ಬೇರೆಯವರ ಹೆಸರಿಗೆ ಅಕ್ರಮವಾಗಿ ನಿವೇಶನ ನೋಂದಣಿ ಮಾಡಿಕೊಟ್ಟು, ದಾಖಲೆಗಳನ್ನು ನಾಶಪಡಿಸಲು ಮುಂದಾಗಿದ್ದ ಆರೋಪದಡಿ ಯಾದಗಿರಿ ನಗರಸಭೆಯ ಇಬ್ಬರು ಹಾಗೂ ಶಹಾಪುರದ ನಗರಸಭೆಯ ಒಬ್ಬ ಸಿಬ್ಬಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಯಾದಗಿರಿ ನಗರಸಭೆಯ ಕಂದಾಯ ನಿರೀಕ್ಷಕ ಮಾನಪ್ಪ ಬಡಿಗೇರ, ಪ್ರಭಾರ ಆರ್‌ಐ ಮೈನೋದ್ದೀನ್ ಮಹಮ್ಮದ್ ಹಜರತ್ ಹಾಗೂ ಶಹಾಪುರ ನಗರಸಭೆಯಲ್ಲಿ ನೀರು ಸರಬರಾಜು ವಿಭಾಗದ ಮೇಲ್ವಿಚಾರಕ ಹಣಮಂತಪ್ಪ ಆಶನಾಳ ಬಂಧಿತರು ಎಂದು ತಿಳಿದು ಬಂದಿದೆ.
ಮಲ್ಲಮ್ಮ ಎಂಬುವವರಿಗೆ ನಿವೇಶನವನ್ನು ಅಕ್ರಮವಾಗಿ ನೋಂದಣಿ ಮಾಡಿಕೊಟ್ಟ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಚಾರಣೆ ನಡೆದಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶವಾಗಿದೆ. ಈ ವಿಷಯ ತಿಳಿದ ಈ ಮೂವರು ಸಿಬ್ಬಂದಿ ರಜೆ ದಿನವಾದ ಭಾನುವಾರ (ಜೂ.1) ಅಕ್ರಮವಾಗಿ ನಗರಸಭೆ ಕಚೇರಿಗೆ ನುಗ್ಗಿ ಅಲ್ಲಿನ ದಾಖಲೆಗಳನ್ನು ಮರೆಮಾಚಿ ನಾಶಪಡಿಸುವ ಹುನ್ನಾರಕ್ಕೆ ಮುಂದಾಗಿದ್ದಾರೆ ಎಂದು ಯಾದಗಿರಿ ನಗರಸಭೆ ಪೌರಾಯುಕ್ತ ಉಮೇಶ ಚವಾಣ್ ಅವರು ನಗರ ಠಾಣೆಗೆ ದೂರು ನೀಡಿದ್ದರು.
ಯಾದಗಿರಿ ಸೀಮಾಂತರದ ಸರ್ವೆ ನಂ.151ರಲ್ಲಿನ ನಿವೇಶನ ಸಂಖ್ಯೆ 42 ಅನ್ನು ಮಲ್ಲಮ್ಮ ರಾಮಣ್ಣ ಅವರ ಹೆಸರಿಗೆ ಮಾಡಿಕೊಟ್ಟಿದ್ದ ಈ ಮೂವರು, ಭಾನುವಾರ ಸಂಜೆ 4ರ ಸುಮಾರಿಗೆ ನಗರಸಭೆ ಕಚೇರಿಗೆ ಬಂದು, ಅಲ್ಲಿದ್ದ ಕಾವಲುಗಾರ ತಿಪ್ಪಣ್ಣ ಅವರನ್ನು ಬೆದರಿಸಿ ಕಚೇರಿ ಬೀಗ ತೆಗೆದುಕೊಂಡು ಕೋಣೆಗಳಿಗೆ ಹೋಗಿ ಹಲವು ಕಡತಗಳನ್ನು ಪರಿಶೀಲಿಸಿ ಅಕ್ರಮ ಎಸಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ವೇಳೆ ಒಬ್ಬ ಸಾರ್ವಜನಿಕ ವ್ಯಕ್ತಿ ಅಲ್ಲಿರುವುದು ಕಾಣಿಸಿದೆ ಎಂದು ನಗರಸಭೆ ಪೌರಾಯುಕ್ತರು ದೂರಿನಲ್ಲಿ ತಿಳಿಸಿದ್ದಾರೆ
ಇದನ್ನೂ ಓದಿ : ಕಲಬುರಗಿ | ಆನ್‌ಲೈನ್ ಗೇಮಿಂಗ್ : ಸಾಲ ತೀರಿಸಲಾಗದೆ ವ್ಯಕ್ತಿ ಆತ್ಮಹತ್ಯೆ