ವಚನ ಚಳವಳಿಯ ಮೂಲಕ ನಾಡಿಗೆ ವಿಚಾರ ಕ್ರಾಂತಿಯನ್ನು ಪರಿಚಯಿಸಿದ ಕಲ್ಯಾಣ ಕರ್ನಾಟಕವು ಅಂದಿನಿಂದ ಇಂದಿನವರೆಗೂ ವೈಚಾರಿಕ ಪ್ರಜ್ಞೆಯಲ್ಲಿ ಸದಾ ಮುಂದಿದ್ದಾರೆ. ಇಂತಹ ಕಲ್ಯಾಣ ಶರಣರ ನಾಡು ಎಂದಿಗೂ ಆರ್‌ಎಸ್‌ಎಸ್, ಬಿಜೆಪಿಯವರ ಮಲಿನ ಚಿಂತನೆಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ʼಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಶಕ್ತಿಯನ್ನು ನಂಬಿರುವ ಕಲಬುರಗಿಯ ಜನರು ನನ್ನ ಪರವಾಗಿ ಬೃಹತ್ ಮಟ್ಟದ ವೈಚಾರಿಕ ಬೆಂಬಲವನ್ನು ದಾಖಲಿಸಿದ್ದು ನನ್ನ ಋಣಭಾರವನ್ನು ಇನ್ನಷ್ಟು ಹೆಚ್ಚಿಸಿದೆ. ʼಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದʼ ಎಂದು ಅವರು ತಿಳಿಸಿದ್ದಾರೆ.
ʼಕಲಬುರಗಿಯ ಪ್ರಬುದ್ಧ ಜನರೇ, ಸತ್ಯದ ಹಾದಿಯಲ್ಲಿ ನಡೆಯುವವರಿಗೆ, ಜನಹಿತಕ್ಕಾಗಿ ಬದುಕುವವರಿಗೆ ಎಂದಿಗೂ ಬೆಂಬಲ ಇದ್ದೇ ಇರುತ್ತದೆ ಎಂಬುದನ್ನು ನೀವು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ. ನನ್ನನ್ನು ಕೇವಲ ರಾಜಕಾರಣಿಯನ್ನಾಗಿ ನೋಡದೆ, ನಿಮ್ಮಲ್ಲಿ ಒಬ್ಬ ಎಂದು ಪರಿಗಣಿಸಿ ತೋರಿಸುತ್ತಿರುವ ಪ್ರೀತಿ, ಕಾಳಜಿ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ರಾಜಕೀಯವಾಗಿ, ಸೈದ್ದಂತಿಕವಾಗಿ, ವೈಚಾರಿಕವಾಗಿ ನನ್ನನ್ನು ಎದುರಿಸಲು ಸಾಧ್ಯವಾಗದ ಬಿಜೆಪಿಯವರು ವೈಯಕ್ತಿಕ ದಾಳಿಗಳ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸುತ್ತಿರುವುದನ್ನು ಕಂಡು ಸಹಿಸದೇ ಪ್ರಜ್ಞಾವಂತ ನಾಗರಿಕರಾದ ನೀವು ಸಿಡಿದೆದ್ದಿದ್ದೀರಿʼ ಎಂದು ಹೇಳಿದ್ದಾರೆ.
