ಹೊಲದಲ್ಲಿ ಜೋಳ ಬಿತ್ತನೆ ಮಾಡಲು ಹೋಗಿದ್ದ ದಂಪತಿಯೊಂದಿಗೆ ತೆರಳಿದ್ದ ನಾಲ್ಕು ವರ್ಷದ ಮಗು ಆಟವಾಡುತ್ತಿದ್ದ ನೀರಿನ ಹೊಂಡಕ್ಕೆ ಬಿದ್ದು ಅಸುನೀಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಭಾನುವಾರ ನಡೆದಿದೆ.
ಗುಡಿಬಂಡೆ ತಾಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನಾಲ್ಕು ವರ್ಷದ ಅರ್ಪಿತ್ ರೆಡ್ಡಿ ಸಾವನ್ನಪ್ಪಿದ್ದಾನೆ. ಹಳೇಗುಂಡಿಬಂಡೆ ಗ್ರಾಮದ ನಿವಾಸಿಗಳಾದ ನರಸಿಂಹಮೂರ್ತಿ ಮತ್ತು ಭಾಗ್ಯಮ್ಮ ದಂಪತಿಗೆ ಈತ ಒಬ್ಬನೇ ಮಗನಾಗಿದ್ದ. ದಂಪತಿಯು ಮದುವೆಯಾದ 14 ವರ್ಷಗಳ ಬಳಿಕ ಅರ್ಪಿತ್ ರೆಡ್ಡಿ ಜನಿಸಿದ್ದ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು.
ದಂಪತಿ ಲಗುಮೇನಹಳ್ಳಿಯ ಜಮೀನಿನಲ್ಲಿ ಜೋಳ ಬಿತ್ತನೆ ಮಾಡಲು ಮಗುವಿನೊಂದಿಗೆ ಹೋಗಿದ್ದರು. ಈ ವೇಳೆ ಮಗು ಆಟವಾಡುತ್ತ ಹೋಗಿ ನೀರಿನ ಹೊಂಡಕ್ಕೆ ಬಿದ್ದಿದೆ. ಕೆಲ ಗಂಟೆಗಳವರೆಗೂ ಯಾರೂ ನೋಡಿಲ್ಲವಾದ್ದರಿಂದ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವಾಡಿಕೆಗಿಂತ ಮೊದಲೇ ಮಳೆ; ಮುನ್ನೆಚ್ಚರಿಕೆ ವಹಿಸುವಂತೆ ಹೆಸ್ಕಾಂ ಮನವಿ
ಮಗು ಕಾಣಿಸದೆ ಇದ್ದಾಗ ಪೋಷಕರು ಜಮೀನಿನಲ್ಲಿ ಹುಡುಕಾಡಿದ್ದಾರೆ. ನಂತರ ಜಮೀನಿನ ಬಳಿಯ ನಿರ್ಮಾಣ ಹಂತದ ಮನೆ ಮುಂದೆ ನೀರಿನ ಹೊಂಡದಲ್ಲಿ ಮಗುವಿನ ಶವ ಪತ್ತೆಯಾಗಿದೆ. ತಕ್ಷಣವೇ ಮಗುವನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಕರೆದ್ಯೊಯಲಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಮಗು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ಘಟನೆ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.