“ಯುವನಿಧಿಗೆ ಗ್ರಹಣ ಬಡಿದಿದ್ದು, ಅದು ಕಾಗದದ ಮೇಲಿನ ಯೋಜನೆಯಾಗಿ ಉಳಿಯುವ ಸಾಧ್ಯತೆ ದಟ್ಟವಾಗಿದೆ” ಎಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, “ಮೊದಲ ಕ್ಯಾಬಿನೆಟ್ ನಲ್ಲಿಯೇ ಜಾರಿಯಾಗಬೇಕಿದ್ದ ಗ್ಯಾರಂಟಿಗಳನ್ನು ಈಡೇರಿಸದೇ, ಬಜೆಟ್ ನಲ್ಲಿ ಅನುಷ್ಠಾನದ ಬಗ್ಗೆ ಸ್ಪಷ್ಟನೆ ನೀಡದೇ, ತಾನು ನುಡಿದಂತೆ ನಡೆಯದ ಸರ್ಕಾರ ಎಂಬುದನ್ನು ಸಿದ್ದರಾಮಯ್ಯ ಅವರ ಬಜೆಟ್ ಸಾಬೀತುಪಡಿಸಿದೆ” ಎಂದು ಆರೋಪಿಸಿದೆ.
“ಅಧಿಕಾರ ಸ್ವೀಕರಿಸಿದ ಬಳಿಕ, ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ, ತಾನು ಘೋಷಿಸಿದ ಎಲ್ಲ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇನೆ ಎಂದು ಜನರ ಕಿವಿ ಮೇಲೆ ಹೂವು ಇಟ್ಟಿದ್ದ ಎಟಿಎಂ ಸರ್ಕಾರ ಈಗ ಅಧಿಕಾರಕ್ಕೆ ಬಂದು ತನ್ನ ಬಜೆಟ್ ಮಂಡಿಸಿದರೂ ಆ ಬಗ್ಗೆ ಸ್ಪಷ್ಟತೆ ನೀಡುತ್ತಿಲ್ಲ. ಗ್ಯಾರಂಟಿ ಜಾರಿಗೊಳಿಸದೇ, “ನಾಳೆ ಬಾ” ಎಂದು ಟೈಂ ಪಾಸ್ ಮಾಡುತ್ತಿದೆ” ಎಂದು ವ್ಯಂಗ್ಯವಾಡಿದೆ.
“ಐದು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಲು 15 ದಿನ ಬೇಕಾಯಿತು. ಆದರೆ, ಈ ಬಜೆಟ್‌ನಲ್ಲಿ, ರಾಜ್ಯ ಸಾರಿಗೆ ಸಂಸ್ಥೆಗೆ ಶಕ್ತಿ ತುಂಬುವ ಅಂಶಗಳನ್ನು ಪ್ರಸ್ತಾಪಿಸಿಲ್ಲ” ಎಂದು ಆರೋಪಿಸಿದೆ.
“ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ತಾನು ನುಡಿದಂತೆ 10 ಕೆಜಿ ಅಕ್ಕಿ ನೀಡದೇ, 05 ಕೆಜಿ ಅಕ್ಕಿಯ ದರ ನೀಡುತ್ತೇನೆಂದು ಹೇಳಿ, ಕೇಂದ್ರ ಸರ್ಕಾರ ನೀಡುವ 05 ಕೆಜಿ ಅಕ್ಕಿಯಲ್ಲಿ, 02 ಕೆಜಿ ಅಕ್ಕಿಗೆ ಕನ್ನ ಹಾಕಿದೆ” ಎಂದು ದೂರಿದೆ.
“ಗೃಹ ಜ್ಯೋತಿ ಗ್ಯಾರಂಟಿಯನ್ನು ಜಾರಿಗೊಳಿಸದೇ, ವಿದ್ಯುತ್ ದರ ಏರಿಸಿ, ಜನರ ಜೇಬಿಗೆ ಶಾಕ್ ನೀಡಿದೆ. ಈ ತಿಂಗಳ ಬಿಲ್ ಪಾವತಿಸಿ, ಮುಂದಿನ ತಿಂಗಳು ಬಿಲ್ ಬರುವುದಿಲ್ಲ ಎಂದು ಹೇಳುತ್ತಾ ಜನತೆಯನ್ನು ವಂಚಿಸುತ್ತಿದೆ. ಗೃಹಲಕ್ಷ್ಮಿಗೆ ನೂರಾರು ಷರತ್ತು ವಿಧಿಸಿ, ಕೊನೆಗೆ ಸರ್ವರ್ ಹ್ಯಾಕ್ ಎಂಬ ಸುಳ್ಳು ಸುದ್ದಿಯನ್ನು ಸಚಿವರು ಹೇಳಿದ್ದರು, ಈಗ ಷರತ್ತುಗಳ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ದೂರಿದೆ.