ಬೀದರ ಜಿಲ್ಲೆಯ ಪತ್ರಕರ್ತರ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ನೀಡಿ ಮಕ್ಕಳಿಗೆ ಪ್ರೋತ್ಸಾಹ ಪುರಸ್ಕಾರ ಹಾಗೂ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಗುರುತಿಸಿ ಆಪತ್ ರಕ್ಷಕ ನಿಧಿಯಿಂದ ಸಹಾಯಧನ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ತಿಳಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ನಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ 70ಕ್ಕೂ ಅಧಿಕ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕೇರಳದ ಕಾಸರಗೂಡಿನಲ್ಲಿ ಈಚೆಗೆ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ಮೌಲಾನಾಸಾಬ್ (ಹಾಜಿಪಾಶಾ) ಅವರಿಗೆ ಸನ್ಮಾನ ಹಾಗೂ ಸಂಕಷ್ಟಕ್ಕೆ ಒಳಗಾದ ಪತ್ರಕರ್ತೆ ಕೀರ್ತಿ ಸೇನಾ ಅವರಿಗೆ ಆಪತ್ ರಕ್ಷಕ ನಿಧಿಯಿಂದ ಸಹಾಯಧನ ವಿತರಿಸಿ ಅವರು ಮಾತನಾಡಿದರು.
ʼರಾಜ್ಯ ಮಟ್ಟದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ದತ್ತಿನಿಧಿ ಪ್ರಶಸ್ತಿ, ಸನ್ಮಾನ, ಪ್ರತಿಭಾ ಪುರಸ್ಕಾರಗಳು, ಅರ್ಹ ಪತ್ರಕರ್ತರಿಗೆ ಗುರುತಿಸುವಿಕೆ ಕಾರ್ಯ ಪ್ರಾಮಾಣಿಕವಾಗಿ ನಡೆಯುತ್ತಿದೆ. ಇಂದು ಪತ್ರಿಕಾರಂಗ ಕವಲುದಾರಿಯಲ್ಲಿ ಸಾಗುತ್ತಿದೆ. ಸ್ವಹಿತಾಸಕ್ತಿಗಾಗಿ ಪತ್ರಕರ್ತರು ಕಾರ್ಯ ಮಾಡದೆ ಸಮಾಜ ಸೇವೆ ಉದ್ದೇಶವಿಟ್ಟುಕೊಂಡು ಸೇವೆ ಮಾಡುವ ಅವಶ್ಯಕತೆ ಇದೆ. ಇಂತಹ ಪತ್ರಕರ್ತರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಮತ್ತು ಗೌರವ ಲಭಿಸುತ್ತದೆʼ ಎಂದರು.
ʼಬಡವರ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕಾರ್ಯ ಪತ್ರಕರ್ತರು ಮಾಡಬೇಕಾಗಿದೆ. ಪತ್ರಕರ್ತರ ಮೇಲೆ ಜನ ಇಂದಿಗೂ ಭರವಸೆ ಇಟ್ಟುಕೊಂಡಿದ್ದಾರೆ. ಪತ್ರಕರ್ತರು ಪ್ರಬುದ್ಧರು ಎನ್ನುವ ಭಾವನೆ ಜನರಲ್ಲಿದೆ. ಅದನ್ನು ನಾವು ಉಳಿಸಿಕೊಳ್ಳುವ ಅವಶ್ಯಕತೆಯಿದೆ. ಪತ್ರಕರ್ತರೆಂಬ ಅಹಂಕಾರ ನಮ್ಮಲ್ಲಿರದೆ ಸಮಾಜ ಸೇವಕನೆಂಬ ಭಾವ ಮೂಡಬೇಕು. ಸನ್ಮಾನ, ಪ್ರತಿಭಾ ಪುರಸ್ಕಾರಗಳು ಮತ್ತು ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯಹಸ್ತ ಚಾಚುತ್ತಿರುವುದನ್ನು ನೋಡಿದರೆ ರಾಜ್ಯದಲ್ಲಿ ಬೀದರ ಪತ್ರಕರ್ತರ ಸಂಘ ಉತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿದೆ ಎಂದೆನಿಸುತ್ತದೆʼ ಎಂದು ಹೇಳಿದರು.

