್ನು ತಡೆಯಲು ಸಾಧ್ಯವೇ ಎಂಬ ಪ್ರಶ್ನೆಯೂ ಇದರೊಂದಿಗೆ ಎದ್ದಿದೆ. ರಾಜ್ಯದ ಅತ್ಯಂತ ಕೋಮು ಸೂಕ್ಷ್ಮ ಪ್ರದೇಶ ಎಂದೇ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಕೊಲೆಯಿಂದ ಉಂಟಾದ ಕ್ಷೋಭೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆಯಾದರೂ, ಇದು ಎಷ್ಟು ಪರಿಣಾಮ ಬೀಳಲಿದೆ ಎಂದು ಜನರು ಪ್ರಶ್ನಿಸತೊಡಗಿದ್ದಾರೆ.

image 3 4
Grok AI Generated Image

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅಂತರದಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳು ಜನರ ಶಾಂತಿ, ನೆಮ್ಮದಿಯನ್ನು ಕೆಡಿಸಿದ್ದು ಮಾತ್ರವಲ್ಲದೇ, ಜಿಲ್ಲೆಯ ವಾಣಿಜ್ಯ ವ್ಯಾಪಾರಕ್ಕೆ ಬಹುದೊಡ್ಡ ಕೊಡಲಿ ಏಟು ನೀಡಿದೆ. ಜನಸಾಮಾನ್ಯರು ಭಯದಿಂದ ಬದುಕುವಂತಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ನಿರಂತರವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ಕಲಹಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಈ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಆದರೆ ಇದರ ಪರಿಣಾಮ ಏನಾಗಲಿದೆ ಎಂಬುವುದು ಕೂಡ ಅಷ್ಟೇ ಕುತೂಹಲವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ವಿಭಜನೆ ಆಗಿದೆ. ಜಿಲ್ಲೆಯಲ್ಲಿ ಮತೀಯ ಸಂಘಟನೆಗಳು ಬಲಿಷ್ಠವಾಗಿವೆ. ರಾಜಕೀಯ ಬೆಂಬಲದೊಂದಿಗೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಈ ಸಂಘಟನೆಗಳು ಬೇರೂರಿವೆ. ದ್ವೇಷ, ಅಪನಂಬಿಕೆಗಳು ಜಿಲ್ಲೆಯ ಜನರನ್ನು ಮತೀಯವಾಗಿ ವಿಭಜಿಸಿದೆ. ಹೀಗಿರುವಾಗ ಸರ್ಕಾರದ ಕ್ರಮಗಳು ತಳಮಟ್ಟದಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂಬುವುದು ಕೂಡ ಬಹಳ ಮುಖ್ಯ.

ಈ ಬಗ್ಗೆ ಶಿವಮೊಗ್ಗ ಜಿಲ್ಲೆಯ ಸಾಮಾಜಿಕ ಹೋರಾಟಗಾರ, ನಕ್ಸಲ್ ಪುನರ್ ವಸತಿ ಹಾಗೂ ಶರಣಾಗತಿ ಸಮಿತಿಯ ಸದಸ್ಯ, ವಕೀಲರೂ ಆದ ಕೆ. ಪಿ. ಶ್ರೀಪಾಲ್ ಈದಿನ ಡಾಟ್‌ ಕಾಮ್ ಜೊತೆಗೆ ಮಾತನಾಡಿ, “ಈ ಕಾರ್ಯಪಡೆಗಳು ಗಲಾಟೆ ನಡೆದ ನಂತರ ಬರುವಂಥದ್ದಾಗಿ ಬಿಟ್ಟಿದೆ. ಈ ಹಿಂದೆ ಮಾಡಿದ್ದ ನಕ್ಸಲ್ ನಿಗ್ರಹ ಪಡೆ ಕೂಡ ಇದೇ ರೀತಿ ಕೆಲಸ ಮಾಡಿತ್ತು. ಸರ್ಕಾರ ಸುಮ್ಮನೆ ದುಡ್ಡನ್ನು ವ್ಯಯ ಮಾಡಿತ್ತು. ಅದೇ ರೀತಿ ಇದು ಕೂಡ ಆಗಬಹುದು. ಆ ರೀತಿಯಲ್ಲಿ ಆಗಬಾರದು ಅಂದರೆ ಇದು ನಿಷ್ಪಕ್ಷಪಾತವಾಗಿ ಕೆಲಸ ಮಾಡಿದರಷ್ಟೇ ಪ್ರಯೋಜನ ಸಿಗಬಹುದು” ಎಂದು ಅಭಿಪ್ರಾಯಿಸಿದರು.

