ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಹಾವು ಕಚ್ಚಿ ಇಬ್ಬರು ಮಹಿಳೆಯರು ಒಂದೇ ದಿನ ಮೃತಪಟ್ಟಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇಬ್ಬರು ಮಹಿಳೆಯರ ಸಾವಿಗೆ ಹದಗೆಟ್ಟ ವೈದ್ಯಕೀಯ ವ್ಯವಸ್ಥೆ, ವೈದ್ಯರ ನಿರ್ಲಕ್ಷ್ಯಗಳೇ ಕಾರಣವೆಂದು ಆರೋಪಿಸಲಾಗಿದೆ.
ತಾಲೂಕಿನ ಹಿರೇಬನ್ನಿಮಲ್ಲು ಗ್ರಾಮದ ವೀಣಾ ಎಂಬುವವರಿಗೆ ಹಾವು ಕಚ್ಚಿತ್ತು. ಅವರನ್ನು ಕುಟುಂಬಸ್ಥರು ಹಾಗೂ ಸ್ಥಳೀಯ ಹೋರಾಟಗಾರರು ಒಗ್ಗೂಡಿ ಹೊಳಲು ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಮಹಿಳೆ ಮೃತಪಟ್ಟಿದ್ದಾರೆ” ಎಂದು ಹೋರಾಟಗಾರ ಬಸವ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತಾಲೂಕು ವೈದ್ಯಾಧಿಕಾರಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಡಗಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ. ಸಂದೀಪ್ ಎಂಬುವವರು ಇದ್ದಾರೆ. ಅವರು ಆ ಮಹಿಳೆಯನ್ನು ಪರೀಕ್ಷಿಸಿದ್ದಾರೆ. ಆ ವೇಳೆಗಾಗಲೇ ನಾಡಿ ಮಿಡಿತ, ಹೃದಯ ಬಡಿತ ನಿಂತುಹೋಗಿತ್ತು ಎಂದು ತಿಳಿದುಬಂದಿದೆ. ಸಿಪಿಆರ್‌ಗೆ ಟ್ರೈ ಮಾಡಿದ್ದಾರೆ. ಆದೂ ಕೂಡ ಫಲಿಸಿಲ್ಲ” ಎಂದು ತಿಳಿಸಿದರು.
“ಹೊಳಲು ಆಸ್ಪತ್ರೆಗೆ ಬಂದ ಮಹಿಳೆಗೆ ಅಂದು ಬೆಳಿಗ್ಗೆಯೇ ಹಾವು ಕಚಿತ್ತು. ಆದರೆ, ಅವರು ಮದ್ಯಾಹ್ನದ ವೇಳೆಗೆ ಕರೆತಂದಿದ್ದಾರೆ. ಆ ವೇಳೆಗಾಗಲೇ ಆಕೆಯ ದೇಹಕ್ಕೆ ವಿಷ ಹರಡಿತ್ತು. ಇದಕ್ಕೂ ಮುನ್ನ ರೋಗಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಯೇ ಇಸಿಜಿ ರಿಪೋರ್ಟ್ ಫುಲ್ ಫ್ಲಾಟ್ ಆಗಿ ಬಂದಿದೆ. ಅವರು ಜೀವವಿಲ್ಲವೆಂದು ಹೇಳಿದರೂ ಆಕೆಯ ಕುಟುಂಬದವರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ” ಎಂದರು.
“ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿಫಿಬ್ರಿಲೇಟರ್ ಇರುವುದಿಲ್ಲ, ಸಿಪಿಆರ್, ವೆಂಟಿಲೇಟರ್‌ಗಳಿರುವುದಿಲ್ಲ, ಘಟನೆ ನಡೆದ ಕೂಡಲೇ ಕರೆತಂದರೆ ಪ್ರಥಮ ಚಿಕಿತ್ಸೆ ನೀಡಿ ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ರವಾನಿಸುತ್ತೇವೆ. ಆದರೆ, ಕೊನೆ ಕ್ಷಣದಲ್ಲಿ ಬಂದರೆ ನಾವು ತಾನೆ ಏನು ಮಾಡಲು ಸಾಧ್ಯ” ಎಂದು ಬೇಸರ ವ್ಯಕ್ತಪಡಿಸಿದರು.
“ಆಸ್ಪತ್ರೆಯಲ್ಲಿ ಮೂವರು ವೈದ್ಯರಿರುವ ಕಡೆ ಒಬ್ಬರೇ ವೈದ್ಯರಿದ್ದಾರೆ. ಒಬ್ಬರೇ ಸ್ಟಾಫ್ ನರ್ಸ್ ಇದ್ದರು ಈಗ ನಿನ್ನೆಯಷ್ಟೇ ಒಬ್ಬರು ನರ್ಸ್‌ಗಳನ್ನು ನೇಮಕ ಮಾಡಿಕೊಂಡಿದ್ದೇವೆ. ಡಿ ಗ್ರೂಪ್ ನೌಕರರಿಲ್ಲ. ಲ್ಯಾಬ್ ಟೆಕ್ನಿಷಿಯನ್ ಇಲ್ಲ. ಇವೆಲ್ಲವನ್ನೂ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತಂದಿದ್ದೇವೆ. ಆದರೆ, ಅವರು ನಮಗೆ ರಾಜ್ಯದಿಂದ ಅನುಮತಿ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ” ಎಂದು ಹೇಳಿದರು.
ಘಟನೆ ಹಿನ್ನೆಲೆ
ಎರಡು ಪ್ರತ್ಯೇಕ ಘಟನೆಗಳಲ್ಲಿ ಹಾವು ಕಚ್ಚಿ, ತುರ್ತು ಚಿಕಿತ್ಸೆ ದೊರೆಯದೆ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ನಡೆದಿತ್ತು. ವೀಣಾ(26) ಮತ್ತು ಹುಲಿಗೆಮ್ಮ(49) ಮೃತ ಮಹಿಳೆಯರು.
ವೀಣಾ ಅವರು ಹಡಗಲಿ ತಾಲೂಕಿನ ಹಿರೇಬನ್ನಿಮಲ್ಲು ಗ್ರಾಮದವರಾಗಿದ್ದು, ಹುಲಿಗೆಮ್ಮ ಅಂಗೂರು ಗ್ರಾಮದವರು. ವೀಣಾ ಮೆಕ್ಕೆಜೋಳ ಕೊಯ್ಯಲೆಂದು ಹೊಲಕ್ಕೆ ಹೋಗಿದ್ದಾಗ ಹಾವು ಕಚ್ಚಿದೆ. ಹುಲಿಗೆಮ್ಮ ಚಿಂಚಲಿಯಲ್ಲಿ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ. ಈ ಇಬ್ಬರೂ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸರಿಯಾದ ಚಿಕಿತ್ಸೆ ದೊರೆಯದೆ ಇಬ್ಬರೂ ಮೃತಪಟ್ಟಿದ್ದರು.