ಬೆಂಗಳೂರಿನ ಪೀಣ್ಯ ಸಮೀಪದ ಬೃಂದಾವನ ನಗರದಲ್ಲಿ ಮಹಿಳೆಯೊಬ್ಬರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆಕೆಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜುಲೈ 11ರಂದು ಈ ಘಟನೆ ನಡೆದಿದ್ದು, ಮಹಿಳೆ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ರಾತ್ರಿ 10.30ರ ಸುಮಾರಿಗೆ ಕೆಲಸ ಮುಗಿಸಿ ಮಹಿಳೆ ಮನೆಗೆ ವಾಪಸ್ಸಾಗುತ್ತಿದ್ದಾಗ ಆಕೆಯ ಪಕ್ಕದಲ್ಲಿ ದ್ವಿಚಕ್ರ ವಾಹನವೊಂದು ಬಂದು ನಿಂತಿತು. ಬೈಕ್‌ನಲ್ಲಿದ್ದ ವ್ಯಕ್ತಿಗಳು ಮಹಿಳೆಯ ಮೊಬೈಲ್ ನಂಬರ್ ನೀಡುವಂತೆ ಪೀಡಿಸಿದ್ದಾರೆ. ಇದಕ್ಕೆ ಮಹಿಳೆ ಅವರನ್ನು ನಿರ್ಲಕ್ಷಿಸಿ ಮನೆ ಕಡೆ ಹೆಜ್ಜೆ ಹಾಕಿದ್ದಾರೆ.
ಆದರೆ, ಇಬ್ಬರು ವ್ಯಕ್ತಿಗಳು ಆಕೆಯನ್ನು ಅವರ ನಿವಾಸದವರೆಗೂ ಹಿಂಬಾಲಿಸಿ ಮಹಿಳೆಯ ಮನೆಯ ಎದುರು ನಿಲ್ಲಿಸಿದ್ದ ಕಾರಿಗೆ ಕಲ್ಲು ಎಸೆದು ಗಾಜು ಒಡೆದಿದ್ದಾರೆ.
“ದುಷ್ಕರ್ಮಿಗಳು ತಮ್ಮ ಶರ್ಟ್‌ಗಳಿಂದ ಮುಖ ಮುಚ್ಚಿಕೊಂಡಿದ್ದರು. ಘಟನೆ ನಡೆದ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆರೋಪಿಗಳ ಚಲನವಲನ ದಾಖಲಾಗಿದೆ. ಆರೋಪಿಗಳಲ್ಲಿ ಒಬ್ಬನನ್ನು ಗುರುತಿಸಿದ್ದೇವೆ. ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದೇವೆ. ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜುಲೈ 17, 18ರಂದು ಈ ರಸ್ತೆಗಳಲ್ಲಿ ಸಂಚಾರ ನಿರ್ಬಂ
ಸಂತ್ರಸ್ತ ಮಹಿಳೆ ಜುಲೈ 12ರಂದು ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 154 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.