shripal kp and k l ashok

“ಈಗ ರಚಿಸಲಾಗಿರುವ ವಿಶೇಷ ಪೊಲೀಸ್‌ ಕಾರ್ಯಪಡೆಯು ಗಲಾಟೆ ಆಗದ ರೀತಿಯಲ್ಲಿ ನೋಡಿದರಷ್ಟೇ ಜನರಿಗೆ ಪ್ರಯೋಜನಕಾರಿಯಾಗಬಹುದು. ದ್ವೇಷ ಹರಡುವವರನ್ನು ಬಂಧಿಸಿ, ಶೀಘ್ರವೇ ಕಾನೂನು ಕ್ರಮವನ್ನು ತೆಗೆದುಕೊಳ್ಳುವಂಥದ್ದು, ಜನರಲ್ಲಿ ಕೋಮು ಸಾಮರಸ್ಯದ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮ, ಸಣ್ಣ ಸಣ್ಣ ಘಟನೆಗಳನ್ನು ಬಳಸಿಕೊಂಡು ಕೋಮು ದ್ವೇಷ ಹರಡುವ ಮಾಧ್ಯಮಗಳ ಮೇಲೂ ನಿಯಂತ್ರಣ ಮಾಡಿದಲ್ಲಿ ಮಾತ್ರ ಇದು ಫಲಪ್ರದವಾಗಬಹುದು. ಇಲ್ಲದೇ ಇದ್ದರೆ ಸರ್ಕಾರದ ಹಣ ವ್ಯಯವಾಗಬಹುದು ಅಷ್ಟೇ. ವಿಶೇಷ ಪೊಲೀಸ್‌ ಕಾರ್ಯಪಡೆ ರಚಿಸಿದ ಕೂಡಲೇ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ ಅನ್ನುವುದು ಮೂರ್ಖತನದ ಪರಮಾವಧಿ” ಎಂದು ತಿಳಿಸಿದರು.

social media 2

“ದ್ವೇಷ ಹರಡುವವರು, ಸೋಷಿಯಲ್ ಮೀಡಿಯಾಗಳಲ್ಲಿ ಕೆಟ್ಟ ಕೆಟ್ಟದಾಗಿ ಕಮೆಂಟ್ ಮಾಡುವ ಯಾರೇ ಇರಲಿ, ಪ್ರತಿಯೊಬ್ಬರನ್ನೂ ಕಾನೂನಿನ ಅಡಿಗೆ ತಂದಲ್ಲಿ ನಿಯಂತ್ರಣ ಸಿಗಬಹುದು. ಇನ್ನೊಮ್ಮೆ ಆತ ಕಮೆಂಟ್ ಮಾಡುವಾಗ ಯೋಚಿಸುವಂಥಾಗಬೇಕು. ಮಾಧ್ಯಮದಲ್ಲಿ ನಿರೂಪಣೆ ಮಾಡುವವರ ಪ್ರಚೋದನೆಗಳು, ಸೋಷಿಯಲ್ ಮೀಡಿಯಾಗಳಲ್ಲಿ ದ್ವೇಷ ಹರಡುವವರಿಗೆ ವಿಶೇಷ ಪೊಲೀಸ್‌ ಕಾರ್ಯಪಡೆಯು ಕಡಿವಾಣ ಹಾಕಿದರೆ ಸ್ವಲ್ಪಮಟ್ಟಿಗೆ ಕೋಮುದ್ವೇಷ ಹರಡುವುದನ್ನು ನಿಯಂತ್ರಣ ಮಾಡಬಹುದು” ಎಂದು ಕೆ. ಪಿ. ಶ್ರೀಪಾಲ್ ತಿಳಿಸಿದರು.

ಮಂಗಳೂರಿನ ನಿವೃತ್ತ ಪ್ರಾಂಶುಪಾಲ, ಸಾಮಾಜಿಕ ಚಿಂತಕರಾದ ಡಾ. ಉದಯ್ ಕುಮಾರ್ ಇರ್ವತ್ತೂರು ಈದಿನ ಡಾಟ್‌ ಕಾಮ್ ಜೊತೆಗೆ ಮಾತನಾಡುತ್ತಾ, “ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡು ಆ್ಯಂಟಿ ನಕ್ಸಲ್ ಪಡೆಯಂತಹಾ ವಿಶೇಷ ಕಾರ್ಯಪಡೆಯೊಂದನ್ನು ರಚಿಸಲು ಮುಂದಾಗಿದೆ. ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲದೇ ಇದ್ದಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಪೊಲೀಸ್ ಇಲಾಖೆಗೆ ಇದೆ. ಆದರೆ, ಪೊಲೀಸ್ ಇಲಾಖೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಂತಹ ಒಂದು ಪರಿಸ್ಥಿತಿಯನ್ನು ಯಾರು ನಿರ್ಮಾಣ ಮಾಡುತ್ತಿದ್ದಾರೆ? ಯಾಕೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ಕೂಡ ಗಟ್ಟಿಯಾದಂತಹ ಚರ್ಚೆ ನಡೆಯಬೇಕಾದ ಅವಶ್ಯಕತೆ ಇದೆ. ಸಮಾಜದ ಶಿಕ್ಷಿತ ವರ್ಗ ಈ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ” ಎಂದು ತಿಳಿಸಿದರು.

image 5 2
ಡಾ. ಉದಯ್ ಕುಮಾರ್ ಇರ್ವತ್ತೂರು & ವಿದ್ಯಾ ದಿನಕರ್

“ಎರಡನೇಯದಾಗಿ, ಇವತ್ತು ನಮ್ಮ ಜನರಿಗೆ ಉತ್ತಮ ರಸ್ತೆ ಸೌಕರ್ಯ, ಒಳ್ಳೆಯ ಶಾಲೆಗಳು, ಆಸ್ಪತ್ರೆಗಳು ಬೇಕು. ಉದ್ಯೋಗಗಳು ಬೇಕು, ಸರ್ಕಾರದ ಎಲ್ಲ ಇಲಾಖೆಗಳು ಜನರಿಗಾಗಿ ಸರಿಯಾಗಿ ಕೆಲಸ ನಿರ್ವಹಿಸುವಂತಾಗಬೇಕಿದೆ. ಈ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬರಬೇಕೇ ಹೊರತು ಜಾತಿ ವೈಷಮ್ಯ, ಧರ್ಮಗಳ ನಡುವಿನ ಸಂಘರ್ಷ ಇನ್ನಿತರ ವಿಷಯಗಳು ಅಲ್ಲ. ಇವೆಲ್ಲವೂ ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟ ವಿಷಯಗಳು. ಹಾಗಾಗಿ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಕಾರ್ಯಗಳು ಸಂಘಟನೆಗಳಿಂದ ಆಗಬೇಕಿದೆ” ಎಂದು ಅಭಿಪ್ರಾಯಿಸಿದ್ದಾರೆ.

