“ಕನ್ನಡಿಗರ ಭಾವನೆಗಳಿಗೆ ಹಾನಿ ಮಾಡಿ, ಈಗ ಕ್ಷಮೆ ಕೇಳುವುದಿಲ್ಲ ಎಂದರೆ ಹೇಗೆ? ವಾಕ್ ಸ್ವಾತಂತ್ರ್ಯ ಎಂದರೆ ಬೇರೆಯವರ ಭಾವನೆಗಳಿಗೆ ಹಾನಿ ಮಾಡುವುದಲ್ಲ” ಎಂದು ಕರ್ನಾಟಕ ಹೈಕೋರ್ಟ್ ತಮಿಳು ನಟ ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಹೇಳಿಕೆ ನೀಡಿದ ತಮಿಳು ನಟ ಕಮಲ್ ಹಾಸನ್ ಕ್ಷಮೆಯಾಚಿಸುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿದೆ. ಕ್ಷಮೆ ಕೇಳದಿದ್ದರೆ ಕಮಲ್ ಹಾಸನ್ ಸಿನಿಮಾವನ್ನು ಬಹಿಷ್ಕರಿಸಲಾಗುವುದು ಎಂದು ಚಿತ್ರರಂಗ ಹೇಳಿದೆ. ಈ ಎಲ್ಲಾ ಬೆಳವಣಿಗೆ ನಡುವೆ ‘ಥಗ್ ಲೈಫ್’ ಸಿನಿಮಾ ತಡೆಯದಂತೆ ಸಿನಿಮಾ ತಂಡವು ಕರ್ನಾಟಕ ಹೈಕೋರ್ಟ್ ಮೊರೆಹೋಗಿದೆ.
ಇದನ್ನು ಓದಿದ್ದೀರಾ? ‘ಥಗ್ ಲೈಫ್’ ಸಿನಿಮಾ ತಡೆಯದಂತೆ ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್ ಚಿತ್ರ ತಂಡ
ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, “ಸಾಕಷ್ಟು ಕೋಟಿ ಬಂಡವಾಳ ಹಾಕಿದ್ದೀರಿ ಎಂದು ಹೇಳಿದ್ದೀರಿ. ಪರವಾಗಿಲ್ಲ, ಕ್ಷಮೆ ಕೇಳಲು ಕಮಲ್ ಹಾಸನ್‌ಗೆ ಹೇಳಿ” ಎಂದು ಸೂಚಿಸಿದೆ.
ಕಮಲ್ ಹಾಸನ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿದ್ದು, “ತಮಿಳಿನಿಂದ ಕನ್ನಡ ಉದಯಿಸಿದೆ ಎಂದು ಕಮಲ್ ಹಾಸನ್ ಹೇಳಿದ್ದರು. ಆ ಹೇಳಿಕೆ ಇಟ್ಟುಕೊಂಡು ಕಮಲ್ ಹಾಸನ್ ಅವರು ನಟಿಸಿರುವ ಥಗ್ ಲೈಫ್ ಸಿನಿಮಾಗೆ ನಿರ್ಬಂಧ ವಿಧಿಸಲಾಗಿದೆ. ನಮಗೆ ರಕ್ಷಣೆ ನೀಡಬೇಕು” ಎಂದು ಕೋರಿದರು.
Thug Life film release row | "You have undermined sentiments of the people of Karnataka; are you a historian or a linguist?" Karnataka High Court slams Kamal Haasan
— Bar and Bench (@barandbench) June 3, 2025
report by @meera_emmanuel https://t.co/wHVUTqEC99
“ತಮಿಳಿನಿಂದ ಕನ್ನಡ ಜನಿಸಿದೆ ಎಂದು ಹೇಳಲು ಕಮಲ್ ಹಾಸನ್ ಅವರು ಭಾಷಾತಜ್ಞರೇ? ಕ್ಷಮೆ ಕೇಳಿದ್ದರೆ ಎಲ್ಲವೂ ಮುಗಿಯುತ್ತಿತ್ತಲ್ಲವೇ? ಆ ಹೇಳಿಕೆ ನೀಡುವ ಅಗತ್ಯವೇನಿತ್ತು? ಇತಿಹಾಸ ಗೊತ್ತಿಲ್ಲದೇ ಆ ಹೇಳಿಕೆ ನೀಡಿದ್ದೇನೆ ಎಂದು ಕ್ಷಮೆ ಕೇಳಿದ್ದರೆ ಮುಗಿಯುತ್ತಿತ್ತಲ್ಲವೇ? ನೀವೇ ಸೃಷ್ಟಿ ಮಾಡಿರುವ ಸಮಸ್ಯೆಗೆ ಪೊಲೀಸರ ರಕ್ಷಣೆ ಕೋರುತ್ತಿದ್ದೀರಾ” ಎಂದು ಪೀಠ ಪ್ರಶ್ನಿಸಿದೆ.
ಇನ್ನು ವಿಡಿಯೋ ಪರಿಶೀಲಿಸಿದ ನ್ಯಾಯಮೂರ್ತಿಗಳು, “ಯಾರ ಭಾವನೆಯನ್ನೂ ತಮ್ಮ ಮನಸೋಇಚ್ಛೆ ನೋಯಿಸಲು ಬಿಡಲಾಗದು. ಹಲವು ಕೋಟಿ ನಷ್ಟವಾಗುತ್ತದೆ ಎನ್ನುವುದಾದರೆ, ನಿಮಗೆ ಕರ್ನಾಟಕ ಏತಕ್ಕೆ ಬೇಕು. ಅದನ್ನು ಬಿಡಿ. ನೀವು ಇತಿಹಾಸಕಾರರೇನಲ್ಲ ಎಂದ ಮೇಲೆ ಕ್ಷಮೆ ಕೋರಲು ಹೇಳಿ. ಆಡಿದ ಮಾತುಗಳು ಬರುವುದಿಲ್ಲ. ಕ್ಷಮೆ ಕೋರುವುದರ ಮೂಲಕ ಅವುಗಳಿಗೆ ಇತಿಶ್ರೀ ಹಾಡಬೇಕು” ಎಂದರು.
“ಅಶಾಂತಿ ಸೃಷ್ಟಿಯಾಗುವುದರ ಬಗ್ಗೆ ಸಮಾಜದಲ್ಲಿ ಖ್ಯಾತಿ ಹೊಂದಿರುವ ವ್ಯಕ್ತಿಯಾದ ಕಮಲ್ ಹಾಸನ್ ಅವರಿಗೆ ತಿಳಿದಿರಬೇಕು. ಇದನ್ನು ಸೃಷ್ಟಿಸುವುದು ಅವರೇ. ಅದಕ್ಕೆ ಮುಕ್ತಿ ಹಾಡಬೇಕಿರುವುದು ಅವರೇ. ಕ್ಷಮೆ ಕೋರಿದ್ದರೆ ಎಲ್ಲವೂ ಮುಗಿಯುತ್ತಿತ್ತು” ಎಂದು ಪೀಠ ಹೇಳಿದೆ. ಹಾಗೆಯೇ ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
