ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ 36 ನಕಲಿ ನೋಟುಗಳು ವಶಪಡಿಸಿ 10 ಜನ ಆರೋಪಿಗಳನ್ನು ಮಾನ್ವಿ ಪೊಲೀಸರು ಬಂಧಿಸಿದ್ದಾರೆ.
ಸೀಕಲ್ ಸಮೀಪದ ಚಹಪುಡಿ ಕ್ಯಾಂಪಿನ ನಿವಾಸಿ ವಿರೂಪಾಕ್ಷಿ, ಶೇಖರ್, ಶಾಸ್ತ್ರೀ ಕ್ಯಾಂಪಿನ ಹುಸೇನ್ ಬಾಷಾ, ಮಾಚನೂರು ಗ್ರಾಮದ ಖಾಜಾ ಹುಸೇನ್, ಸಿರವಾರ ಪಟ್ಟಣದ ಸಿದ್ದನಗೌಡ, ಅಮರೇಶ ಗಡ್ಡೆರಾಯನ ಕ್ಯಾಂಪ್, ಮಾನ್ವಿ ಪಟ್ಟಣದ ಅಜ್ಮೀರ್, ಸಿಂಧನೂರಿನ ಆಲಂ ಬಾಷಾ, ರಾಯಚೂರಿನ ನರಸಯ್ಯ ಶೆಟ್ಟಿ, ಕಾರಟಗಿಯ ಭೀಮೇಶ ಬಂಧಿತರು ಎನ್ನಲಾಗಿದೆ.
ಮೇ 13ರಂದು ಪಟ್ಟಣದ ಇಂಡಿಯನ್ ಬ್ಯಾಂಕ್ ಶಾಖೆಯ ಎಟಿಎಂ ಕೇಂದ್ರದಲ್ಲಿ ಸೀಕಲ್ ಗ್ರಾಮ ಸಮೀಪದ ಚಹಪುಡಿ ಕ್ಯಾಂಪ್ ನಿವಾಸಿ ವಿರೂಪಾಕ್ಷಿ ಎನ್ನುವವರು ಇಂಡಿಯನ್ ಬ್ಯಾಂಕಿನ ತಮ್ಮ ಖಾತೆಗೆ ₹18 ಸಾವಿರ ಮೊತ್ತದ ₹500 ಮುಖ ಬೆಲೆಯ 36 ಖೋಟಾ ನೋಟುಗಳನ್ನು ಜಮಾ ಮಾಡಿರುವುದನ್ನು ಬ್ಯಾಂಕಿನ ವ್ಯವಸ್ಥಾಪಕ ಪತ್ತೆ ಹಚ್ಚಿ ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹಾಗೂ ಸಿಂಧನೂರು ಡಿವೈಎಸ್ಪಿ ಬಿ.ಎಸ್.ತಳವಾರ ಮಾರ್ಗದರ್ಶನದಲ್ಲಿ ಪಿಐ ಸೋಮಶೇಖರ ಎಸ್. ಕೆಂಚರೆಡ್ಡಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬ್ಯಾಂಕಿನಲ್ಲಿ ಜಮಾ ಮಾಡಿದ್ದ ₹18 ಸಾವಿರ ಮೊತ್ತದ ₹500 ಮುಖಬೆಲೆಯ 36 ಖೋಟಾನೋಟುಗಳು, ಒಂದು ಕಾರ್, ನಾಲ್ಕು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜೋಳ ಖರೀದಿ ಆರಂಭಿಸಲು ಒತ್ತಾಯಿಸಿ ಸಿಂಧನೂರು ಬಂದ್
ಪಿಐ ಸೋಮಶೇಖರ ಎಸ್. ಕೆಂಚರೆಡ್ಡಿ, ನೇತೃತ್ವದ ಪೊಲೀಸ್ ಸಿಬ್ಬಂದಿ ತಂಡದ ಕಾರ್ಯಚರಣೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.