ಕತ್ತಿ, ತಲವಾರುಗಳ ಬಗ್ಗೆ ಮಾತನಾಡುವವರು ಬಿಜೆಪಿಗರು. ಕಾಂಗ್ರೆಸ್‌ನವರು ಮಾರಾಕಾಸ್ತ್ರಗಳ ಬಗ್ಗೆ ಮಾತನಾಡುವುದಿಲ್ಲ. ಕೋಮು ದ್ವೇಷದಿಂದ ನಡೆದಿರುವ ಹತ್ಯೆಗಳಲ್ಲಿ ಕಾಂಗ್ರೆಸ್‌ನ ಒಬ್ಬನೇ ಒಬ್ಬ ಕಾರ್ಯಕರ್ತನೂ ಭಾಗಿಯಾಗಿಲ್ಲ. ಇಂತಹ ಹತ್ಯೆಗಳಲ್ಲಿ ಭಾಗಿಯಾಗುವವರು ಬಿಜೆಪಿ ಕಾರ್ಯಕರ್ತರು. ಕೋಮು ಹತ್ಯೆಗಳ ಹಿಂದಿರುವ, ಭಾಷಣ ಮಾಡುವ ಪಿತೂರಿದಾರರಿಗೆ ಶಿಕ್ಷೆಯಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಬಿ ರಮಾನಾಥ ರೈ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಆರಂಭವಾಗಿ ಇನ್ನೂ ಎರಡು ತಿಂಗಳೂ ಕಳೆದಿಲ್ಲ. ಆಗಲೇ, ಬಿಜೆಪಿ ನಾಯಕರು ಕಾನೂನು-ಸುವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದಾರೆ. ‘ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸರಿಯಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಹತ್ಯೆಗಳು ಹೆಚ್ಚಾಗುತ್ತವೆ’ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಲು ಶುರುಮಾಡಿದ್ದಾರೆ. ಹತ್ಯೆಗಳಲ್ಲಿ ಭಾಗಿಯಾಗುವವರು ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.
“ಪ್ರಚೋದನಕಾರಿ ಭಾಷಣ ಮಾಡಿರುವುದು ಯಾರು? ಯಾವ ಪಕ್ಷ ಧರ್ಮ, ಕೋಮು ದ್ವೇಷದ ರಾಜಕೀಯ ಮಾಡುತ್ತಿದೆ ಎನ್ನುವುದು ಕರಾವಳಿ ಜನರಿಗೆ ತಿಳಿದಿದೆ. ಕರಾವಳಿಯಲ್ಲಿ ಈ ಹಿಂದೆ ನಡೆದಿರುವ ಮತೀಯ ದ್ವೇಷದ ಹತ್ಯೆ ಪ್ರಕರಣಗಳಲ್ಲಿ ಯಾವೊಬ್ಬ ಕಾಂಗ್ರೆಸ್ ಕಾರ್ಯಕರ್ತ ಭಾಗಿಯಾಗಿಲ್ಲ. ಆದರೆ, ಬಿಜೆಪಿ ಹಾಗೂ ಬಿಜೆಪಿ ಬೆಂಬಲಿತ ಮತೀಯ ಸಂಘಟನೆಗಳ ಕಾರ್ಯಕರ್ತರು ಇಂತಹ ಹತ್ಯೆಗಳಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿಗರು ಆರೋಪ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದುದ್ದಕ್ಕೂ ಯಾವುದೇ ಸಂದರ್ಭದಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಮಾತನಾಡಿಲ್ಲ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಬಿಜೆಪಿಗರು ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ವಿರುದ್ಧ ಆಧಾರ ರಹಿತ ಆರೋಪ-ಅಪಪ್ರಚಾರ ಮಾಡುತ್ತಾರೆ. ಜನರಲ್ಲಿ ಭ್ರಮೆ ಹುಟ್ಟಿಸುತ್ತಿತ್ತಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ?: ಪ್ರತಿಪಕ್ಷಗಳಿಗೆ ಸ್ವಂತ ಬಲವಿಲ್ಲ, ಹೀಗಾಗಿ ಮೋದಿ ಸೋಲಿಸಲು ಒಂದಾಗುತ್ತಿವೆ: ಬೊಮ್ಮಾಯಿ ಟೀಕೆ
“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ನಡೆದಿರುವ ಕೋಮು ಹತ್ಯೆಗಳಾದ ಹರೀಶ್ ಪೂಜಾರಿ, ವಿನಾಯಕ ಬಾಳಿಗ, ಜಲೀಲ್ ಕೊರೋಪಾಡಿ, ದೀಪಕ್, ಪ್ರವೀಣ್ ನೆಟ್ಟಾರ್, ಫಾಝಿಲ್, ಮಸೂದ್ ಸೇರಿದಂತೆ ಎಲ್ಲ ಪ್ರಕಣಗಳನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಗೆ ಆದೇಶಿಸಬೇಕು. ಈ ಹತ್ಯೆಗಳಿಗೆ ಪಿತೂರಿ ರೂಪಿಸಿದವರು, ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯಾಗಬೇಕು. ಆಗ ಮಾತ್ರ, ಕರಾವಳಿಯಲ್ಲಿ ಶಾಂತಿ ನೆಲೆಸಲು ಸಾಧ್ಯ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾಂಗ್ರೆಸ್ ಪದಾಧಿಕಾರಿ ಶಾಹುಲ್ ಹಮೀದ್, ಸುರೇಂದ್ರ ಕಂಬ್ಳಿ, ಬಿ ಎಲ್ ಪಿ ಪದ್ಮನಾಭ ಕೋಟ್ಯಾನ್, ಜಯಶೀಲಾ ಅಡ್ಯಂತಾಯ, ಕುಮಾರಿ ಅಪ್ಪಿ, ಗಣೇಶ್ ಪೂಜಾರಿ, ಶಬೀರ್ ಸಿದ್ಧ ಕಟ್ಟೆ, ಶುಭೋದಯ ಆಳ್ವಾ ಉಪಸ್ಥಿತರಿದ್ದರು.