ಪ್ರಸ್ತುತ ದಿನಮಾನದಲ್ಲಿಯೂ ಕಡಿಮೆ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್ ಬಡವರಿಗೆ ವರವಾಗಲಿದ್ದು, ಸರ್ಕಾರದ ಪ್ರಣಾಳಿಕೆಯಲ್ಲಿನ ಘೋಷಣೆಯಂತೆ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ ಎಂದು ಜವಳಿ ಹಾಗೂ ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.
“ಎಂಪಿಎಸ್ ಶಾಲೆಯಲ್ಲಿ 15 ಲಕ್ಷ ರೂ. ವೆಚ್ಚದ ಶಾಲಾ ಕೊಠಡಿ ದುರಸ್ತಿಗೆ ಭೂಮಿ ಪೂಜೆ, ಮುದ್ದೇಶ್ವರ ಮಂಗಲ ಭವನದ ಬಳಿ ಹತ್ತು ಲಕ್ಷ ವೆಚ್ಚದ ರಂಗಮಂದಿರ ಭೂಮಿ ಪೂಜೆ, ಸಿದ್ದರ ಕಾಲೋನಿಯಲ್ಲಿ 20 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ ಲೋಕಾರ್ಪಣೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ನಿಂತಿದೆ” ಎಂದರು.

“ನಿಡಗುಂದಿ ಹೃದಯ ಭಾಗದಲ್ಲಿ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿದೆ. ನಿಡಗುಂದಿ ತಾಲೂಕು ಕೇಂದ್ರವಾಗಿದ್ದು, ಸಾಕಷ್ಟು ವಹಿವಾಟು ಚಟುವಟಿಕೆಗೆ ಗ್ರಾಮೀಣ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಹಸಿವು ಇಂಗಿಸುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಲೋಕಾರ್ಪಣೆಯಾಗಿದೆ. ಇದನ್ನು ಉತ್ತಮ ನಿರ್ವಹಣೆ ಮಾಡುವ ಮೂಲಕ ಜನರಿಗೆ ನಿರಂತರ ಉಪಯೋಗವಾಗುವಂತೆ ಕಾರ್ಯ ಮಾಡಬೇಕು” ಎಂದರು.
“ಇಂದಿರಾ ಕ್ಯಾಂಟೀನಲ್ಲಿ ಟಿಫನ್‌ಗೆ 5 ರೂ., ಊಟಕ್ಕೆ 10 ರೂಪಾಯಿ ನಿಗದಿ ಮಾಡಿದ್ದು, ಇದು ಬಡವರಿಗೆ ಅನುಕೂಲವಾಗಲಿದೆ. ಎಂಪಿಎಸ್ ಶಾಲೆ ಕೊಠಡಿ ದುರಸ್ತಿಗೆ ಹೆಚ್ಚುವರಿಯಾಗಿ ಪಟ್ಟಣ ಪಂಚಾಯಿತಿಯಿಂದ 10 ಲಕ್ಷ ಹಾಗೂ ತಾಲೂಕು ಪಂಚಾಯಿತಿಯಿಂದ 10 ಲಕ್ಷ ರೂ. ಹಣ ಒದಗಿಸುವ ವ್ಯವಸ್ಥೆ ಮಾಡಲಾಗಿದ್ದು, ಒಟ್ಟಾರೆ ಎಲ್ಲ ಕೊಠಡಿಗಳು ದುರಸ್ತಿಯಾಗಿ ಸುಸಜ್ಜಿತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು” ಎಂದರು.
ಈ ಸುದ್ದಿ ಒದಿದ್ದೀರಾ? ಹಾವೇರಿ | ಸರ್ಕಾರಿ ಶಾಲೆಗೆ 1 ಲಕ್ಷ 12 ಸಾವಿರ ಸಾಮಗ್ರಿಗಳು ವಿತರಣೆ
ಸಚಿವರು ಉಪ್ಪಿಟ್ಟು, ಕೇಸರಿ ಬಾತ್ ಸವಿದು, ಈ ವೇಳೆ ಕಮದಾಳ ಪುನರ್ವಸತಿ ಕೇಂದ್ರದಲ್ಲಿನ ಶಾಲೆ ಕಟ್ಟಡಕ್ಕೆ ಮಂಜೂರಾದ 61.59 ಲಕ್ಷ ರೂ. ಹಣದಲ್ಲಿ ಉಳಿಕೆ ಮೊತ್ತವನ್ನು ಶಾಲೆ ಕಾಂಪೌಂಡ್ ಎತ್ತರಗೊಳಿಸಲು ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಶಿಕ್ಷಕ ಸಂಘದ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು.
ಜಿವಿವಿಎಸ್ ಶಿಕ್ಷಣ ಸಂಸ್ಥೆ ಚೇರ್ಮನ್ ಸಿದ್ದಣ್ಣ ನಾಗಠಾಣ, ಪಪಂ ಅಧ್ಯಕ್ಷ ದೇಸಾಯಿ ಜಂಬಕ್ಕ ವಿಭೂತಿ, ಉಪಾಧ್ಯಕ್ಷೆ ಗೌರಮ್ಮ ಹುಗ್ಗಿ, ತಶೀಲ್ದಾರ್ ಎ ಡಿ ಅಮರವಾಡಗಿ, ತಾಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ, ಪಪಂ ಜೆಇ ಅಶ್ರಫ್ ಅಲಿ ಮಕನಾದಾರ, ಮುಖಂಡರಾದ ಪರಶುರಾಮ ಕಾರಿ, ಎಂ ಎಂ ಮುಲ್ಲಾ, ಶೇಖರ ರೊಡಗಿ, ಸಂಗಮೇಶ ಕೆಂಭಾವಿ, ಗಂಗಾಧರ ವಾರದ, ಪಪಂ ಸದಸ್ಯರು ಸೇರಿದಂತೆ ಇತರರು ಇದ್ದರು.