ಹವಾಮಾನ ಬದಲಾವಣೆಯಿಂದ ಉಂಟಾಗುವ ಪರಿಣಾಮಗಳನ್ನು ಎದುರಿಸಲು, ನಿಯಂತ್ರಿಸಲು ಹಾಗೂ ಭವಿಷ್ಯದ ಹವಾಮಾನ ಬದಲಾವಣೆಯ ತೀವ್ರತೆಯನ್ನು ಕಡಿಮೆ ಮಾಡಲು ಇರುವ ಮೂಲಭೂತ ಜ್ಞಾನ ಹಾಗೂ ಮಾರ್ಪಾಡು ಪದ್ಧತಿಯನ್ನು ಸಮರ್ಪಕವಾಗಿ ಅಳವಡಿಸಿಕೊಂಡು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್ಸಿಎಸ್ಟಿ) ಸಹಯೋಗದಲ್ಲಿ ಹವಾಮಾನ ಬದಲಾವಣೆ ಕುರಿತಾದ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆಯ ಕುರಿತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ, ತಾಪಮಾನ ಹೆಚ್ಚಳ, ಚಂಡಮಾರುತ, ಪ್ರವಾಹದಂತಹ ಸಂದರ್ಭಗಳು ಎದುರಾಗುತ್ತವೆ. ಇದು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾರ್ವಜನಿಕರ ಜೀವನೋಪಾಯ ಮತ್ತು ಆರ್ಥಿಕತೆಯನ್ನು ಬೆಂಬಲಿಸುವ ಅನೇಕ ಉತ್ಪನ್ನಗಳನ್ನು ದುರ್ಬಲಗೊಳಿಸುತ್ತದೆ. ಜೊತೆಗೆ ನೈಸರ್ಗಿಕ ಪರಿಸರ ವ್ಯವಸ್ಥೆಯ ಮೇಲೂ ಪರಿಣಾಮ ಬೀರಲಿದ್ದು, ಕೃತಕ ಬುದ್ಧಿಮತ್ತೆ ಸೇರಿದಂತೆ ಮತ್ತಿತರ ತಂತ್ರಜ್ಞಾನಗಳ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ” ಎಂದರು.
“ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ತ್ಯಾಜ್ಯಗಳ ಅಸಮರ್ಪಕ ವಿಲೇವಾರಿಯು ಪರಿಸರದೊಂದಿಗೆ ಮಾನವನ ಜೀವನಕ್ಕೆ ಹಾನಿಯುಂಟು ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಎಸೆದಾಗ ಅದು ಬಿಸಿಲಿನಲ್ಲಿ ಒಣಗಿ ಮೈಕ್ರೋಪ್ಲಾಸ್ಟಿಕ್ ಆಗಿ ಬದಲಾವಣೆ ಹೊಂದಿ, ಮಾನವನ ಶರೀರವನ್ನು ಸೇರಿ ಮಧುಮೇಹ ಹಾಗೂ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಹರಡಲು ಕಾರಣವಾಗುತ್ತದೆ. ಜಿಲ್ಲೆಯು ಪ್ರಜ್ಞಾವಂತ ನಾಗರಿಕರಿಂದ ಕೂಡಿದ್ದು, ಪರಿಸರದ ಸೂಕ್ಷ್ಮತೆಯನ್ನು ಅರಿತು, ತ್ಯಾಜ್ಯ ವಿಲೇವಾರಿಯನ್ನು ಸೂಕ್ತ ರೀತಿ ಮಾಡಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ಪ್ರಕೃತಿಯು ಸಹ ತನ್ನದೇ ಆದ ವ್ಯವಸ್ಥೆಗಳನ್ನು ಒಳಗೊಂಡಿದೆ. ಅದರಲ್ಲಿ ಸ್ವಲ್ಪ ಏರಿಳಿತವಾದರೂ ಹಲವು ಅಸಮತೋಲನ ಸೃಷ್ಠಿಗೆ ಕಾರಣವಾಗುತ್ತದೆ. ನೀರಿನ ತಾಪಮಾನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಹ ಮಾನ್ಸೂನ್ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಎದುರಾಗುವ ಸಾಮಾಜಿಕ ದುಷ್ಪರಿಣಾಮಗಳನ್ನು ಬಗ್ಗೆ ಯೋಚಿಸಿ ನಂತರ ಯೋಜನೆಗಳನ್ನು ರೂಪಿಸಬೇಕು. ಹವಾಮಾನ ವೈಪರಿತ್ಯವನ್ನು ನಿಯಂತ್ರಿಸುವ ಯೋಜನೆಗಳನ್ನು ಜಾಗತಿಕವಾಗಿ ಅನುಷ್ಠಾನ ಮಾಡುವ ಕುರಿತು ಎಂಪ್ರಿ ಸಂಸ್ಥೆಯು ತರಬೇತಿ ನೀಡಲಿದ್ದು, ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು” ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರು | ಕೇರಳದ ಅಶ್ರಫ್ ಗುಂಪು ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು!
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಉದಯ್ ಶೆಟ್ಟಿ ಮಾತನಾಡಿ, “ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸಲು, ಇದರ ಬದಲಾವಣೆಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಇದು ಸೂಕ್ತ ಸಮಯವಾಗಿದೆ. 2015ರಲ್ಲಿ ವಿಶ್ವಸಂಸ್ಥೆ ಹವಾಮಾನ ವೈಪರೀತ್ಯದ ಬಗ್ಗೆ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಅಳವಡಿಸಿಕೊಂಡಿದೆ. ಇದನ್ನು ದೇಶ, ರಾಜ್ಯ, ಜಿಲ್ಲೆ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಸಹ ಪರಿಣಾಮಕಾರಿ ಅನುಷ್ಠಾನಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ” ಎಂದರು.
ಎಂಪ್ರಿ ಸಂಸ್ಥೆಯ ನಿರ್ದೇಶಕ ಡಾ.ಪ್ರಮೋದ್ ಕಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಚಂದ್ರಶೇಖರ್ ನಾಯ್ಕ್, ಕೆ.ಎಸ್.ಸಿ.ಎಸ್.ಟಿ ಯ ಎನ್.ಆರ್.ಡಿ.ಎಂ.ಎಸ್ ಅಧಿಕಾರಿ ವಿಕ್ರಮ್ ಆರ್, ಎಂಪ್ರಿ ಸಂಸೆಯ ರಾಘವೇಂದ್ರ ಎನ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.