“ಈಗ ಸರ್ಕಾರ ರಚಿಸಲು ಉದ್ದೇಶಿಸಿರುವ ಕಾರ್ಯಪಡೆಯು ಸರಿಯಾಗಿ ಕಾರ್ಯನಿರ್ವಹಿಸದರೆ ಒಂದು ಹಂತದ ಮಟ್ಟಿಗೆ ಈಗ ಇರುವ ವಾತಾವರಣವನ್ನು ಸ್ವಲ್ಪವಾದರೂ ತಹಬದಿಗೆ ತರಲು ಸಹಕಾರಿ ಆಗಬಹುದು. ಆದರೆ, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವವರನ್ನು, ಒಡೆದು ಆಳುವವರನ್ನು ಗುರುತಿಸಿ, ಅದಕ್ಕೆ ಮದ್ದು ನೀಡಬೇಕಿದೆ. ಜಾತ್ರೆಗಳಲ್ಲಿ ಯಾರು ವ್ಯಾಪಾರ ಮಾಡಬೇಕು, ಶಾಲೆಯಲ್ಲಿ ಯಾರು ಎಲ್ಲಿ ಕುಳಿತುಕೊಳ್ಳಬೇಕು, ಯುವಕ-ಯುವತಿಯರು ಯಾರನ್ನು ಪ್ರೀತಿ ಮಾಡಬೇಕು ಎಂದು ಹೇಳುವಂತಹ ಶಿಲಾಯುಗದ ಮನಸ್ಥಿತಿಯವರನ್ನು ಖಂಡಿಸುವ ಅವಶ್ಯಕತೆ ಇದೆ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕದೇ ಹೋದಲ್ಲಿ ನಾವು ನಮ್ಮ ಜೀವನವಿಡೀ ಇಂತಹ ವಿಶೇಷ ಕಾರ್ಯಪಡೆಗಳ ಮೊರೆ ಹೋಗಬೇಕಾಗುತ್ತಲೇ ಇರಬೇಕಾಗಬಹುದು. ಕೋಮು ವೈಷಮ್ಯ ಎಂಬ ಮೈಲಿಗೆಗೆ ಒಳಗಾಗಿರುವ ನಮ್ಮ ನಾಳೆಗಳು, ನಮ್ಮ ಶಾಲೆಗಳು, ನಮ್ಮ ಬಯಲು ಸೇರಿದಂತೆ ಎಲ್ಲ ಸಾರ್ವಜನಿಕ ವೇದಿಕೆಗಳು ಶುದ್ಧವಾಗಬೇಕೂಂತ ಇದ್ದಲ್ಲಿ ಪ್ರತಿಯೊಬ್ಬರೂ ಕೂಡ ಅವರ ಸಾಂವಿಧಾನಿಕ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಬೇಕು” ಎಂದು ಡಾ. ಉದಯ್ ಕುಮಾರ್ ಇರ್ವತ್ತೂರು ಅಭಿಪ್ರಾಯಿಸಿದರು.

“ಮಂಗಳೂರಿನಿಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕೋಮು ವೈಷಮ್ಯವನ್ನು ಹೋಗಲಾಡಿಸಬೇಕಾದರೆ ಹಲವು ವೇದಿಕೆಗಳ ಪೈಕಿ ಕಾರ್ಯಪಡೆ ರಚನೆಯು ಒಂದು ಹಂತವಷ್ಟೇ. ಸರ್ಕಾರ ನಿರೀಕ್ಷಿಸಿದ ಮಟ್ಟಿಗೆ ಇದು ಫಲಪ್ರದ ಆಗದೆ ಇರಲೂಬಹುದು. ಇದೊಂದು ವಿಶ್ವಾಸ ಮೂಡಿಸುವ ಪ್ರಕ್ರಿಯೆ ಅಂತ ನಾನು ನಂಬುತ್ತೇನೆ. ದ್ವೇಷ ಭಾಷಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದರಿಂದ ಈ ಕೆಲಸಕ್ಕೆ ಮುಂದಾಗಿದೆ. ವಿಶೇಷ ಕಾರ್ಯಪಡೆಯು ಸಂವಿಧಾನದ ಆಶಯದಂತೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಒಂದು ವೇಳೆ ನಿರ್ದಿಷ್ಟ ಒಂದು ಸಮುದಾಯದ ಪರವಾಗಿ ಕೆಲಸ ಮಾಡಿದಲ್ಲಿ ವಿಶ್ವಾಸ ಕಳೆದುಕೊಳ್ಳಲೂಬಹುದು. ಹಾಗಾಗಿ, ಆ್ಯಂಟಿ ಕಮ್ಯುನಲ್ ಟಾಸ್ಕ್ ಪೋರ್ಸ್ ಮೊದಲು ಜನರ ವಿಶ್ವಾಸ ಉಳಿಸಿಕೊಳ್ಳಬೇಕು” ಎಂದು ಕರಾವಳಿಯ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡುತ್ತಾ ತಿಳಿಸಿದರು.

