“2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ನೆಲಕಚ್ಚಲಿದ್ದು, ಬಿಜೆಪಿ ಮತ್ತು ಅವರ ಮಿತ್ರಪಕ್ಷಗಳೆಲ್ಲ ಸೋಲುತ್ತವೆ. ಹಾಗೆಯೇ ಯುಪಿಎ ಮಿತ್ರಪಕ್ಷಗಳು ಹೆಚ್ಚಿನ ಸ್ಥಾನ ಗೆಲ್ಲಲಿವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬೆಂಗಳೂರಿನಲ್ಲಿ ದೇಶದ ಪ್ರತಿಪಕ್ಷಗಳ ನಾಯಕರ ಸಭೆ ನಡೆಯುತ್ತಿದೆ. ಇದು ಎರಡನೇ ಸಭೆ, ಮೊದಲ ಸಭೆ ಹಿಮಾಚಲ ಪ್ರದೇಶದಲ್ಲಿ ನಡೆದಿತ್ತು. ಸುಮಾರು 24 ಪಕ್ಷಗಳ ನಾಯಕರು ನಾಳೆ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯನ್ನು ಒಟ್ಟುಗೂಡಿ ನಡೆಸಬೇಕು ಎಂಬುದು ಸಭೆಯ ಉದ್ದೇಶ. ಹಾಗಾಗಿ ನಾಳೆ ಚರ್ಚೆ ನಡೆಯಲಿದೆ. ನಾಳೆ ಏನು ಚರ್ಚೆ ಆಗುತ್ತಿದೆ ನೋಡೋಣ” ಎಂದು ಹೇಳಿದರು.
ಬಿಜೆಪಿ ಅವನತಿ ಕರ್ನಾಟಕದಿಂದಲೇ ಶುರುವಾಗಿದೆ
‘ಮೋದಿಯನ್ನು ಎದುರಿಸಲು ಆಗದಿರುವ ಕಾರಣಕ್ಕೆ ವಿಪಕ್ಷಗಳ ನಾಯಕರೆಲ್ಲರೂ ಒಟ್ಟಾಗುತ್ತಿದ್ದಾರೆ’ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರೀಯೆ ನೀಡಿದ ಅವರು, “ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಅವರು 28 ಬಾರಿ ಕರ್ನಾಟಕಕ್ಕೆ ಬಂದಿದ್ದರು, ಅವರು ಹೋದ ಕಡೆಗಳಲೆಲ್ಲಾ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮೋದಿಯನ್ನು ನಾವು ಸಮರ್ಥವಾಗಿ ಎದುರಿಸಿಲ್ಲವೇ ನಾವು? ಬಿಜೆಪಿ ಅವರ ಅವನತಿ ಕರ್ನಾಟಕದಿಂದಲೇ ಶುರುವಾಗಿದೆ” ಎಂದರು.
‘ಆತಂಕದಿಂದ ಬದುಕುವ ಸ್ಥಿತಿ ಬಿಜೆಪಿ ಕೊಡುಗೆ‘
ದೇಶವನ್ನು ಲೂಟಿ ಮಾಡಿದವರೆಲ್ಲ ಒಟ್ಟಿಗೆ ಸೇರುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರೀಯಿಸಿ, “ಈ ದೇಶದ ಆರ್ಥಿಕತೆಯನ್ನು ಹಾಳು ಮಾಡಿರುವವರೇ ಬಿಜೆಪಿಯವರು. ರೈತರು, ಬಡವರು, ದೀನ ದಲಿತರು, ಹಿಂದುಳಿದವರು ಯಾರೂ ಕೂಡ ಇಂದು ಬದಕಲು ಸಾಧ್ಯವಾಗದಿರುವ ಪರಿಸ್ಥಿತಿ ಇದೆ. ಅದರ ಜೊತೆಗೆ ಕೋಮುವಾದದಿಂದ ಎಲ್ಲರೂ ನೆಮ್ಮದಿ ಕಳೆದುಕೊಂಡಿದ್ದಾರೆ. ಆತಂಕದಿಂದ ಬದುಕು ಸ್ಥಿತಿ ನಿರ್ಮಾಣವಾಗಿದೆ, ಇದು ಬಿಜೆಪಿಯ ಕೊಡುಗೆ” ಎಂದು ತಿರುಗೇಟು ನೀಡಿದರು.
