ಒಂಬತ್ತು ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಆರೋಪಿ ಕತ್ತು ಸೀಳಿ ಪರಾರಿಯಾಗಿರುವ ಘಟನೆ ಬಿಹಾರದ ಮುಜಫರ್‌ಪುರದಲ್ಲಿ ನಡೆದಿದೆ. ಬಾಲಕಿಯ ತಾಯಿ ರಕ್ತಸಿಕ್ತ ಮತ್ತು ಅರೆಬೆತ್ತಲೆಯಾಗಿರುವ ಅಪ್ರಾಪ್ತ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿಗೆ ಚಿಕಿತ್ಸೆ ನೀಡುವ ಮುನ್ನ ಐದು ಗಂಟೆಗೂ ಅಧಿಕ ಕಾಯಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅತ್ಯಾಚಾರವಾದ ಮರುದಿನವೇ ಬಾಲಕಿ ಸಾವನ್ನಪ್ಪಿದ್ದಾಳೆ.
ಪಟನಾ(patna) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಒಂಬತ್ತು ವರ್ಷದ ಬಾಲಕಿಗೆ ಚಿಕಿತ್ಸೆ ನೀಡುವ ಮುನ್ನ ಸುಮಾರು ಐದು ಗಂಟೆಗಳ ಕಾಲ ಕಾಯಿಸಲಾಗಿದೆ ಎಂದು ಆಕೆಯ ಕುಟುಂಬ ಆರೋಪಿಸಿದೆ.
ಇದನ್ನು ಓದಿದ್ದೀರಾ? ಬಿಹಾರದಲ್ಲಿ ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಅತ್ಯಾಚಾರ: ಒಬ್ಬರ ಕೊಲೆ
ಆರೋಪಿ ರೋಹಿತ್ ಸಾಹ್ನಿ ಒಂಬತ್ತು ವರ್ಷದ ಬಾಲಕಿಗೆ ತಿಂಡಿ ನೀಡುವ ಆಮಿಷವೊಡ್ಡಿ, ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ನಂತರ ಕತ್ತು ಕೊಯ್ದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಬಾಲಕಿಯ ತಾಯಿ ಮಲಗಿದ್ದ ಸಮಯದಲ್ಲಿ ಈ ಕೃತ್ಯ ಎಸಗಲಾಗಿದೆ. ತಾಯಿ ಎದ್ದು ಬಾಲಕಿಯನ್ನು ಹುಡುಕಿದಾಗ ನೆರೆಹೊರೆಯವರು ಆಕೆ ತನ್ನ ಸೈಕಲ್‌ನಲ್ಲಿ ಸಾಹ್ನಿಯೊಂದಿಗೆ ಹೋಗಿರುವುದಾಗಿ ಹೇಳಿದ್ದಾರೆ. ಸಾಹ್ನಿಯನ್ನು ಹಿಡಿದು ಪ್ರಶ್ನಿಸಿದಾಗ ಎಲ್ಲಿದ್ದಾಳೆ ಎಂದು ಅವರನ್ನೇ ಕೇಳಿದ್ದಾನೆ ಎನ್ನಲಾಗಿದೆ.
ಒಂಬತ್ತು ವರ್ಷದ ಬಾಲಕಿ ತೀವ್ರ ಗಾಯಗೊಂಡು, ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ಆಕೆಯನ್ನು ಮುಜಫರ್‌ಪುರದ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಉತ್ತಮ ಚಿಕಿತ್ಸೆಗಾಗಿ ಬಿಹಾರ ರಾಜಧಾನಿ ಪಟನಾದಲ್ಲಿರುವ ಪಿಎಂಸಿಎಚ್‌ಗೆ ಕರೆದೊಯ್ಯುವಂತೆ ಸೂಚಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ದಲಿತ ಬಾಲಕಿಯರ ಅತ್ಯಾಚಾರ ಪ್ರಕರಣ; ಸೆ.30ರಂದು ಯಾದಗಿರಿ ಬಂದ್‌ಗೆ ಕರೆ
ಪಿಎಂಸಿಎಚ್‌ನಲ್ಲಿ, ಹಾಸಿಗೆ ಲಭ್ಯವಿಲ್ಲದ ಕಾರಣ ಐದು ಗಂಟೆಗೂ ಅಧಿಕ ಕಾಲ ಕಾಯಬೇಕಾಯಿತು. ಚಿಕಿತ್ಸೆಯ ವಿಳಂಬವೇ ಆಕೆಯ ಸಾವಿಗೆ ಕಾರಣ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ. ಆದರೆ ಆಸ್ಪತ್ರೆ ಅಧಿಕಾರಿಗಳು ಈ ಆರೋಪವನ್ನು ತಳ್ಳಿಹಾಕಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಿಎಂಸಿಎಚ್ ಉಸ್ತುವಾರಿ ಅಧಿಕಾರಿ ಅಭಿಜಿತ್ ಸಿಂಗ್, “ಬಾಲಕಿ ದಾಖಲಾದಾಗ ನಾವು ಸಂಪೂರ್ಣ ವೈದ್ಯಕೀಯ ಆರೈಕೆಯನ್ನು ಒದಗಿಸಿದ್ದೆವು. ಚಿಕಿತ್ಸೆಯಲ್ಲಿ ವಿಳಂಬವಾಗಿದೆ ಎಂಬ ಕುಟುಂಬದ ಹೇಳಿಕೆ ಆಧಾರರಹಿತ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಎಲ್ಲಾ ಇಲಾಖೆಗಳನ್ನು ಸಂಪರ್ಕಿಸಿ, ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ಸಿಗುವಂತೆ ನೋಡಿಕೊಂಡೆವು” ಎಂದಿದ್ದಾರೆ.
मुजफ्फरपुर में दलित नाबालिग बेटी के साथ दरिंदगी और फिर इलाज़ में हुई लापरवाही बेहद शर्मनाक है।
— Rahul Gandhi (@RahulGandhi) June 1, 2025
अगर समय पर इलाज़ मिला होता, तो उसकी जान बचाई जा सकती थी। लेकिन डबल इंजन सरकार ने सुरक्षा तो दूर, जीवन रक्षा में भी घोर लापरवाही बरती।
पीड़ित परिवार को न्याय मिलने तक हम चुप नहीं… https://t.co/KPzLQHabCh
ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಿಎಂ ನಿತೀಶ್ ಕುಮಾರ್ ಮತ್ತೆ ಅಧಿಕಾರಕ್ಕೆ ಬರುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆ ಇಂತಹ ಆಘಾತಕಾರಿ ಘಟನೆ ನಡೆದಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಆರೋಗ್ಯ ಮೂಲಸೌಕರ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಹುಟ್ಟಿವೆ.
ವಿರೋಧ ಪಕ್ಷಗಳಾದ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಮತ್ತು ಕಾಂಗ್ರೆಸ್ ಬಿಜೆಪಿ-ಜೆಡಿಯು ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಆಕೆಯನ್ನು ಉಳಿಸಬಹುದಿತ್ತು ಎಂದು ಹೇಳಿವೆ.
ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ದಾಳಿ ನಡೆಸಿದ ಆರ್‌ಜೆಡಿ, “ಮುಜಾಫರ್‌ಪುರದ ಅತ್ಯಾಚಾರ ಸಂತ್ರಸ್ತೆ ಮಗಳು ಸೋತಿದ್ದಾಳೆ. ‘ಅಧ್ಯಕ್ಷ’ ಕುಮಾರ್ ಅವರ ಕ್ರೂರ ಮತ್ತು ಅಸಡ್ಡೆ ವ್ಯವಸ್ಥೆ ಗೆದ್ದಿದೆ. ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವನ್ನು ತೋರಿಸುವ ವ್ಯವಸ್ಥೆ ಗೆದ್ದಿದೆ, ಮಾನವೀಯತೆ ಸೋತಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತ್ರಸ್ತೆ ಅನುಭವಿಸಿದ ಕ್ರೌರ್ಯ ಮತ್ತು ಆಕೆಯ ಚಿಕಿತ್ಸೆಯಲ್ಲಿನ ನಿರ್ಲಕ್ಷ್ಯವು ಅತ್ಯಂತ ನಾಚಿಕೆಗೇಡಿನದ್ದು ಎಂದಿದ್ದಾರೆ. “ಆಕೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ, ಆಕೆಯನ್ನು ಉಳಿಸಬಹುದಿತ್ತು. ಆದರೆ ಡಬಲ್ ಎಂಜಿನ್ ಸರ್ಕಾರ ಆಕೆಯ ಜೀವವನ್ನು ಉಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ” ಎಂದು ದೂರಿದ್ದಾರೆ.