ʼನನ್ನ ಮೇಲೆ ಅಪಾರ ವಿಶ್ವಾಸ ಇರಿಸಿರುವ ನೀವು, ನನ್ನಲ್ಲಿನ ಸ್ಥೈರ್ಯ ಕೊಂಚವೂ ಕುಗ್ಗದಂತೆ ಬಲ ತುಂಬಿದ್ದೀರಿ. ನಿಮ್ಮ ಈ ಅಭಿಮಾನ, ಪ್ರೀತಿಯನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ನನ್ನ ಮೇಲಿನ ಪ್ರತಿ ದಾಳಿಗೂ ಸಾವಿರಾರು ವಿರೋಧದ ಧ್ವನಿಗಳು ಅನುರಣಿಸುತ್ತವೆ, ಕೀಳು ತಂತ್ರಗಳಿಗೆ ಎದಿರೇಟು ನೀಡುವ ಜನಶಕ್ತಿ ನನ್ನೊಂದಿಗೆ ಇದೆ ಎಂಬುದನ್ನು ಮನುವಾದಿಗಳಿಗೆ ಮನವರಿಕೆ ಮಾಡಿದ್ದೀರಿ. ನಾವೆಲ್ಲರೂ ಬಾಬಾ ಸಾಹೇಬರ ಆದರ್ಶಗಳು, ಸಂವಿಧಾನದ ತತ್ವಗಳನ್ನು ಪಾಲಿಸುವವರು. ನಮ್ಮ ಹೋರಾಟಗಳು ಸತ್ಯದ ಪರವಾಗಿರುತ್ತದೆ. ಆಚಾರವಿಲ್ಲದ ನಿಮ್ಮ ನಾಲಿಗೆ ಆಡುವ ಹೊಲಸು ಮಾತುಗಳಿಂದ ನಮ್ಮನ್ನು ಹಣಿಯಲು ಸಾಧ್ಯವಿಲ್ಲ ಎಂಬುದನ್ನು ಮನುಸ್ಮೃತಿ ಆರಾಧಕರಿಗೆ ಮತ್ತೊಮ್ಮೆ ಅರ್ಥಮಾಡಿಸಿದ್ದೀರಿʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿಯವರು ಕಲಬುರಗಿಗೆ ಮಣಿಕಂಠ, ಛಲವಾದಿ ನಾರಾಯಣಸ್ವಾಮಿ ಎಂಬ ಎರಡು ವೈರಸ್ ಬಿಟ್ಟಿದ್ದಾರೆ
ಸಮಾಜದ ಸ್ವಾಸ್ಥ್ಯ ಕೆಡಿಸುವ ಮನುವಾದದ ಮನಸ್ಥಿತಿಯವರ ಕುತಂತ್ರಗಳು ಸಫಲವಾಗುವುದಿಲ್ಲ. ಪ್ರಿಯಾಂಕ್ ಖರ್ಗೆ ಒಂಟಿಯಲ್ಲ, ನನ್ನೊಂದಿಗೆ ಬಾಬಾ ಸಾಹೇಬರನ್ನು ಅನುಸರಿಸುವ ಹಾಗೂ ಬಸವಣ್ಣನನ್ನು ಆರಾಧಿಸುವ ಸಾವಿರಾರು ಪಡೆಗಳಿವೆ ಎನ್ನುವ ಸಂಗತಿ ನನ್ನಲ್ಲಿ ಮತ್ತಷ್ಟು ಶಕ್ತಿ, ಆತ್ಮವಿಶ್ವಾಸ ತುಂಬಿದೆ. ಎಲ್ಲರ ಪ್ರೀತಿ, ಅಭಿಮಾನ, ಅಭೂತಪೂರ್ವ ಬೆಂಬಲವು ನನ್ನಲ್ಲಿ ಮತ್ತಷ್ಟು ಶಕ್ತಿ ತುಂಬಿದೆ, ಸಾಮಾಜಿಕ ಪಿಡುಗಿನಂತಾಗಿರುವ ಮನುವಾದಿಗಳನ್ನು ಎದುರಿಸುವ ಕೆಲಸವನ್ನು ನಿಮ್ಮೆಲ್ಲರ ಬೆಂಬಲದೊಂದಿಗೆ ನಾನು ಮುಂದುವರೆಸುತ್ತಲೇ ಇರುತ್ತೇನೆ, ಅಸಹಾಯಕರ, ಶೋಷಿತರ ಏಳಿಗೆಗಾಗಿ ನನ್ನ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರೆಸುತ್ತಿರುತ್ತೇನೆʼ ಎಂದು ತಮ್ಮ ʼಎಕ್ʼ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.