ಈದಿನ ಡಾಟ್‌ ಕಾಮ್ ಜೊತೆಗೆ ಮಾತನಾಡಿದ ಕೋಮು ಸೌಹಾರ್ದ ವೇದಿಕೆಯ ಮುಖಂಡ ಕೆ ಎಲ್ ಅಶೋಕ್, ‘ಆ್ಯಂಟಿ ಕಮ್ಯುನಲ್ ಟಾಸ್ಕ್ ಪೋರ್ಸ್’ ಅಂತ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಇದು ನಿಜಕ್ಕೂ ‘ಆ್ಯಂಟಿ’ಯಾಗಿಯೇ ಕಾರ್ಯನಿರ್ವಹಿಸಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿರುವುದು ಒಳ್ಳೆಯದೇ. ಆದರೆ, ಈ ಕಾರ್ಯಪಡೆಯಲ್ಲಿ ಪ್ರಾಮಾಣಿಕವಾಗಿ, ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳಿದ್ದರಷ್ಟೇ ಸಾಧ್ಯ. ಚಿಕ್ಕಮಗಳೂರಿನಲ್ಲಿ ಎಸ್‌ಪಿಯಾಗಿದ್ದ ದಿವಂಗತ ಮಧುಕರ್ ಶೆಟ್ಟಿಯವರಂತಹ ಪ್ರಾಮಾಣಿಕ, ಖಡಕ್ ಅಧಿಕಾರಿಗಳು ಇಂತಹ ಕಾರ್ಯಪಡೆಯಲ್ಲಿದ್ದಾಗ ಚೆನ್ನಾಗಿ ಕಾರ್ಯನಿರ್ವಹಿಸಬಹುದು. ಯಾವುದೇ ರಾಜಕೀಯ ಒತ್ತಡ ಇಲ್ಲದಂತಹ ವಿಶೇಷ ಕಾರ್ಯಪಡೆಯಾಗಿ ನಿರ್ವಹಿಸಿದರಷ್ಟೇ ಫಲಪ್ರದವಾದಗಬಹುದು. ಎಲ್ಲ ಕೋಮುವಾದಿ ರೌಡಿಗಳನ್ನು ಮಟ್ಟ ಹಾಕುವಂತಾಗಬೇಕು. ದ್ವೇಷ ಭಾಷಣಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಿದರಷ್ಟೇ ಸಾರ್ವಜನಿಕರು ನೆಮ್ಮದಿಯ ಜೀವನ ಸಾಗಿಸಬಹುದು” ಎಂದು ತಿಳಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಕೋಮು ವೈಷಮ್ಯದಿಂದ ಈಗಾಗಲೇ ಕೆಟ್ಟಿರುವ ಈ ಸಂತ್ರಸ್ತ ಜಿಲ್ಲೆಗಳ ವಾತಾವರಣವನ್ನು ಸರಿಪಡಿಸುವುದು ಅಷ್ಟೊಂದು ಸುಲಭವಲ್ಲ. ಆದರೆ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸುವ ಜವಾಬ್ದಾರಿ ಪೊಲೀಸ್ ಇಲಾಖೆಗೆ ಇದೆ.

ಪೊಲೀಸ್ ಇಲಾಖೆ ಹಾಗೂ ಸರ್ಕಾರ ರಚಿಸಲು ಉದ್ದೇಶಿಸಿರುವ ‘ವಿಶೇಷ ಕಾರ್ಯಪಡೆ’ ಸರಿಯಾದ ರೀತಿಯಲ್ಲಿ, ನಿಷ್ಪಕ್ಷಪಾತವಾಗಿ ಕ್ರಮ ಕೈಗೊಂಡರೆ ಮತೀಯ ಕೊಲೆ, ದ್ವೇಷ ಹರಡುವವರಿಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂಬ ಅಭಿಪ್ರಾಯ ಕೋಮುಬಾಧಿತ ಜಿಲ್ಲೆಯ ಜನಸಾಮಾನ್ಯರಲ್ಲಿದೆ. ಇದು ಕೆಲವು ಮಟ್ಟಿಗೆ ಪರಿಣಾಮಕಾರಿಯಾಗಬಹುದಾದರೂ, ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗುವುದು ಸವಾಲಿನ ಸಂಗತಿಯಾಗಿದೆ. ಯಾವುದಕ್ಕೂ ಇದು ಎಷ್ಟು ಪರಿಣಾಮಕಾರಿಯಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.

Feauture Image: Grok AI Generated

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X