ಮೈಸೂರು ಜಿಲ್ಲೆ, ಹೆಚ್ ಡಿ ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಂತೆ ಆಗ್ರಹಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಹೆಚ್ ಡಿ ಕೋಟೆ ಹಾಡಿಗಳಲ್ಲಿ ಆದಿವಾಸಿ, ಬುಡಕಟ್ಟು ಜನರು ವಾಸ ಮಾಡುವಲ್ಲಿ ಬಾರ್, ರೆಸ್ಟೋರೆಂಟ್ ಗಳನ್ನು ಕಟ್ಟಲು ಅವಕಾಶ ಮಾಡಿಕೊಟ್ಟಿದೆ ಸರ್ಕಾರ. ಅದೇ ಸರ್ಕಾರಿ ಶಾಲೆಗಳನ್ನು ಕಟ್ಟಲು ಅವಕಾಶ ಮಾಡಿಲ್ಲ. ಇರುವುದನ್ನು ಉಳಿಸಿಕೊಳ್ಳುತ್ತಿಲ್ಲ. ಸರ್ಕಾರಿ
ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಗೋಜಿಗೆ ಹೋಗಿಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಖಜಾಂಜಿ ಸುಭಾಷ್ ಬೆಟ್ಟದ ಕೊಪ್ಪ ಮಾತನಾಡಿ ” ರಾಜ್ಯ ಸರ್ಕಾರ ಕಡಿಮೆ ದಾಖಲಾತಿಯ ನೆಪವೊಡ್ಡಿ 6200 ಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಈ ನಡುವೆಯೇ ಸರ್ಕಾರ ಸದ್ದು ಗದ್ದಲ ವಿಲ್ಲದೆ ಈ ಶೈಕ್ಷಣಿಕ ವರ್ಷದಲ್ಲಿ 473 ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಪರೋಕ್ಷವಾಗಿ ಹುನ್ನಾರ ನಡೆಸಿದ್ದಾರೆ ” ಎಂದು ಆರೋಪಿಸಿದರು.
” ಹಾಡಿ ಪ್ರದೇಶದ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟಲು ಅವಕಾಶ ಇಲ್ಲ ಎಂದು ಹೇಳುತ್ತಾರೆ, ಆದರೆ, ಬಾರ್, ರೆಸ್ಟೋರೆಂಟ್ ಕಟ್ಟಲು, ರಾತ್ರೋರಾತ್ರಿ ಪರ್ಮಿಷನ್ ಕೊಡುತ್ತಾರೆ. ಸರ್ಕಾರಿ ಶಾಲೆಗೆ ಕಟ್ಟಡ ಕಟ್ಟಲು ಯಾವುದೇ ಅನುಮತಿ ಇಲ್ಲ ಎಂದು ಹೇಳುತ್ತಾರೆ. ಡಿ ಬಿ ಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ನಾಲ್ಕು ಬಾರ್ ಗಳನ್ನು ತೆರೆದಿದ್ದಾರೆ. ಬಾರ್ ಗಳನ್ನು ಕಟ್ಟುವ ಇಚ್ಛಾ ಶಕ್ತಿ ಸರ್ಕಾರಕ್ಕಿದೆ, ಆದರೆ, ಸರ್ಕಾರಕ್ಕೆ ಸರ್ಕಾರಿ ಶಾಲೆಗಳನ್ನು ಕಟ್ಟಲು, ಉಳಿಸಲು ಇಚ್ಛಾಸಕ್ತಿ ಇಲ್ಲ ” ಎಂದು ಕಿಡಿಕಾರಿದರು.

ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ಎಚ್ ಡಿ ಕೋಟೆ ಭಾಗದ ಆನೆಮಾಳ, ಗೋಳೂರು, ಬಳ್ಳೆ ಹಾಡಿಗಳಲ್ಲಿರುವ ಶಾಲೆಗಳಿಗೆ ಹೋಗಿ ನೋಡಿದಾಗ ಶಾಲೆಯ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಬಹುಪಾಲು ಶಾಲೆಗಳಲ್ಲಿ ಅತಿ ಹೆಚ್ಚು ಅಂದರೆ ಹೆಡ್ ಮಾಸ್ಟರ್ ಅನ್ನು ಒಳಗೊಂಡಂತೆ ಇಬ್ಬರು ಶಿಕ್ಷಕರು ಇದ್ದಾರೆ. ಕಟ್ಟಡಗಳು ದುರಸ್ತಿಗೆ ಬಂದಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸರಿಯಾದ ಶೌಚಾಲಯಗಳು ಇಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದ ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸರ್ಕಾರದ ಶಾಲೆಗಳ ಪ್ರವೇಶ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ,ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ಮುಂದೆ ಬರುವುದಿಲ್ಲ ಎಂಬ ಕಾರಣವನ್ನು ಕೊಟ್ಟಿದ್ದಾರೆ.
ಪೋಷಕರು ಇಂಗ್ಲಿಷ್ ಮಾಧ್ಯಮದ ಹಿಂದೆ ಓಡುತ್ತಿದ್ದಾರೆ ಮತ್ತು ಖಾಸಗಿ ಶಾಲೆಗಳ ಮೇಲೆ ಅವರಿಗೆ ಅತಿಯಾದ ಪ್ರೀತಿಯಿದೆ ಎಂದು ಹೇಳಿದ್ದಾರೆ. ಸಚಿವರು ದಾಖಲಾತಿ ಪ್ರಮಾಣದ ಕುಸಿತಕ್ಕೆ ಪೋಷಕರನ್ನೇ ಹೊಣೆದಾರರನ್ನಾಗಿ ಮಾಡಿದ್ದಾರೆ. ಮೂಲಸೌಕರ್ಯ ಉತ್ತಮವಾಗಬೇಕು ಎಂದು ಹೇಳಿದರೂ ಸಹ, ಪೋಷಕರು ಇದಕ್ಕೆ ಚಿಂತೆ ಮಾಡದೆ ಮಕ್ಕಳನ್ನು ಕಳುಹಿಸಬೇಕು ಎನ್ನುವ ಮೂಲಕ, ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ಲೇವಡಿ ಮಾಡಿದರು.
ಕಳೆದ ಆರು ವರ್ಷಗಳಲ್ಲಿ 3378 ಖಾಸಗಿ ಶಾಲೆಗಳಿಗೆ ಸರ್ಕಾರಗಳು ಪರವಾನಗಿ ನೀಡಿದೆ. ಈ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ. ದಿನಗೂಲಿ ಕಾರ್ಮಿಕ, ಕಟ್ಟಡ ಕಾರ್ಮಿಕರ ಮತ್ತು ಬಡ ರೈತರ ಮಕ್ಕಳು ಓದಲು ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಅತಿವೃಷ್ಟಿಯಿಂದ ಮನೆ ಹಾನಿ ; ಉದಾರತೆಯಿಂದ ವರದಿ ನೀಡಿ, ಪರಿಹಾರ ವಿತರಿಸಿ : ಶಾಸಕ ಎ ಎಸ್ ಪೊನ್ನಣ್ಣ
ಪ್ರತುಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ನಿತಿನ್, ಪದಾಧಿಕಾರಿಗಳಾದ ಅಭಿಷೇಕ್, ನಂದೀಶ್, ಸ್ಥಳೀಯರಾದ ರಾಮು, ಶ್ರೀನಿವಾಸ್ ಮೂರ್ತಿ, ಶಿವಕುಮಾರ್ , ಸಂಜು, ಅಖಿಲ ಭಾರತ ಜನ ಸುರಕ್ಷಾ ಸಮಿತಿ ಸಂಚಾಲಕ ಸುನಿಲ್ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಇದ್ದರು.