ಕಳೆದ ತಿಂಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಯಾದ ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ಮೇ 12ರಂದು ಬಂಟ್ವಾಳದ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದ ಹಾಲ್‌ನಲ್ಲಿ ಇತ್ತೀಚೆಗೆ ಕೊಲೆಯಾದ ರೌಡಿಶೀಟರ್ ಸುಹಾಸ್ ಶೆಟ್ಟಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್ ದ್ವೇಷ ಭಾಷಣ ಮಾಡಿದ್ದರು.
ಇದನ್ನು ಓದಿದ್ದೀರಾ? ಬಂಟ್ವಾಳ | ಪ್ರಚೋದನಕಾರಿ ಭಾಷಣ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲು
ಈ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್ ಮತೀಯ ಗುಂಪುಗಳ ನಡುವೆ ವೈಮನಸ್ಸು ಉಂಟು ಮಾಡುವಂತೆ ಪ್ರಚೋದನಾತ್ಮಕವಾಗಿ ಭಾಷಣ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಆರೋಪಿಸಿ ದೂರು ದಾಖಲಾಗಿತ್ತು. ಬಂಟ್ವಾಳ ಗ್ರಾಮೀಣ ಠಾಣೆಗೆ ಪಿಎಸ್ಐ ಟಿ ಮಂಜುನಾಥ್ ದೂರು ನೀಡಿದ್ದಾರೆ.
“ರೌಡಿಗಳಾಗಿರಲಿ ಅವರೂ ದೇಶಪ್ರೇಮಿಗಳು. ಅವರು ಧರ್ಮ ರಕ್ಷಣೆ ಮಾಡುವವರು. ಮನುಷ್ಯ ಇವತ್ತಲ್ಲಾ ನಾಳೆ ಸಾಯುವುದೇ. ಅದಕ್ಕೆ ನೀವು ಹೆದರಬೇಕಾಗಿಲ್ಲ. ಇದನ್ನು ಸುಹಾಸ ನೆನಪಿಟ್ಟುಕೊಂಡು ಹೋರಾಟ ಮಾಡಿದ್ದಾನೆ” ಎಂದು ಪ್ರಭಾಕರ್ ಭಟ್ ಹೇಳಿದ್ದರು.
“ಬ್ಯಾರಿಯೇ ಮತಾಂತರ ಮಾಡಲಿಕ್ಕೆ ಪ್ರೇರಣೆ ನೀಡುವಂಥದ್ದು, ಬ್ಯಾರಿಯೇ ಆಕ್ರಮಣ ಮಾಡಿರುವುದು ತುಂಬಾ ಇದೆ. ನಾವು ನರಿ ನಾಯಿ ಮಕ್ಕಳಲ್ಲ. ಸಿಂಹದ ಮಕ್ಕಳು, ಮಗನ ಹಾಗೆ ಸುಹಾಸ್ ಬದುಕಿದ್ದಾನೆ. ಅದೇ ರೀತಿ ನಾವು ಕೆಲಸ ಮಾಡಬೇಕು. ಕೇಸ್ ಬೀಳುತ್ತದೆ. ಆದರೆ ಹೆದರಬೇಡಿ, ಹೋರಾಟ ಮಾಡಿ, ಯಾರು ಬಿಡಬೇಡಿ” ಎಂದೂ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಪ್ರಚೋದನಕಾರಿ ಭಾಷಣ : ನಟಿ ಶೃತಿ ವಿರುದ್ಧ ಪ್ರಕರಣ ದಾಖಲು
ಈ ಪ್ರಕರಣ ರದ್ದು ಕೋರಿ ಪ್ರಭಾಕರ್ ಭಟ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ನಡೆಸಿದ್ದು, ಪ್ರಭಾಕರ್ ಭಟ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ನೀಡಿದೆ.
ಕಲ್ಲಡ್ಕ ಪ್ರಭಾಕರ್ ಭಟ್ ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ಆರೋಪಪಟ್ಟಿ ಸಲ್ಲಿಸಬಾರದು ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
