ಆರ್ಸಿಬಿಯ ಭಾವನಾತ್ಮಕ ಸಂಬಂಧ ಸೋಲು, ಗೆಲುವನ್ನು ಮೀರಿದ್ದಾಗಿರುತ್ತದೆ. ಈ ಭಾವನಾತ್ಮಕ ಬಂಧಕ್ಕೆ ಸೋಲು ಗೆಲುವಿನ ಹಂಗಿರುವುದಿಲ್ಲ. ಅಭಿಮಾನಿಗಳು ಕ್ರೀಡಾಂಗಣದಲ್ಲಿ ಪಂದ್ಯ ನೋಡುತ್ತಿರಲಿ, ಇಲ್ಲ ಮನೆಯಲ್ಲಿ ನೇರ ಪ್ರಸಾರ ವೀಕ್ಷಿಸುತ್ತಿರಲಿ, ಬಸ್ಸು, ಕಾರು, ಕಚೇರಿಗಳಲ್ಲಿ ಆಗಾಗ ಸ್ಕೋರ್ ತಿಳಿದುಕೊಳ್ಳುತ್ತಿದ್ದರೂ ಅವರ ಮನಸ್ಸಿನಲ್ಲಿ ʼಇದು ನನ್ನ ತಂಡʼ, ʼಇದು ನನ್ನ ನೆಚ್ಚಿನ ಆಟಗಾರರು ಆಡುತ್ತಿರುವ ತಂಡʼ, ʼನನ್ನ ಆರ್ಸಿಬಿಯೇ ಗೆಲ್ಲಬೇಕುʼ ಎಂಬ ಆಶಯ ಹೊಂದಿರುತ್ತಾರೆ...
ಇಂಡಿಯನ್ ಪ್ರೀಮಿಯರ್ ಲೀಗ್ನ ಹದಿನೆಂಟನೇ ಆವೃತ್ತಿ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದು ಸಂಜೆ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಇಲೆವೆನ್ ನಡುವೆ ಅಹಮದಾಬಾದ್ನ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ. ಐಪಿಎಲ್ಗಿಂತ ಹೆಚ್ಚಾಗಿ ಗಮನ ಸೆಳೆಯುತ್ತಿರುವುದು ಆರ್ಸಿಬಿ ಅಭಿಮಾನದ ಜ್ವರ. 2008ರಲ್ಲಿ ಐಪಿಎಲ್ನ ಆರಂಭದಿಂದಲೂ ದೇಶದಾದ್ಯಂತ, ವಿಶೇಷವಾಗಿ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಆರ್ಸಿಬಿ ತಂಡ ಹೊಂದಿದೆ. ಕಳೆದ 18 ಆವೃತ್ತಿಗಳಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಟ್ರೋಫಿಯನ್ನು ಮುಡಿಗೇರಿಸಿಕೊಂಡಿಲ್ಲ. ಆದರೂ ಅಭಿಮಾನದ ಹುಚ್ಚು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಎಲ್ಲ ಫ್ರಾಂಚೈಸಿ ತಂಡಗಳಿಗೆ ಆಯಾ ರಾಜ್ಯ ಹಾಗೂ ನಗರಗಳಲ್ಲಿ ಅಭಿಮಾನಿಗಳಿದ್ದರೆ ಬೆಂಗಳೂರು ತಂಡ ಯಾವುದೇ ರಾಜ್ಯಕ್ಕೆ ಆಡಲು ತೆರಳಿದರೂ ಅಭಿಮಾನಿಗಳ ದಂಡೇ ನೆರೆದಿರುತ್ತದೆ. ಐಪಿಎಲ್ನಂಥ ಅಪ್ಪಟ ವಾಣಿಜ್ಯ ಕ್ರೀಡೆಯ ನಡುವೆಯೂ ಆರ್ಸಿಬಿ ಅಭಿಮಾನವು ಕ್ರಿಕೆಟ್ ಆಟದ ಬಗ್ಗೆ ಮಾತ್ರವಲ್ಲ, ಬದಲಿಗೆ ಅಭಿಮಾನಿಗಳ ಭಾವನಾತ್ಮಕ ಒಡನಾಟದ ಅಭಿವ್ಯಕ್ತಿಯಾಗಿದೆ.
