ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ವಿಚಾರದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಜಿಲ್ಲೆಯ ರೈತರ ಪರ ನಿಲ್ಲಬೇಕು. ಜಿಲ್ಲೆಯ ಜನರ ಜೀವನಾಡಿಯಾದ ಹೇಮಾವತಿ ನೀರನ್ನು ಉಳಿಸಲು ಸರ್ಕಾರ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ರದ್ದುಗೊಳಿಸಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಯೋಜನೆ ಕಾರ್ಯಗತಗೊಳ್ಳಲು ಬಿಡುವುದಿಲ್ಲ, ನಮ್ಮ ಹೆಣದ ಮೇಲೆ ನೀರು ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಶಾಸಕ ಬಿ.ಸುರೇಶ್‌ಗೌಡ ಎಚ್ಚರಿಕೆ ನೀಡಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರುದ್ಧ ಶನಿವಾರ ನಡೆದ ಹೋರಾಟ ಯಶಸ್ವಿಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು. ಮಠಾಧೀಶರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಮುಖಂಡರು ಪ್ರಾಣದ ಹಂಗು ತೊರೆದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆಯಾಗಿ ನಿಮಗೆ ಕೆಟ್ಟ ಹೆಸರು ತರಬಾರದೆಂದು ಶಾಂತಿಯುತ ಹೋರಾಟ ಮಾಡಿದರು. ಈ ಪರಿಸ್ಥಿತಿಯಲ್ಲಿ ಈ ಯೋಜನೆ ನಿಲ್ಲುವುದಿಲ್ಲ ಎಂದು ನೀವು ನೀಡಿರುವ ಹೇಳಿಕೆ ಜಿಲ್ಲೆಯ ಜನರಿಗೆ ನೋವು ಉಂಟುಮಾಡಿದೆ ಎಂದು ಹೇಳಿದರು.
ಬಿಜೆಪಿಯವರು ನೀರಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದೀರಿ. ಈ ಜಿಲ್ಲೆಯಿಂದ ರಾಜಕೀಯ ಅಸ್ತಿತ್ವ ಪಡೆದು ಸರ್ಕಾರದಲ್ಲಿ ಹಲವು ಸ್ಥಾನಮಾನ ಪಡೆದಿರುವ ನೀವು ಸತ್ಯವನ್ನು ಹೇಳಬೇಕು. ನಾವು ರಾಜಕೀಯ ಉದ್ದೇಶದಿಂದ ಹೋರಾಟ ಮಾಡಿಲ್ಲ, ದುಡ್ಡು ಕೊಟ್ಟು ಜನರನ್ನು ಹೋರಾಟಕ್ಕೆ ಕರೆಸಲಿಲ್ಲ, ಬದುಕಿನ ಜೀವಜಲ ಉಳಿಸಿಕೊಳ್ಳಲು ಜನ ಸ್ವಯಂಪ್ರೇರಿತರಾಗಿ ಬಂದಿದ್ದರು. ಈ ಬಗ್ಗೆ ಸರ್ಕಾರದಿಂದ ಸಮೀಕ್ಷೆ ಮಾಡಿಸಿ ವರದಿ ಪಡೆಯಿರಿ, ನೀರಿನ ವಿಷಯದಲ್ಲಿ ರಾಜಕೀಯ ಬೆರೆಸಬೇಡಿ ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ರೀತಿ ತುಮಕೂರನ್ನೂ ಗ್ರೇಟರ್ ತುಮಕೂರು ಮಾಡುವ ಕಲ್ಪನೆ ಹೊಂದಿರುವ ನೀವು ಹೇಮಾವತಿ ನೀರಿನ ರಕ್ಷಣೆ ಬಗ್ಗೆ ಚಿಂತನೆ ಮಾಡಬೇಕು. ನೀರೇ ಇಲ್ಲದಿದ್ದರೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಎಕ್ಸ್ ಪ್ರೆಸ್ ಕೆನಾಲ್ ಜನರಿಗೆ ತಮ್ಮ ವಿರೋಧವಿದೆ ಎಂದು ನಿಮ್ಮ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಈ ಸಂಬಂಧ ವಿಧಾನಸೌಧದಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಈ ಯೋಜನೆ ಬಗ್ಗೆ ತಾಂತ್ರಿಕ ಸಮಿತಿ ರಚಿಸಿ ವರದಿ ಪಡೆಯುವುದಾಗಿ ತೀರ್ಮಾಸಲಾಗಿತ್ತು. ಆದರೆ, ಆ ಸಮಿತಿಯಲ್ಲಿ ಸರ್ಕಾರದ, ಸಚಿವರ ಚೇಲಾಗಳೇ ಇದ್ದಾರೆ, ಅವರಿಂದ ಸತ್ಯದ ವರದಿ ನಿರೀಕ್ಷಿಸಲು ಸಾಧ್ಯವಿಲ್ಲ. ಸಮರ್ಥ ನೀರಾವರಿ ತಜ್ಞರನ್ನು ಸಮಿತಿಗೆ ನೇಮಿಸಿ ಎಂದು ಹೇಳಿದರು.
ನೀರಾವರಿ ಯೋಜನೆಗಳನ್ನು ಒಂದೊಂದು ಸರ್ಕಾರ ಬಂದಾಗ ಒಂದೊಂದು ರೀತಿ ಮಾಡಲಾಗುತ್ತಿದೆ. ಹೇಮಾವತಿಯಲ್ಲಿನ ಕೆಲವು ಅಯೋಗ್ಯ ಅಧಿಕಾರಿಗಳು ಯೋಜನೆಗಳ ದಿಕ್ಕು ತಪ್ಪಿಸುತ್ತಾರೆ. ಅಂತಹವರನ್ನು ಹೊರಗೆಹಾಕಿ, ಗಟ್ಟಿ ಯೋಜನೆಗಳನ್ನು ರೂಪಿಸಿ ಎಂದು ಒತ್ತಾಯಿಸಿದರು