ʼಹಿರಿಯ ಪತ್ರಕರ್ತ ಬಾಬು ವಾಲಿ ಮಾತನಾಡಿ, ʼಬೀದರ ಜಿಲ್ಲೆಯಲ್ಲಿ ಪತ್ರಕರ್ತರು ಮತ್ತು ಪತ್ರಕರ್ತರ ಸಂಘ ಕ್ರಿಯಾಶೀಲ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಪತ್ರಿಕಾ ರಂಗಕ್ಕೆ ಬಂದವರು ಕೊನೆವರೆಗೂ ಇರುತ್ತಾರೆ. ಬೀದರ ಜಿಲ್ಲಾ ಪತ್ರಕರ್ತರಲ್ಲಿ ಐಕ್ಯತೆಯಿದೆ. ಸೌಹಾರ್ದತೆಯಿಂದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾದ್ಯಕ್ಷ ಡಿ.ಕೆ.ಗಣಪತಿ ಮಾತನಾಡಿ, ʼಸಂಘದ ಚುಕ್ಕಾಣಿ ಯಾರೇ ಹಿಡಿಯಲಿ. ಸೌಹಾರ್ದತೆಯಿಂದ ಮತ್ತು ಐಕ್ಯತೆಯಿಂದ ಮುನ್ನಡೆಸಿಕೊಂಡು ಹೋಗುವ ಅವಶ್ಯಕತೆ ಇದೆ. ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಹಾಜಿಪಾಶಾ ಅವರು ಸ್ವಾಭಿಮಾನಿ ಪತ್ರಕರ್ತರಾಗಿದ್ದಾರೆ. ಅವರು ಯಾವತ್ತೂ ಯಾರಿಗೂ ಕೈಯೊಡ್ಡಿ ಬೇಡಿದವರಲ್ಲ. ಹೀಗಾಗಿ ಅವರನ್ನು ಸನ್ಮಾನಿಸುವುದರ ಜೊತೆಗೆ ಮಕ್ಕಳ ಪ್ರತಿಭೆ ಗುರುತಿಸಿ ಸನ್ಮಾನಿಸಲಾಗಿದೆ. ಸಂಘವನ್ನು ಇದೇ ರೀತಿ ಮುನ್ನಡೆಸಿಕೊಂಡು ಹೋಗೋಣʼ ಎಂದರು.
ಇದೇ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ಕೀರ್ತಿ ಸೇನಾ ಅವರಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಯಿತು. ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಹಾಜಿ ಪಾಶಾ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ಪಿಯುಸಿ ವಿದ್ಯಾರ್ಥಿಗಳಾದ ತನಿಶ್ ಓಂಕಾರ ಮಠಪತಿ, ದಿವ್ಯಮಣಿ ಗೋಪಿಚೆಂದ ತಾಂದಳೆ, ವಿನಯ ಸಂಜೆಯ ದಂತಕಾಳೆ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಜಗದೇಶ್ವರಿ ನಾಗಶೆಟ್ಟಿ ಧರಂಪುರ, ಆದಿತ್ಯ ನಾಗೇಶ ಪ್ರಭಾ, ಶರಣಬಸವ ಮಲ್ಲಿಕಾರ್ಜುನ್ ಮರಕಲೆ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : ಹುಮನಾಬಾದ್ | ನೀರಿನ ಸಮಸ್ಯೆ : ಖಾಲಿ ಕೊಡ ಹಿಡಿದು ಪುರಸಭೆ ಕಚೇರಿ ಎದುರು ಪ್ರತಿಭಟನೆ
ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕಾಮಶೆಟ್ಟಿ, ಹಿರಿಯ ಪತ್ರಕರ್ತರಾದ ಗಂಧರ್ವ ಸೇನಾ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಅಪ್ಪಾರಾವ ಸೌದಿ, ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕಕುಮಾರ ಕರಂಜಿ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಚೌಧರಿ, ಮಾಳಪ್ಪ ಅಡಸಾರೆ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ನಾಗಶೆಟ್ಟಿ ಧರಂಪೂರ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ನಿರೂಪಿಸಿದರು. ಪೃಥ್ವಿರಾಜ್ ಎಸ್. ವಂದಿಸಿದರು.