ಬೆಂಗಳೂರಿನಂತಹ ಕಾಸ್ಮೋಪಾಲಿಟನ್ ನಗರದಲ್ಲಿ, ವಿವಿಧ ಸಂಸ್ಕೃತಿಗಳು ಮತ್ತು ನೂರಾರು ಭಾಷೆಗಳನ್ನು ಮಾತನಾಡುವ ಜನರು ಒಗ್ಗೂಡಿ ಜೀವನ ರೂಪಿಸಿಕೊಂಡಿದ್ದಾರೆ. ಆರ್ಸಿಬಿ ತಂಡ ಈ ವೈವಿಧ್ಯಮಯ ಜನರನ್ನು ಪ್ರತಿ ವರ್ಷವೂ ಒಗ್ಗೂಡಿಸುತ್ತಿದೆ. ತಂಡದ ಕೆಂಪು-ಕಪ್ಪು ಜರ್ಸಿಯ ಬಣ್ಣಗಳು, “ಈ ಸಲ ಕಪ್ ನಮ್ದೇ” ಎಂಬ ಘೋಷಣೆ ಜನಪ್ರಿಯತೆಯು ವೈವಿಧ್ಯಮಯ ಜನರನ್ನು ಒಂದುಗೂಡಿಸುತ್ತಿದೆ. ಆರ್ಸಿಬಿ ಜ್ವರವು ಅಭಿಮಾನಿಗಳ ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿದೆ. ಕ್ರೀಡೆಯು ಜನರ ಭಾವನೆಗಳಿಗೆ ಒಂದು ಆಕರ್ಷಕ ವೇದಿಕೆಯನ್ನು ಒದಗಿಸುತ್ತದೆ. ಆರ್ಸಿಬಿಯ ಗೆಲುವು ಅಭಿಮಾನಿಗಳಿಗೆ ಸಂತೋಷ ಮತ್ತು ಗೌರವದ ಭಾವನೆಯನ್ನು ನೀಡಿದರೆ, ಸೋಲು ಕೂಡ ಉತ್ಸಾಹವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತಿದೆ. ಆರ್ಸಿಬಿ ತಂಡ ಐಪಿಎಲ್ ಇತಿಹಾಸದಲ್ಲಿ ಟ್ರೋಫಿಯನ್ನು ಗೆಲ್ಲದಿರುವುದು, ಅಭಿಮಾನಿಗಳ ಉತ್ಸಾಹ ಕಡಿಮೆಯಾಗದಿರುವುದು, ಈ ತಂಡದೊಂದಿಗಿನ ಭಾವನಾತ್ಮಕ ಬಂಧದ ಶಕ್ತಿಯನ್ನು ತೋರಿಸುತ್ತದೆ. 2009, 2011 ಮತ್ತು 2016ರಲ್ಲಿ ಫೈನಲ್ಗೆ ತಲುಪಿದರೂ ಕಡಿಮೆ ಅಂತರದಲ್ಲಿ ಎದುರಾಳಿ ತಂಡಗಳಿಗೆ ಟ್ರೋಫಿ ಬಿಟ್ಟುಕೊಟ್ಟಿದೆ. ಗೆಲುವಿನ ಕೊರತೆಯು ಅಭಿಮಾನಿಗಳಲ್ಲಿ ನಿಷ್ಠೆಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಈ ಭಾವನೆಯು “ನಾವು ಗೆದ್ದರೂ ಒಟ್ಟಿಗೆ, ಸೋತರೂ ಒಗ್ಗಟ್ಟಾಗಿರುತ್ತೇವೆ” ಎಂಬ ಮನೋಭಾವವನ್ನು ಪ್ರತಿಬಿಂಬಿಸುತ್ತಿದೆ.