ಈ ಸುದ್ದಿ ಓದಿದ್ದೀರಾ? ಅಸ್ತಿತ್ವಕ್ಕಾಗಿ ಬೆಂಗಳೂರಿನಲ್ಲಿ ಪ್ರತಿಪಕ್ಷಗಳು ಶೋ ಮಾಡುತ್ತಿವೆ: ಬಸವರಾಜ ಬೊಮ್ಮಾಯಿ ಟೀಕೆ
‘ಪಕ್ಷ ಉಳಿಸಲು ಜೆಡಿಎಸ್ ತನ್ನ ಸಿದ್ಧಾಂತ ಬಲಿ ಕೊಡುತ್ತಿದೆ‘
‘ಹಿಂದೆ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 21 ವಿಪಕ್ಷಗಳ ನಾಯಕರು ಬಂದು ಕೈ ಎತ್ತಿ ಹೋದರು ಅಷ್ಟೇ ಯಾರೂ ಸಪೋರ್ಟ್ ಮಾಡಲಿಲ್ಲ. ಸಮ್ಮಿಶ್ರ ಸರ್ಕಾರ ಕೂಡ ಪಥನವಾಯಿತು’ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರೀಯಿಸಿ, “ಹಿಂದೆ ವಿಪಕ್ಷಗಳ ನಾಯಕರನ್ನು ಕರೆದಿದ್ದು ಕುಮಾರಸ್ವಾಮಿ ಅಲ್ಲವೇ? ಸಭೆ ಕರೆದು ಅಲ್ಲಿಗೆ ಸುಮ್ಮನಾದರು ಸಂಬಂಧವನ್ನು ಮುಂದುವರಿಸಲಿಲ್ಲ. ಹಾಗಾಗಿ ಅದು ಅಲ್ಲಿಗೆ ನಿಂತುಹೋಯಿತು. ಅವರೆಲ್ಲ ಬಂದಿದ್ದರು ಹೋದರು” ಎಂದರು.
ಸಿದ್ದಾಂತಗಳು ಇಲ್ಲದಿರುವ ಪಕ್ಷಗಳು ಒಂದು ಕಡೆಗೆ ಬರುತ್ತಿವೆ, ನಾವು ಎನ್‌ಡಿಎ ಕಡೆಗೆ ನೋಡಿದರೆ ತಪ್ಪೇನು? ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿ, “ಜೆಡಿಎಸ್‌ಗೆ ಸಿದ್ಧಾಂತವೇ ಇಲ್ಲವಲ್ರಿ, ಯಾವ್ ಸಿದ್ಧಾಂತ ಇದೆ, ಏನು ಅವರ ಸಿದ್ಧಾಂತ? ಬಿಜೆಪಿ ಜೊತೆಗೆ ಹೋದಮೇಲೆ ಎಲ್ಲಿದೆ ಜಾತ್ಯಾತೀತ ವಾದ? ಬಿಜೆಪಿ ಜೊತೆಗೆ ಹೋದರೂ ಜಾತ್ಯಾತೀತ ಪಕ್ಷನಾ ಅದು? ಪಕ್ಷ ಉಳಿಬೇಕು ಎನ್ನುವುದೇ ಮುಖ್ಯವಾದರೆ, ಯಾವುದೇ ಸಿದ್ಧಾಂತ ಇಲ್ಲ ಅಂತ ಆಯ್ತಲಾ” ಎಂದು ಕಿಡಿಕಾರಿದರು.