ಸಂಚಾರ ನಿಯಮಗಳ ಪಾಲನೆ ಎಲ್ಲರ ಕರ್ತವ್ಯ, ವಾಹನ ಮಾಲೀಕರು, ಚಾಲಕರು, ಸಾರ್ವಜನಿಕರು ಸೇರಿದಂತೆ ಎಲ್ಲರೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ರಸ್ತೆಯಲ್ಲಿ ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕು. ಆಗ ಮಾತ್ರ ಎಲ್ಲರ ಸುರಕ್ಷತೆ ಸಾಧ್ಯ ಎಂದು ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಪೊಲೀಸ್ ಠಾಣೆಯ ಉಪನಿರೀಕ್ಷಕಿ ದೀಪು ಎಂ ಟಿ ಹೇಳಿದ್ದಾರೆ.
ಚಿಕ್ಕಜಾಜೂರಿನಲ್ಲಿ ನಡೆದ ಸಂಚಾರ ನಿಯಮಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸಾರ್ವಜನಿಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ರಸ್ತೆ ನಿಯಮಗಳ ಪಾಲನೆ ಮಾಡದಿರುವುದು ವಾಹನದಟ್ಟಣೆ ಮತ್ತು ಅಪಘಾತ ಇನ್ನಿತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನು ಅರಿತು ವಾಹನ ಮಾಲೀಕರು, ಚಾಲಕರು ನಿಗದಿತ ಸ್ಥಳಗಳಲ್ಲಿ ವಾಹನವನ್ನು ನಿಲುಗಡೆ ಮಾಡಬೇಕು” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇದೇ ಸಮಯದಲ್ಲಿ ವ್ಯಾಪಾರಿ ಮಳಿಗೆ ಮಾಲೀಕರು, ಆಟೋ ನಿಲ್ದಾಣ ಮತ್ತು ಬಸ್ ನಿಲುಗಡೆ ಕೆಲವು ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸೂಚಿಸಿದರು. ಚಿಕ್ಕಜಾಜೂರು ಠಾಣಾ ವ್ಯಾಪ್ತಿಯಲ್ಲಿ ನೊಂದಣಿಯಾದ ಆಟೋಗಳಿಗೆ ರಿಜಿಸ್ಟರ್ ನಂಬರ್‌ನ ಫಲಕಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಉಪನಿರೀಕ್ಷಕರಾದ ಸಚಿನ್ ಪಟೇಲ್, ಠಾಣೆಯ ಪೊಲೀಸ್ ಸಿಬ್ಬಂದಿ ಮಲ್ಲೇಶ್, ರುದ್ರೇಶ್, ಗಿರೀಶ್ ಸೇರಿದಂತೆ ಆಟೋ ಚಾಲಕರಾದ ವಿಜಯ್ ಅಪ್ಪಿ, ಉಮೇಶ್ ಹಾಗೂ ಸ್ಥಳೀಯ ನಿವಾಸಿ ಸೋಮು ಬಾಬು ಇದ್ದರು.