ಆರ್ಸಿಬಿಯ ಜನಪ್ರಿಯತೆಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಕುಂಬ್ಳೆ, ದ್ರಾವಿಡ್ನಂತಹ ಹಲವು ಆಟಗಾರರು ತಂಡಕ್ಕೆ ಜಾಗತಿಕ ಮನ್ನಣೆಯನ್ನು ತಂದು ಕೊಟ್ಟಿದ್ದಾರೆ. ಇದರ ಜೊತೆಗೆ, ವಿವಿಧ ಸಾಮಾಜಿಕ ಮಾಧ್ಯಮಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟರ್ ಮುಂತಾದವುಗಳಲ್ಲಿ ಆರ್ಸಿಬಿಯ ಕೋಟ್ಯಂತರ ಅನುಯಾಯಿಗಳಿದ್ದಾರೆ. ಕಪ್ ಗೆಲ್ಲದಿದ್ದರೂ ಈ ಸಲ ಕಪ್ ನಮ್ದೆ ಅಂತ ನಿರಂತರ ಬೆಂಬಲವನ್ನು ನೀಡುತ್ತಲೇ ಇದ್ದಾರೆ. ಈ ಅಭಿಮಾನಿಗಳು ಪ್ರತಿ ವರ್ಷದ ಹರಾಜಿನಲ್ಲಿ ತಂಡದ ಆಯ್ಕೆ ಸರಿ ಇಲ್ಲ ಎಂದು ಟೀಕಿಸುತ್ತಾರೆ, ಚೆನ್ನಾಗಿ ಪ್ರದರ್ಶನ ನೀಡದಿದ್ದರೆ ಆಟಗಾರರನ್ನು ನಿಂದಿಸುತ್ತಾರೆ. ಕೋಚ್ಗಳನ್ನು ಗೇಲಿ ಮಾಡುತ್ತಾರೆ. ತಂಡವನ್ನೇ ಟ್ರೋಲ್ ಮಾಡಿ ಅಪಹಾಸ್ಯ ಮಾಡುವುದು ಉಂಟು. ಆದರೂ ಪಂದ್ಯ ಆರಂಭವಾಯಿತೆಂದರೆ ಆರ್ಸಿಬಿ… ಆರ್ಸಿಬಿ…ಆರ್ಸಿಬಿ ಎಂದು ಕೂಗುತ್ತಾ ಪ್ರೋತ್ಸಾಹಿಸುತ್ತಾರೆ. ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ನಲ್ಲಿ ಕಪ್ ಗೆಲ್ಲದಿದ್ದರೂ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಭರವಸೆ, ಸಂತೋಷ ಮತ್ತು ನಿರೀಕ್ಷೆಯ ಹೊಸ ಭಾಷೆಯನ್ನು ರೂಪಿಸಿದೆ. ಇದು ಕ್ರೀಡೆ ಎಂಬ ಜ್ಞಾನವನ್ನು ಬದುಕಿನ ಭಾಗವನ್ನಾಗಿ ಮಾಡಿದೆ.

ಆರ್ಸಿಬಿಯ ಭಾವನಾತ್ಮಕ ಸಂಬಂಧ ಸೋಲು, ಗೆಲುವನ್ನು ಮೀರಿದ್ದಾಗಿರುತ್ತದೆ. ಈ ಭಾವನಾತ್ಮಕ ಬಂಧಕ್ಕೆ ಸೋಲು ಗೆಲುವಿನ ಹಂಗಿರುವುದಿಲ್ಲ. ಅಭಿಮಾನಿಗಳು ಕ್ರೀಡಾಂಗಣದಲ್ಲಿ ಪಂದ್ಯ ನೋಡುತ್ತಿರಲಿ, ಇಲ್ಲ ಮನೆಯಲ್ಲಿ ನೇರ ಪ್ರಸಾರ ವೀಕ್ಷಿಸುತ್ತಿರಲಿ, ಬಸ್ಸು, ಕಾರು, ಕಚೇರಿಗಳಲ್ಲಿ ಆಗಾಗ ಸ್ಕೋರ್ ತಿಳಿದುಕೊಳ್ಳುತ್ತಿದ್ದರೂ ಅವರ ಮನಸ್ಸಿನಲ್ಲಿ ʼಇದು ನನ್ನ ತಂಡʼ, ʼಇದು ನನ್ನ ನೆಚ್ಚಿನ ಆಟಗಾರರು ಆಡುತ್ತಿರುವ ತಂಡʼ, ʼನನ್ನ ಆರ್ಸಿಬಿಯೇ ಗೆಲ್ಲಬೇಕುʼ ಎಂಬ ಆಶಯವನ್ನೇ ಹೊಂದಿರುತ್ತಾರೆ. ಮನುಷ್ಯನ ಬದುಕು ನಿತ್ಯ ಜಂಜಾಟ, ಒತ್ತಡದಿಂದ ಸಿಲುಕಿರುತ್ತದೆ. ಆದರೆ ಕ್ರೀಡೆಯು ಎಲ್ಲ ಸಮಸ್ಯೆಗಳಿಗೂ ಒಂದಿಷ್ಟು ಸಮಯ ಹುರುಪು, ಸಂತೋಷ ಹಾಗೂ ಚೈತನ್ಯ ನೀಡುತ್ತದೆ. ಕೆಲ ಹೊತ್ತಾದರೂ ಕ್ರೀಡೆಯನ್ನು ನೋಡುತ್ತಾ ತಮ್ಮ ತಂಡದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತ, ಕುತೂಹಲದ ಕ್ಷಣಗಳನ್ನು ಸಂಭ್ರಮಿಸಲು ಸಾಧ್ಯವಾಗುತ್ತದೆ. ಇದಕ್ಕೆ ಐಪಿಎಲ್, ಇಂಗ್ಲಿಷ್ ಪ್ರೀಮಿಯರ್ ಲೀಗ್ನಂತಹ ಹಣಕ್ಕೆ ಪ್ರಾಧಾನ್ಯತೆ ನೀಡುವ ಕ್ರೀಡಾಕೂಟಗಳು ಸೋಲು ಗೆಲುವುಗಳಿಗಿಂತ ಒತ್ತಡವನ್ನು ದೂರ ಮಾಡುತ್ತವೆ. ಕ್ರೀಡೆ ಮಾಡುವ ಮೊದಲ ಕೆಲಸ ಇದಾಗಿದೆ.
