ಹುಮನಾಬಾದ್ ಪಟ್ಟಣದ ಶಿವಪುರ, ಜರಪೇಟ್, ಇಂದಿರಾನಗರ, ಧನಗರ ಗಡ್ಡದ ಜನರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ಬಡಾವಣೆಯ ನಿವಾಸಿಗಳು ಕೈಯಲ್ಲಿ ಖಾಲಿ ಕೊಡ ಹಿಡಿದು, ಬಾಜಾ ಭಜಂತ್ರಿದೊಂದಿಗೆ ಮೆರವಣಿಗೆ ಮೂಲಕ ಪುರಸಭೆ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕೆಲ ಹೊತ್ತು ಪುರಸಭೆ ಎದುರಗಡೆ ಕುಳಿತು ʼನೀರು ಕೊಡಿʼ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ʼಶಿವಪುರ ಬಡಾವಣೆಯಲ್ಲಿ ಕಳೆದ ಎರಡು ವಾರದಿಂದ ನೀರಿನ ಸಮಸ್ಯೆ ಉಲ್ವಣಗೊಂಡಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನಾ ಮುಖಂಡರು ಆಗ್ರಹಿಸಿದರು.
ಪ್ರತಿಭಟನೆ ಸುದ್ದಿ ತಿಳಿದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಭೇಟಿ ನೀಡಿ, ʼಈಗಾಗಲೇ ಅಮೃತ ಯೋಜನೆ ಕಾಮಗಾರಿ ಆರಂಭವಾಗಿದೆ. ಈ ಯೋಜನೆಯಿಂದ 30 ವರ್ಷಗಳವರೆಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಹೀಗಾಗಿ ಸ್ವಲ್ಪ ದಿನ ಕಾಯಬೇಕು. ಸದ್ಯ ನೀರಿನ ಸಮಸ್ಯೆ ಇರುವ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ಪೂರೈಸಲಾಗುವುದುʼ ಎಂದು ಭರವಸೆ ನೀಡಿದರು.
ʼಪುರಸಭೆಯವರು ವಾರಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿನ ನಿವಾಸಿಗಳು ಹಣ ಕೊಟ್ಟು ಖಾಸಗಿಯವರಿಂದ ನೀರು ಖರೀದಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದುʼ ಎಂದು ಭಾರತೀಯ ದಲಿತ ಪ್ಯಾಂಥರ್ ತಾಲ್ಲೂಕಾಧ್ಯಕ್ಷ ಗಣಪತಿ ಅಷ್ಟೂರೆ ಒತ್ತಾಯಿಸಿದರು.\
ಇದನ್ನೂ ಓದಿ : ಬಿಜೆಪಿಯವರು ಕಲಬುರಗಿಗೆ ಮಣಿಕಂಠ, ಛಲವಾದಿ ನಾರಾಯಣಸ್ವಾಮಿ ಎಂಬ ಎರಡು ವೈರಸ್ ಬಿಟ್ಟಿದ್ದಾರೆ
ಪ್ರತಿಭಟನೆಯಲ್ಲಿ ಗೌತಮ್ ಮೇಟಿ, ಮಾಣಿಕ್ ಮೇಟಿ , ಮನೋಜ್ ಜಾನವೀರ್, ಗೌತಮ್ ಜಾನವೀರ್, ಲಕ್ಷ್ಮಣ್ ಜಾನವೀರ್, ಲಕ್ಷ್ಮಿಪುತ್ರ, ರಾಹುಲ್ ಬೋಧೆ , ವಿಶಾಲ್ ಸಿಂಧನಕೇರಾ ಸೇರಿದಂತೆ ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು.