'ಸಂವಿಧಾನ ಉಳಿವಿಗಾಗಿ ನಮ್ಮ ಹೋರಾಟ' ಎಂದು ಸಂವಿಧಾನ ಪುಸ್ತಕ ಹಿಡಿದು ಎಲ್ಲ ವೇದಿಕೆಗಳಲ್ಲಿ ಹೋರಾಡುವ ಕಾಂಗ್ರೆಸ್ಸಿಗರಿಗೆ, ಚುನಾವಣೆ ನಡೆಸುವುದು ಸಂವಿಧಾನದ ಆಶಯ ಎಂಬುದು ತಿಳಿದಿಲ್ಲವೇ?
ಈ ದೇಶದ ಬೆನ್ನೆಲುಬೆಂದರೆ ಗ್ರಾಮಗಳು ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆ. ದೇಶವೊಂದು ಸುಭದ್ರವಾಗಿ ಇರಬೇಕಾದರೆ ಅಧಿಕಾರ ವಿಕೇಂದ್ರೀಕರಣ ಗಟ್ಟಿಯಾಗಿರಬೇಕು. “ಸ್ಥಳೀಯ ಅಧಿಕಾರವೇ ಪರಮಾಧಿಕಾರ” ಎಂಬ ನೀತಿಯನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ಹಾಡಿಹೊಗಳುತ್ತಾರೆ. ಆದರೆ ವಾಸ್ತವದಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ.
ವಿಕೇಂದ್ರಿತ ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆದಿಲ್ಲ. ಸಂವಿಧಾನದ ಅನುಚ್ಛೇದ 243E ಪ್ರಕಾರ, ಪ್ರತಿ ಪಂಚಾಯತ್ ಐದು ವರ್ಷಗಳ ಅಧಿಕಾರಾವಧಿಯನ್ನು ಹೊಂದಿದ್ದು, ಅವಧಿ ಮುಕ್ತಾಯದ ಮೊದಲು ಚುನಾವಣೆಗಳನ್ನು ನಡೆಸಬೇಕು. ಆದರೆ ಅಧಿಕಾರ ವಿಕೇಂದ್ರೀಕರಣದ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಅಸಡ್ಡೆ ತೋರುತ್ತಲೇ ಬಂದಿವೆ.
ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರವು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ತರುವ ಮೂಲಕ, ಕ್ಷೇತ್ರ ವಿಂಗಡನೆ ಆಯೋಗವನ್ನು ರಚಿಸುವ ಮೂಲಕ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ಮುಂದೂಡಿತ್ತು. ಈ ತಿದ್ದುಪಡಿ ವಿರೋಧಿಸಿ ಸಭಾತ್ಯಾಗ ಮಾಡುವ ಮೂಲಕ ಹಿಂಬಾಗಿಲಿನಿಂದ ಕಾಂಗ್ರೆಸ್ ಪಕ್ಷವೂ ಕೈ ಜೋಡಿಸಿತ್ತು. ನಂತರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೂ ಅದು ಕೂಡ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸುವ ಬದಲು ಹೊಸ ಹೊಸ ದಾರಿಗಳನ್ನು ಹುಡುಕುವ ಮೂಲಕ ಚುನಾವಣೆಗಳನ್ನು ಮುಂದೂಡುತ್ತಲೇ ಬರುತ್ತಿದೆ.
ಚುನಾವಣೆ ನಡೆಸಲು ಅವಕಾಶ ಕೋರಿ ದೇಶದ ಇತಿಹಾಸದಲ್ಲೇ ಮೊದಲು ರಾಜ್ಯ ಚುನಾವಣಾ ಆಯೋಗವೊಂದು ರಾಜ್ಯ ಸರ್ಕಾರದ ವಿರುದ್ಧ ಉಚ್ಚನ್ಯಾಯಾಲಯದ ಮೆಟ್ಟಿಲೇರಿತ್ತು. ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ನ್ಯಾಯಾಲಯದ ಆದೇಶವನ್ನು ಸರ್ಕಾರ ಉಲಂಘಿಸಿತ್ತು. ಕಳೆದ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ ಪ್ರತಿಕ್ರಿಯಿಸಿ, “ಮೇ 30ಕ್ಕೆ ಕ್ಷೇತ್ರವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗುವುದು” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ನ್ಯಾಯಾಲಯವು ಸಂಬಂಧಿಸಿದ ಮೊಕದ್ದಮೆಯನ್ನು ಮುಗಿಸಿತ್ತು. ಆದರೆ ರಾಜ್ಯ ಸರ್ಕಾರ ಮೇ 30ಕ್ಕೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿಲ್ಲ. ಹಾಗಾಗಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಡೆಯುವಂತೆ ಕಾಣುತ್ತಿಲ್ಲ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸೆಣಸಾಟ ಸೇನೆಯದು, ಮೆರೆದಾಟ ಮೋದಿಯದು!
”ಮಹಿಳೆಯರಿಗೆ, ಪರಿಶಿಷ್ಟ ಜಾತಿ- ಪಂಗಡದವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಮೀಸಲಾತಿ ಮೂಲಕ ರಾಜಕೀಯ ಅಧಿಕಾರ ನೀಡಿ, ಸಂವಿಧಾನದ ಮೂಲ ಆಶಯವಾದ ಸಾಮಾಜಿಕ ನ್ಯಾಯವನ್ನು ದೊರಕಿಸಿ ರಕ್ತರಹಿತ ಕ್ರಾಂತಿ ಮಾಡಿದ್ದು ಪಂಚಾಯತ್ ರಾಜ್ ವ್ಯವಸ್ಥೆಯ ಮಹತ್ವದ ಸಾಧನೆ” ಎನ್ನುವ ಗ್ರಾಮ ಸ್ವರಾಜ್ಯ ಕರ್ನಾಟಕ ಸಂಘಟನೆಯ ಕಾಡಶೆಟ್ಟಿಹಳ್ಳಿ ಸತೀಶ್ ಅವರು, ಸರ್ಕಾರದ ಮುಂದೆ ಮಹತ್ವದ ಪ್ರಶ್ನೆಗಳನ್ನು ಇಟ್ಟಿದ್ದಾರೆ. ”ಸಂವಿಧಾನ ಉಳಿವಿಗಾಗಿ ನಮ್ಮ ಹೋರಾಟ ಎಂದು ಸಂವಿಧಾನ ಪುಸ್ತಕ ಹಿಡಿದು ಎಲ್ಲ ವೇದಿಕೆಗಳಲ್ಲಿ ಹೋರಾಡುವ ಕಾಂಗ್ರೆಸ್ಸಿಗರಿಗೆ ಚುನಾವಣೆ ನಡೆಸುವುದು ಸಂವಿಧಾನದ ಆಶಯ ಎಂಬುದು ತಿಳಿದಿಲ್ಲವೇ? ಚುನಾವಣೆ ನಡೆಸದೆ ಶೋಷಿತ ವರ್ಗಗಳನ್ನು ರಾಜಕೀಯ ಅಧಿಕಾರದಿಂದ ದೂರವಿಟ್ಟಂತಾಗಿಲ್ಲವೇ? ಇದು ಸಾಮಾಜಿಕ ನ್ಯಾಯದ ಕಡೆಗಣೆಯಲ್ಲವೇ? ಗಾಂಧೀಜಿಯವರ ವಾರಸುದಾರರೆಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರೇ ಗಾಂಧಿ ಕನಸಿನ ಗ್ರಾಮ ಸ್ವರಾಜ್ಯ ಅನುಷ್ಠಾನ ತಮ್ಮ ಜವಾಬ್ದಾರಿಯಲ್ಲವೇ?” ಎಂದು ಕೇಳಿದ್ದಾರೆ. ಇವು ಪ್ರತಿ ನಾಗರಿಕನ ಪ್ರಶ್ನೆಗಳೂ ಆಗಿವೆ.
ಅಧಿಕಾರ ವಿಕೇಂದ್ರೀಕರಣದ ವಿಚಾರದಲ್ಲಿ ಒಂದಿಷ್ಟು ಸಾಧನೆಯನ್ನು ನಾವು ಮಾಡಿದ್ದೇವೆ. ಭಾರತದಲ್ಲಿ ಕುಸಿಯುತ್ತಿದ್ದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಿ, ಬಲಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಸೂಚಿಸಲು 1977ರಲ್ಲಿ ಅಶೋಕ್ ಮೆಹ್ತಾ ಸಮಿತಿಯನ್ನು ಅಂದಿನ ಮೊರಾರ್ಜಿ ದೇಸಾಯಿ ನೇತೃತ್ವದ ಒಕ್ಕೂಟ ಸರ್ಕಾರ ನೇಮಿಸಿತು. ಆದರೆ ಸಮಿತಿ ಶಿಫಾರಸ್ಸುಗಳು ಜಾರಿಗೆ ಬರಲಿಲ್ಲ. ಅದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರ ನೇತೃತ್ವದ ಸರ್ಕಾರ, ನಜೀರ್ ಸಾಬ್ ಅವರ ದೂರದೃಷ್ಟಿಗಳನ್ನು ಜಾರಿಗೆ ತಂದು ಅಧಿಕಾರ ವಿಕೇಂದ್ರೀಕರಣಕ್ಕೆ ಹೆಜ್ಜೆ ಇಟ್ಟಿತು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ರಾಜೀವ್ ಗಾಂಧಿಯವರು ಕರ್ನಾಟಕದ ಮಾದರಿಯನ್ನು ಶ್ಲಾಘಿಸಿದ್ದರು. ನಂತರ ಸಂವಿಧಾನಕ್ಕೆ 64ನೇ ತಿದ್ದುಪಡಿ ತರುವ ನಿಟ್ಟಿನಲ್ಲಿ ಮಸೂದೆ ತಂದು, ಗ್ರಾಮ ಪಂಚಾಯಿತಿಗಳ ಬಲವರ್ಧನೆಗೆ ಯೋಚಿಸಿದರು. ದುರದೃಷ್ಟವಶಾತ್ ಮಸೂದೆಯು ಲೋಕಸಭೆಯಲ್ಲಿ ಅದು ಅಂಗೀಕೃತವಾದರೂ ರಾಜ್ಯಸಭೆಯಲ್ಲಿ ಪಾಸ್ ಆಗುವುದಿಲ್ಲ. ರಾಜೀವ್ ಗಾಂಧಿ ಆ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದರೆಂದು ಇತಿಹಾಸ ಹೇಳುತ್ತದೆ. ಅವರ ಮರಣದ ನಂತರ ಪಿ.ವಿ.ನರಸಿಂಹರಾವ್ ಅಧಿಕಾರಕ್ಕೆ ಬಂದಾಗ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿಗಳನ್ನು ತಂದು ಸ್ಥಳೀಯ ಸರ್ಕಾರಗಳಿಗೆ ಬಲ ತುಂಬುವ ಕೆಲಸವಾಯಿತು.
73ನೇ ತಿದ್ದುಪಡಿ ಗ್ರಾಮಾಂತರ ಸರ್ಕಾರಗಳಿಗೂ, 74ನೇ ತಿದ್ದುಪಡಿ ನಗರ ಕೇಂದ್ರಿತ ಮುಸ್ಸಿಪಾಲಿಟಿ, ಕಾರ್ಪೊರೇಷನ್‌ಗಳಿಗೂ ಶಕ್ತಿಯನ್ನು ನೀಡಿದವು. ಇವುಗಳನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳು ಪರಿಣಾಮಕಾರಿಯಾಗಿ ಜಾರಿಗೆ ತರಲು ಕೆಲಕಾಲ ಕೆಲಸ ಮಾಡಿದ್ದು ಸುಳ್ಳಲ್ಲ. ಆದರೆ ಕೇರಳ ಈ ವಿಚಾರದಲ್ಲಿ ಕಟ್ಟುನಿಟ್ಟಾಗಿ ಇದ್ದರೂ ಕರ್ನಾಟಕ 1996ರ ವೇಳೆಗೆ ಹಳಿತಪ್ಪಲು ಶುರುವಾಯಿತು.
73ನೇ ತಿದ್ದುಪಡಿಯಂತೂ ಗ್ರಾಮ ಪಂಚಾಯಿತಿಗಳ ಸಾರ್ವಭೌಮತ್ವವನ್ನು ಎತ್ತಿಹಿಡಿದಿರುವುದನ್ನು ಗಮನಿಸಬಹುದು.
ಸಂವಿಧಾನದ 11ನೇ ಶೆಡ್ಯೂಲ್‌ನಲ್ಲಿ ಬರುವ 29 ಕೆಲಸಗಳು ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿವೆ. ಅಂದರೆ ಯಾವುದೇ ಇಲಾಖೆಯ ಕಾರ್ಯಯೋಜನೆಯು ಗ್ರಾಮಪಂಚಾಯಿತಿ ಮೂಲಕವೇ ಹೋಗಬೇಕು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 11ನೇ ಶೆಡ್ಯೂಲ್‌ನಲ್ಲಿ ಪ್ರಸ್ತಾಪಿಸಲಾಗಿರುವ ಅಂಶಗಳನ್ನೇ ನೋಡಿ: 1. ಕೃಷಿ ಮತ್ತು ಕೃಷಿ ವಿಸ್ತರಣೆ. 2. ಭೂ ಸುಧಾರಣೆ, ಭೂ ಸುಧಾರಣೆಗಳ ಅನುಷ್ಠಾನ, ಭೂ ಕ್ರೋಡೀಕರಣ ಮತ್ತು ಮಣ್ಣಿನ ಸಂರಕ್ಷಣೆ. 3. ಸಣ್ಣ ನೀರಾವರಿ, ಜಲ ನಿರ್ವಹಣೆ ಮತ್ತು ಜಲಾನಯನ ಅಭಿವೃದ್ಧಿ. 4. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಕೋಳಿ ಸಾಕಣೆ. 5. ಮೀನುಗಾರಿಕೆ. 6. ಸಾಮಾಜಿಕ ಅರಣ್ಯ ಮತ್ತು ಕೃಷಿ ಅರಣ್ಯ. 7. ಸಣ್ಣ ಅರಣ್ಯ ಉತ್ಪನ್ನಗಳು. 8. ಆಹಾರ ಸಂಸ್ಕರಣಾ ಕೈಗಾರಿಕೆಗಳು ಸೇರಿದಂತೆ ಸಣ್ಣ ಪ್ರಮಾಣದ ಕೈಗಾರಿಕೆಗಳು. 9. ಖಾದಿ, ಗ್ರಾಮ ಮತ್ತು ಗುಡಿ ಕೈಗಾರಿಕೆಗಳು. 10. ಗ್ರಾಮೀಣ ವಸತಿ. 11. ಕುಡಿಯುವ ನೀರು. 12. ಇಂಧನ ಮತ್ತು ಮೇವು. 13. ರಸ್ತೆಗಳು, ಕಿರುಸೇತುವೆಗಳು, ಸೇತುವೆಗಳು, ದೋಣಿಗಳು, ಜಲಮಾರ್ಗಗಳು ಮತ್ತು ಇತರ ಸಂವಹನ ವಿಧಾನಗಳು. 14. ವಿದ್ಯುತ್ ವಿತರಣೆ ಸೇರಿದಂತೆ ಗ್ರಾಮೀಣ ವಿದ್ಯುದೀಕರಣ. 15. ಸಾಂಪ್ರದಾಯಿಕವಲ್ಲದ ಇಂಧನ ಮೂಲಗಳು. 16. ಬಡತನ ನಿರ್ಮೂಲನೆ ಕಾರ್ಯಕ್ರಮ. 17. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಸೇರಿದಂತೆ ಶಿಕ್ಷಣ. 18. ತಾಂತ್ರಿಕ ತರಬೇತಿ ಮತ್ತು ವೃತ್ತಿಪರ ಶಿಕ್ಷಣ. 19. ವಯಸ್ಕ ಮತ್ತು ಅನೌಪಚಾರಿಕ ಶಿಕ್ಷಣ. 20. ಗ್ರಂಥಾಲಯಗಳು. 21. ಸಾಂಸ್ಕೃತಿಕ ಚಟುವಟಿಕೆಗಳು. 22. ಮಾರುಕಟ್ಟೆಗಳು (ಸಂಜೆಗಳು) ಮತ್ತು ಜಾತ್ರೆಗಳು. 23. ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಔಷಧಾಲಯಗಳು ಸೇರಿದಂತೆ ಆರೋಗ್ಯ ಹಾಗೂ ನೈರ್ಮಲ್ಯ. 24. ಕುಟುಂಬ ಕಲ್ಯಾಣ. 25. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ. 26. ಅಂಗವಿಕಲರು ಮತ್ತು ಮಾನಸಿಕ ಅಸ್ವಸ್ಥರ ಅಭಿವೃದ್ಧಿ ಸೇರಿದಂತೆ ಸಾಮಾಜಿಕ ಕಲ್ಯಾಣ. 27. ದುರ್ಬಲ ವರ್ಗಗಳ, ವಿಶೇಷವಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ. 28. ಸಾರ್ವಜನಿಕ ವಿತರಣಾ ವ್ಯವಸ್ಥೆ. 29. ಸಮುದಾಯ ಆಸ್ತಿಗಳ ನಿರ್ವಹಣೆ.- ಈ ಎಲ್ಲ ವಿಚಾರದಲ್ಲೂ ಗ್ರಾಮ ಸರ್ಕಾರಗಳಿಗೆ ಸಾರ್ವಭೌಮತ್ವ ನೀಡಬೇಕೆಂಬುದು 73ನೇ ತಿದ್ದುಪಡಿಯ ಆಶಯ. ಆದರೆ ಸ್ಥಳೀಯ ಆಡಳಿತ ಹಲ್ಲಿಲ್ಲದ ಹುಲಿಯಾಗಿ ಬಹಳ ಕಾಲವೇ ಆಗಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಇದು ‘ಬಲಿಷ್ಠರು’ ಬೆತ್ತಲಾಗುವ ಕಾಲ
ಹೇಗಾದರೂ ಗ್ರಾಮ ಸರ್ಕಾರಗಳನ್ನು ಪುನರುಜ್ಜೀವನಗೊಳಿಸಬೇಕೆಂಬ ಆಶಯದಲ್ಲಿ ಸಿದ್ದರಾಮಯ್ಯನವರು ಯೋಚಿಸಿದರು. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಮೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಕಾಯಿದೆ ಸಮಿತಿ’ ಮಾಡಲಾಯಿತು. ಕಾಯ್ದೆಯು ಕ್ರಾಂತಿಕಾರಕ ಅಂಶಗಳನ್ನು ಹೊಂದಿರುವುದನ್ನು ಎತ್ತಿಹಿಡಿಯಿತು.