ಇದನ್ನು ಓದಿದ್ದೀರಾ? ಸುಂದರ್ ವಿಕೆಟ್ ಕಿತ್ತು ಬೂಮ್ರಾ ಅಬ್ಬರ – ಗುಜರಾತ್ ತತ್ತರ; ಫೈನಲ್ಗಾಗಿ ನಾಳೆ ಮುಂಬೈ-ಪಂಜಾಬ್ ಕಾದಾಟ
ಹಾಗೆ ನೋಡಿದರೆ ಭಾರತದಲ್ಲಿ ಐಪಿಎಲ್ನಂತಹ ಪ್ರೀಮಿಯರ್ ಲೀಗ್ ಎರಡು ದಶಕಗಳಿಂದೀಚೆಗೆ ಬಂದ ಪ್ರೀಮಿಯರ್ ಲೀಗ್. ಅದಕ್ಕೂ ಮುಂಚೆ ಕಪಿಲ್ ದೇವ್ ಇಂಡಿಯನ್ ಕ್ರಿಕೆಟ್ ಲೀಗ್ ಸ್ಥಾಪಿಸಿದ್ದರು. ಆದರೆ ಬಿಸಿಸಿಐ ಮಾನ್ಯತೆ ನೀಡದ ಕಾರಣ ಅದು ಹೆಚ್ಚು ದಿನ ಉಳಿಯಲಿಲ್ಲ. ಭಾರತಕ್ಕೆ ಇಂತಹ ಲೀಗ್ಗಳು ಹೊಸದು ಎಂದು ಹೇಳಬಹುದು. ಫುಟ್ಬಾಲ್ನ ಇಂಗ್ಲಿಷ್ ಪ್ರೀಮಿಯರ್ ಲೀಗ್ ಜಗತ್ತಿನಲ್ಲಿಯೇ ಹೆಚ್ಚು ಖ್ಯಾತಿ ಹಾಗೂ ಹಣಕಾಸು ಹರಿದಾಡುವ ಟೂರ್ನಮೆಂಟ್ ಆಗಿದೆ. ಈ ಲೀಗ್ಗಳಿಗೆ ನೂರು ವರ್ಷಕ್ಕೂ ಹೆಚ್ಚು ಇತಿಹಾಸವಿದೆ. ಆಧುನಿಕ ಒಲಿಂಪಿಕ್ಸ್ ಆರಂಭವಾಗುವುದಕ್ಕಿಂತ ಮೊದಲು ಈ ಲೀಗ್ಗಳು ಶುರುವಾಗಿ ಜನಪ್ರಿಯತೆಯನ್ನು ಗಳಿಸಿದ್ದವು. ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರರಾದ ಮರಡೊನಾ, ಮೆಸ್ಸಿ, ಕ್ರಿಸ್ಟಿಯಾನಾ ರೊನಾಲ್ಡೊ ಸೇರಿದಂತೆ ದಿಗ್ಗಜ ಆಟಗಾರರಿಗೆ ಭಾರತವು ಒಳಗೊಂಡಂತೆ ವಿಶ್ವದ ಹಲವು ದೇಶಗಳಲ್ಲಿ ಕೋಟ್ಯಂತರ ಅಭಿಮಾನಿಗಳಿದ್ದಾರೆ.
ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಆರ್ಸಿಬಿ ಅಭಿಮಾನಿಗಳು
ಹಿರಿಯ ಕ್ರೀಡಾ ಪತ್ರಕರ್ತರಾದ ಸೋಮಶೇಖರ್ ಪಡುಕೆರೆ ಅವರು ಆರ್ಸಿಬಿ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಏರುತ್ತಿರುವುದಲ್ಲದೆ ಸಮೂಹ ಸನ್ನಿಯಾಗಿ ಪರಿವರ್ತನೆಯಾಗುತ್ತಿದೆ. ಕೇವಲ ಅಭಿಮಾನ ಮಾತ್ರವಲ್ಲದೆ ಸಮಾಜಮುಖಿ ಕೆಲಸಗಳಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. ʼಸಣ್ಣ, ಪುಟ್ಟ ಕೆಲಸ ಮಾಡುವವರಾಗಲಿ, ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕಾರ್ಯನಿರ್ವಹಿಸುವವರಾಗಲಿ, ರಿಕ್ಷಾ ಓಡಿಸುವವರಾಗಲಿ, ಹಳ್ಳಿಯಲ್ಲಿ ಕೃಷಿ ಮಾಡುವವರಾಗಲಿ, ಮತ್ತಿನ್ಯಾರೊ ದೆಹಲಿ, ಹೃಷಿಕೇಶದಲ್ಲಿ ತಮ್ಮ, ತಮ್ಮ ಕಾರ್ಯದಲ್ಲಿ ತೊಡಗಿದ್ದರೂ ಆರ್ಸಿಬಿ ಬಗ್ಗೆ ಮಾತನಾಡಿದರೆ, ಥಟ್ಟನೆ ಮರು ಪ್ರತಿಕ್ರಿಯೆ ನೀಡಲಾರಂಭಿಸುತ್ತಾರೆ. ಭಾರತದಲ್ಲಿ ಕ್ರಿಕೆಟ್ ಎನ್ನುವುದು ದೇಶದ ಉಸಿರು ಮತ್ತು ಧರ್ಮವಾಗಿ ಬಿಟ್ಟಿದೆ. ಕ್ರೀಡೆ ಎಲ್ಲರನ್ನು ಒಟ್ಟುಗೂಡಿಸುತ್ತದೆ, ಆದರೆ ಒಟ್ಟುಗೂಡಿಸುವ ರೋಮಾಂಚಕತೆ ಆರ್ಸಿಬಿ ತಂಡದಲ್ಲಿದೆ.ʼ
ಅಭಿಮಾನ ತೋರಿಸುವುದು ಮಾತ್ರವಲ್ಲದೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆರೆಗಳ ಸಂರಕ್ಷಣೆ, ಮಳೆ ನೀರು, ಕುಡಿಯುವ ನೀರಿನ ಬಗ್ಗೆ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಐಪಿಎಲ್ನ ಇತರೆ ತಂಡಗಳು ತಮ್ಮ ತವರು ರಾಜ್ಯಗಳಲ್ಲಿ ಮಾತ್ರ ಅಭಿಮಾನಿಗಳನ್ನು ಹೊಂದಿರುತ್ತಾರೆ. ಆದರೆ ಆರ್ಸಿಬಿ ಯಾವುದೇ ಕ್ರೀಡಾಂಗಣದಲ್ಲಿ ಆಡಿದರೂ ಕೆಂಪು ಜರ್ಸಿ ಮೈದಾನದ ತುಂಬೆಲ್ಲ ಕಂಗೊಳಿಸುತ್ತದೆ. ಗೇಲ್, ವಿರಾಟ್, ಎಬಿಡಿಯಂಥ ಆಟಗಾರರು ಕೂಡ ಅಭಿಮಾನಿಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶ್ವನಾಥ್ ಆನಂದ್ ಚೆಸ್ನಲ್ಲಿ ವಿಶ್ವಖ್ಯಾತಿ ಪಡೆದಿದ್ದರೂ ಅವರಿಗೆ ಹೆಚ್ಚಾಗಿ ಅಭಿಮಾನಿ ಬಳಗವಿಲ್ಲ. ಅವೆಲ್ಲವೂ ಮೆದುಳಿನ ಆಟ, ಆದರೆ ಕ್ರಿಕೆಟ್ನಲ್ಲಿ ಶಾಂತತೆಯಿದೆ, ಆಕ್ರಮಣಶೀಲತೆಯಿದೆ, ಆಟಗಾರರು ಕೂಡ ಪ್ರೇಕ್ಷಕರನ್ನು ಮನರಂಜಿಸುತ್ತಾರೆ ಎಂದು ಪಡುಕೆರೆ ಹೇಳುತ್ತಾರೆ.
