- ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಒಗ್ಗಟ್ಟು ಪ್ರದರ್ಶನ
- ಕಾಂಗ್ರೆಸ್ ನೇತೃತ್ವದ ಸಭೆಗೆ 24 ಪಕ್ಷಗಳ ಗಣ್ಯರಿಗೆ ಆಹ್ವಾನ ನೀಡಲಾಗಿದೆ
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂದು ದೇಶದ ಪ್ರತಿಪಕ್ಷಗಳೆಲ್ಲ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿವೆ. ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣ್ಯರಿಗೆ ಸ್ವಾಗತ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಸರ್ವಾಧಿಕಾರಿ, ಕೋಮುವಾದಿ ಮತ್ತು ಭ್ರಷ್ಟ ಪ್ರಭುತ್ವದ ವಿರುದ್ಧದ ಹೋರಾಟದಲ್ಲಿ ಒಂದಾಗಲು ಆಗಮಿಸುತ್ತಿರುವ ದೇಶದ ಪ್ರಮುಖ ವಿರೋಧಪಕ್ಷಗಳ ನಾಯಕರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಪ್ರಭುತ್ವದ ಆಶಯಗಳ ಕೂಡು ಬದುಕಿನ ದೀರ್ಘ ಪರಂಪರೆ ಹೊಂದಿರುವ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬಿತ್ತಿದ ಬೀಜ, ಬೆಳೆದು ಫಲ ನೀಡಲಿ ಎನ್ನುವುದು ಕನ್ನಡಿಗರೆಲ್ಲರ ಒಕ್ಕೊರಲಿನ ಹಾರೈಕೆ” ಎಂದು ತಿಳಿಸಿದ್ದಾರೆ.
ವಿಪಕ್ಷಗಳ ಮಹಾಮೈತ್ರಿಕೂಟದ ಸಭೆ ಈ ಮೊದಲು ಬಿಹಾರದಲ್ಲಿ ನಡೆದಿತ್ತು. ಅಲ್ಲಿ 15 ಪಕ್ಷಗಳ 32ನಾಯಕರು ಪಾಲ್ಗೊಂಡಿದ್ದರು. ಆದರೆ, ಕೇಜ್ರಿವಾಲ್ ಸೇರಿ ಹಲವು ನಾಯಕರು ಆ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಸಂಚಾಲಕರ ನೇಮಕ ಮಾಡಲು ಸಾಧ್ಯವಾಗಿರಲಿಲ್ಲ. ನಂತರ ಹಿಮಾಚಲಪ್ರದೇಶದಲ್ಲಿ ಸಭೆ ಆಯೋಜಿಸಲು ನಿರ್ಧರಿಸಿ ಹವಮಾನ ವೈಪರಿತ್ಯದ ಕಾರಣ ಕೈಬಿಡಲಾಗಿತ್ತು. ಆದರೆ ಈಗ ಎರಡನೆಯ ಸಭೆ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿದೆ. ಸಭೆಗೆ ಒಟ್ಟು 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ.
ವಿಪಕ್ಷಗಳ ಒಕ್ಕೂಟದ ಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಜೊತೆಗೆ ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್ನ ಹಾಲಿ ಸಿಎಂ ಹೇಮಂತ್ ಸೊರೇನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಸಹ ಆಗಮಿಸಲಿದ್ದಾರೆ.
ಎನ್ಸಿಪಿಯ ಶರದ್ ಪವಾರ್, ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಮಹಾರಾಷ್ಟ್ರ ಮಾಜಿ ಸಿಎಂ ಶಿವಸೇನೆಯ ಉದ್ಧವ್ ಠಾಕ್ರೆ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಓಮರ್ ಅಬ್ದುಲ್ಲಾ, ಸಿಪಿಐ ನಾಯಕ ಡಿ ರಾಜಾ, ಸಿಪಿಐಎಂ ನಾಯಕ ಸೀತಾರಾಂ ಯಚೂರಿ ಸೇರಿ ಹಲವು ನಾಯಕರು ಭಾಗವಹಿಸಲಿದ್ದಾರೆ. ಇವರಲ್ಲಿ ಆರು ಮಂದಿ ಹಾಲಿ ಸಿಎಂಗಳಾಗಿದ್ದರೆ, ಆರು ಮಂದಿ ಮಾಜಿ ಸಿಎಂಗಳು ಇದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯಾಧ್ಯಕ್ಷ ಸ್ಥಾನ ನೀಡದಿದ್ದರೆ ಮುಂದಿನ ನಿರ್ಧಾರ ಪ್ರಕಟಿಸುವೆ: ವಿ ಸೋಮಣ್ಣ
ಈಗಾಗಲೇ ಕೆಲ ವಿಪಕ್ಷಗಳ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಭಾನುವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಸಿಪಿಐನ ಸೀತಾರಾಂ ಯೆಚೂರಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಸೋಮವಾರ ಸಂಜೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಜತೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.
ವಿಪಕ್ಷಗಳ ಸಭೆಗೆ ಈ ಬಾರಿ ಜೆಡಿಎಸ್ಗೆ ಅಧಿಕೃತವಾಗಿ ಆಹ್ವಾನ ನೀಡಿಲ್ಲ. ಇನ್ನು ಕೊನೆ ಕ್ಷಣದಲ್ಲಿ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ವಿಪಕ್ಷಗಳ ಸಭೆಗೆ ಬರಲು ಒಪ್ಪಿಕೊಂಡಿದ್ದಾರೆ. ಸಂಚಾಲಕರ ನೇಮಕ, 400 ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಇನ್ನು ವಿಪಕ್ಷಗಳ ನಾಯಕರಿಗೆ ಖಾಸಗಿ ಹೋಟೆಲ್ನಲ್ಲಿ ಸಿಎಂ ಸಿದ್ದರಾಮಯ್ಯ ವಿಶೇಷ ಔತಣ ಕೂಟ ಏರ್ಪಡಿಸಿದ್ದಾರೆ.