ಜನರೇ ಸಾರ್ವಭೌಮ ಎಂದಿರುವ ಕಾಯ್ದೆ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಚಂದವಾಗಿದೆ. ಆದರೆ ಅದು ಕಾಗದದ ಮೇಲಿನ ಹುಲಿಯಂತಾಗಿದೆ. ಸ್ಥಳೀಯ ಸರ್ಕಾರಗಳ ನಿರ್ಧಾರವೇ ಅಂತಿಮ ಎನ್ನುವ ಕಾಯ್ದೆಗೆ ಕಿಮ್ಮತ್ತು ಇಲ್ಲವಾಗಿದೆ. ಗ್ರಾಪಂ, ಜಿಪಂ, ರಾಜ್ಯ ಸರ್ಕಾರಗಳ ಜವಾಬ್ದಾರಿ ಏನೆಂಬುದನ್ನು ಹಂಚಿಕೆ ಆಗಬೇಕು, ಅದಕ್ಕೆ ಜವಾಬ್ದಾರಿ ನಕ್ಷೆ ಎನ್ನುತ್ತೇವೆ. ಆದರೆ ರಾಜ್ಯ ಸರ್ಕಾರ ಅದನ್ನು ಪರಿಪೂರ್ಣವಾಗಿ ಮಾಡಿಲ್ಲ. ಕಾನೂನು ಸಂವಿಧಾನದಲ್ಲಿ ಕ್ರಾಂತಿಕಾರಕ ಅಂಶಗಳಿವೆ. ಆದರೆ ಅಧಿಕಾರ ವಿಕೇಂದ್ರೀಕರಣ ಮಾಡಲು ಮಂತ್ರಿಗಳು ಮತ್ತು ಮೇಲಧಿಕಾರಿಗಳಿಗೆ ಇಷ್ಟವಿಲ್ಲ. ಅಧಿಕಾರ ವಿಕೇಂದ್ರೀಕರಣದಲ್ಲಿ ಇತರ ರಾಜ್ಯಗಳಿಗಿಂತ ನಾವು ಉತ್ತಮವಾಗಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ ಇದಕ್ಕೆಲ್ಲ ಬುನಾದಿ ಆಗಬೇಕಿರುವ ಸ್ಥಳೀಯ ಸರ್ಕಾರಗಳೇ ಇಲ್ಲವಾಗಿವೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳೇ ಇಲ್ಲವಾಗಿರುವುದರಿಂದ ಆರ್ಥಿಕ ನಷ್ಟವೂ ಉಂಟಾಗಿದೆ. ಚುನಾವಾಣೆ ನಡೆಸದೆ ಇರುವುದರಿಂದ ಹದಿನೈದನೇ ಹಣಕಾಸು ಆಯೋಗದ ಅನುದಾನವೂ ಬಂದಿಲ್ಲ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕೋಟಿ ಹಣ ರಾಜ್ಯದ ಗ್ರಾಮಗಳ ಅಭಿವೃದ್ದಿಗೆ ಬರಬೇಕಾದರೆ, ಸ್ಥಳೀಯ ಸರ್ಕಾರಗಳು ಅಸ್ತಿತ್ವದಲ್ಲಿ ಇರಬೇಕೆಂದು ನಿಯಮಗಳು ಹೇಳುತ್ತವೆ. ಇವೆಲ್ಲವನ್ನೂ ಸರ್ಕಾರ ಗಂಭೀರವಾಗಿ ಗಮನಿಸಬೇಕು. ಸರ್ಕಾರ ನಿಜಕ್ಕೂ ಸಂವಿಧಾನದ ಆಶಯಗಳಿಗೆ ಬದ್ಧವಾಗಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ತುರ್ತಾಗಿ ನಡೆಸಬೇಕಾಗಿದೆ.