ವಿಶ್ವದಲ್ಲೇ ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ʼಆರ್ಸನಲ್ʼ ತಂಡ
ರಾಜಕೀಯ ಕ್ಷೇತ್ರದಲ್ಲಿದ್ದರೂ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಶಶಿಧರ್ ತಿಪಟೂರು. ಅವರು ಕಳೆದ ಕಳೆದ ಮೂರು ದಶಕಗಳಿಂದ ಇಂಗ್ಲಿಷ್ ಪ್ರೀಮಿಯರ್ ಲೀಗ್ನ(ಇಪಿಎಲ್) ʼಆರ್ಸನಲ್ʼ ಫುಟ್ಬಾಲ್ ತಂಡದ ಅಪ್ಪಟ ಅಭಿಮಾನಿಯಾಗಿದ್ದಾರೆ. ಐಪಿಎಲ್ಗೆ ಭಾರತದಲ್ಲಿ ಮಾತ್ರ ಅಭಿಮಾನಿ ಬಳಗವಿದ್ದರೆ, ಫುಟ್ಬಾಲ್ಗೆ ವಿಶ್ವದಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಗಳಿದ್ದಾರೆ. ಇಂಗ್ಲಿಷ್ ಪ್ರೀಮಿಯರ್ ಲೀಗ್ಗೆ ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಆರ್ಸನಲ್, ಮ್ಯಾಂಚೆಸ್ಟರ್, ಲಿವರ್ ಪೂಲ್, ಬಾರ್ಸಿಲೋನಾ ಮುಂತಾದ ಪ್ರೀಮಿಯರ್ ಲೀಗ್ ತಂಡಗಳಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕಳೆದ 35 ವರ್ಷಗಳ ಹಿಂದೆ ಪ್ರಾರಂಭಗೊಂಡ ಆರ್ಸನೆಲ್ ತಂಡಕ್ಕೆ ನನ್ನಂಥ ಸಾಮಾನ್ಯ ವ್ಯಕ್ತಿಯಲ್ಲ, ಸುನಿಲ್ ಗವಾಸ್ಕರ್ನಂತಹ ಕ್ರಿಕೆಟ್ ದಿಗ್ಗಜರು ಕೂಡ ಅಪ್ಪಟ ಅಭಿಮಾನಿಯಾಗಿದ್ದರು ಎಂದು ಶಶಿಧರ್ ತಿಪಟೂರು ಹೇಳುತ್ತಾರೆ.
ʼʼಭಾರತದ ಐಪಿಎಲ್ ಇಂಗ್ಲಿಷ್ ಪ್ರೀಮಿಯರ್ ಲೀಗ್ನ ನಕಲು. ಇಪಿಎಲ್ ಟೂರ್ನಮೆಂಟ್ನಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿರುವುದು ಮ್ಯಾಂಚೆಸ್ಟರ್ ಯೂನೈಟೆಡ್. ಆದರೂ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ತಂಡ ʼಆರ್ಸನಲ್ʼ. ಅದು ಒಂದು ರೀತಿ ಆರ್ಸಿಬಿ ತರಹದ ತಂಡ. ಈ ತಂಡ ಕೂಡ 2004 ರಿಂದ 21 ವರ್ಷಗಳಿಂದ ಟ್ರೋಫಿ ಗೆದ್ದಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ಅಭಿಮಾನಿ ಬಳಗ ಹೆಚ್ಚಾಗುತ್ತಿದೆ. ಮೈದಾನದಲ್ಲಿ ಆರ್ಸನಲ್ ತಂಡ ಆಡುತ್ತಿದೆ ಎಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಆಟಗಾರರ ರೀತಿ ಕೋಚ್ಗಳು ಕೂಡ ಈ ತಂಡಗಳಲ್ಲಿ ಸ್ಟಾರ್ ಆಗಿದ್ದಾರೆ. ಕ್ರಿಕೆಟ್ನಲ್ಲಿ ಹೊಡಿ, ಬಡಿ ಎನ್ನುವುದೇ ಪ್ರಾಮುಖ್ಯವಾಗಿದೆ. ಶಿಸ್ತಾಗಿ ಆಡುವ ರಾಹುಲ್ ದ್ರಾವಿಡ್ ಅವರಿಗಿಂಥ ಧೋನಿ, ಕೊಹ್ಲಿಯಂಥವರೆ ಇದಕ್ಕೆ ಹೆಚ್ಚು ಖ್ಯಾತಿ ಪಡೆಯುತ್ತಾರೆ. ಆದರೆ ಅಚ್ಚುಕಟ್ಟಾದ ಫುಟ್ಬಾಲ್ ಆಡುವುದು ʼಆರ್ಸನಲ್ʼ ತಂಡ. ಆಕ್ರಮಣಶೀಲ ಆಟವಾಡುವುದು ಜರ್ಮನ್ ಆಟಗಾರರು. ಇಂಗ್ಲೆಂಡ್ ಕ್ರಿಕೆಟ್ ಜನ್ಮದಾತನಾದರೂ ಆ ದೇಶದ ಪ್ರತಿ ಮನೆಯಲ್ಲಿಯೂ ಫುಟ್ಬಾಲ್ ಅಭಿಮಾನಿಗಳಿದ್ದಾರೆʼʼ ಎಂದು ಶಶಿಧರ್ ತಿಪಟೂರು ಅವರು ಫುಟ್ಬಾಲ್ ಖ್ಯಾತಿಯ ಬಗ್ಗೆ ವಿವರಿಸುತ್ತಾರೆ.
ಇದನ್ನು ಓದಿದ್ದೀರಾ? ಅರಣ್ಯ ಇಲಾಖೆ ರಾಯಭಾರಿಯಾಗಿ ಕ್ರಿಕೆಟಿಗ ಅನಿಲ್ ಕುಂಬ್ಳೆ ನೇಮಕ
ವ್ಯಾಪಾರಿ ಹಿತಾಸಕ್ತಿ ಮೀರಿ ಬೆಳೆಯುತ್ತಿರುವ ಆರ್ಸಿಬಿ ಅಭಿಮಾನಿ ಬಳಗ
ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ವ್ಯಾಪಾರಿ ಹಿತಾಸಕ್ತಿ ಮೀರಿ ನಿಜವಾದ ಅಭಿಮಾನಿ ಬಳಗವಾಗಿ ಬೆಳೆಯುತ್ತಿದೆ. ವಿಶ್ವದ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ಲಬ್ಗಳಲ್ಲಿ ಆರ್ಸಿಬಿ ಕೂಡ ಒಂದಾಗಿದೆ ಎಂದು ಹಿರಿಯ ಕ್ರೀಡಾ ಪತ್ರಕರ್ತರಾದ ಸುನಿಲ್ ಶಿರಸಂಗಿ ಹೇಳುತ್ತಾರೆ.
ʼʼಕ್ರಿಕೆಟ್ ಕ್ಲಬ್ಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವವರಲ್ಲಿ ಆರ್ಸಿಬಿ ಮೊದಲ ಸ್ಥಾನದಲ್ಲಿದೆ. 18 ವರ್ಷ ಕಪ್ ಗೆಲ್ಲದಿದ್ದರೂ ಅಭಿಮಾನಿಗಳು ದಿನೇ ದಿನೆ ಏರಿಕೆಯಾಗುತ್ತಿದ್ದಾರೆ ವಿನಾ ಕಡಿಮೆಯಾಗುತ್ತಿಲ್ಲ. ಕೇವಲ ಬೆಂಗಳೂರು ಮಾತ್ರವಲ್ಲ ದೆಹಲಿ, ಚಂಡೀಗಢ, ಮತ್ತೆ ಎಲ್ಲಿಯೇ ಆಡಿದರೂ ಆರ್ಸಿಬಿಗೆ ಹೆಚ್ಚು ಅಭಿಮಾನಿಗಳಿರುತ್ತಾರೆ. ತವರು ತಂಡಕ್ಕಿಂತ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರಿಗೆ ಹೆಚ್ಚು ಫ್ಯಾನ್ ಬಳಗವಿದೆ. ಇದಕ್ಕೆ ಬೆಂಗಳೂರು ಒಂದು ಕಾರಣವಾದರೆ, ವಿರಾಟ್ ಮತ್ತೊಂದು ಕಾರಣ, ಅದೆಲ್ಲಕ್ಕಿಂತ ಮುಖ್ಯವಾಗಿ ಕಪ್ ಗೆಲ್ಲದಿರುವುದು ಮತ್ತೊಂದು ಕಾರಣವಾಗಿದೆ. ನಾಲ್ಕನೇ ಬಾರಿ ಫೈನಲ್ ತಲುಪಿರುವ ಆರ್ಸಿಬಿಗೆ ಕಪ್ ಗೆಲ್ಲಲು ಸುವರ್ಣ ಅವಕಾಶವಾಗಿದೆ.ʼʼ
ʼʼಈ ಬಾರಿ ಎದುರಾಳಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಅಷ್ಟು ಸುಲಭವಾಗಿ ಕಡೆಗಣಿಸುವುದು ಸಾಧ್ಯವಿಲ್ಲ. ಆತ ನಾಯಕನಾಗಿ ದೆಹಲಿ ತಂಡವನ್ನು ಮೊದಲ ಬಾರಿಗೆ ಕ್ವಾಲಿಫೈಯರ್ ಹಂತಕ್ಕೆ ತೆಗೆದುಕೊಂಡು ಬಂದಿದ್ದರು. ಕೆಕೆಆರ್ಗೆ ಕಪ್ ಗೆಲ್ಲಿಸಿ ಕೊಟ್ಟಿದ್ದರು. ಈಗ ಪಂಜಾಬ್ ತಂಡವನ್ನು 11 ವರ್ಷಗಳ ನಂತರ ಎರಡನೇ ಬಾರಿಗೆ ಫೈನಲ್ಗೆ ಹಂತಕ್ಕೆ ತೆಗೆದುಕೊಂಡು ಬಂದಿದ್ದಾರೆ. ನಾಯಕನಾಗಿ ದೊಡ್ಡ ಸಾಧನೆಯನ್ನೇ ಶ್ರೇಯಸ್ ಮಾಡಿದ್ದಾರೆ. ಫೈನಲ್ ನಡೆಯುವ ಅಹಮದಾಬಾದ್ ಕ್ರೀಡಾಂಗಣ ಪಂಜಾಬ್ಗೆ ಹೆಚ್ಚು ಸೂಕ್ತವಾಗಿದೆ. ಖಂಡಿತಾ ನಾಳೆ ರೋಚಕ ಹಣಾಹಣಿ ನಡೆಯಲಿದೆ. ವಿರಾಟ್ ಕೊಹ್ಲಿಗೂ ಕೂಡ ಇದು ಮಹತ್ವದ ಪಂದ್ಯ. ವಿರಾಟ್ಗೆ ಐಪಿಎಲ್ ಟ್ರೋಫಿ ಬಿಟ್ಟು ಎಲ್ಲ ಮಹತ್ವದ ಟೂರ್ನಿಗಳಲ್ಲಿ ಭಾಗವಾಗಿದ್ದಾರೆ. ಭಾರತ ತಂಡ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್, ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ತಂಡದ ಸದಸ್ಯರಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಈ ಕಾರಣಕ್ಕಾಗಿ ಇಡೀ ತಂಡ ವಿರಾಟ್ಗಾಗಿ ಆಡಲಿದೆʼʼ ಎಂದು ಸುನಿಲ್ ಶಿರಸಂಗಿ ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಒಟ್ಟಾರೆ, ಆರ್ಸಿಬಿ ಜ್ವರವು ಕೇವಲ ಕ್ರೀಡೆಯ ವಿಷಯವಾಗಿ ಉಳಿಯದೆ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾವನಾತ್ಮಕ ಒಗ್ಗಟ್ಟಿನ ಸಂಕೇತವಾಗಿದೆ. ಇದು ಅಭಿಮಾನಿಗಳಿಗೆ ತಮ್ಮ ಗುರುತನ್ನು ವ್ಯಕ್ತಪಡಿಸಲು, ಸಂತೋಷವನ್ನು ಹಂಚಿಕೊಳ್ಳಲು ಮತ್ತು ಸಮುದಾಯದ ಭಾಗವಾಗಿರಲು ಅವಕಾಶ ನೀಡುತ್ತದೆ.