ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ನಡೆದ ದಮ್ಮ ಪಯಣ ಕಾರ್ಯಕ್ರಮದಲ್ಲಿ ದಸಂಸ ಹಿರಿಯ ಹೋರಾಟಗಾರರಿಗೆ ಗೌರವ ಸಮರ್ಪಣೆಯನ್ನು ಮಾಡಲಾಯಿತು.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ ” ದಸಂಸವು ಈ ನಾಡಿನ ಅಸ್ಪೃಶ್ಯರ ಶೋಷಣೆಗೊಳಗಾದ ತಬ್ಬಲಿ ಸಮುದಾಯಗಳಿಗೆ ಕಳೆದ 40 ವರ್ಷಗಳಿಂದ ಅವಿರತವಾಗಿ ಹೋರಾಟ ಮಾಡುತ್ತಾ ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ರಕ್ಷಣೆ ಮತ್ತು ನ್ಯಾಯ ಕೊಡಿಸುತ್ತಾ ಬರುತ್ತಿದೆ. ಇಂತಹ ಮಾತೃ ಸಂಘಟನೆಯಲ್ಲಿ ಮೈಸೂರು ಭಾಗದಲ್ಲಿ ಹಲವಾರು ವರ್ಷಗಳಿಂದ ನೊಂದ ಜನರ ಬಗ್ಗೆ ಹೋರಾಟ ಮಾಡಿ ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಡುವಲ್ಲಿ ನಿರಂತರ ಹೋರಾಟ ಮಾಡಿದ ದಸಂಸ ಹಿರಿಯ ಹೋರಾಟಗಾರರಿಗೆ ದಮ್ಮ ಪಯಣ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಮಾಡುತ್ತಿರುವುದು ನ್ಯಾಯಸಮ್ಮತವಾಗಿದೆ.
ದಸಂಸವು ಎಷ್ಟೇ ವಿಭಜನೆಯಾದರೂ ಅದರ ತತ್ವ ಸಿದ್ಧಾಂತಗಳು ಇಂದಿಗೂ ನಮ್ಮ ದಲಿತ ಸಮಾಜಕ್ಕೆ ಅನಿವಾರ್ಯವಾಗಿದೆ. ಜಾತಿ ಮತ್ತು ಅಸ್ಪೃಶ್ಯತೆಯ ಸೋಂಕಿನಲ್ಲಿ ಇಂದಿಗೂ ನಲುಗುತ್ತಿರುವ ದಲಿತ ಸಮುದಾಯಗಳಿಗೆ ಆತ್ಮಸ್ಥೈರ್ಯ ತುಂಬಿ. ಅವರ ನೋವಿಗೆ ದಿನನಿತ್ಯ ಸ್ಪಂದಿಸುವ ಕೆಲಸ ಆಗುತ್ತಿರುವುದು ದಸಂಸದ ಬಗ್ಗೆ ಇಂದಿಗೂ ದಲಿತರಲ್ಲಿ ಗೌರವ ಹೆಚ್ಚಾಗಿದೆ.
ರಾಜಕಾರಣಿಗಳ ಕುತಂತ್ರ ಮತ್ತು ಸಮಯ ಸಾಧಕತನದ ಮಾತಿಗೆ ದಸಂಸವು ಒಳಗಾಗಿ ಅನೇಕ ಹೊಡೆತಗಳು ಬಿದ್ದರೂ ಅದು ಮತ್ತೆ ಮತ್ತೆ ಪುಟಿದೇಳುತ್ತಿರುವುದು ಕೆಲವು ರಾಜಕಾರಣಿಗಳಲ್ಲಿ ನಡುಕ ಉಂಟಾಗುತ್ತಿದೆ. ಇಂತಹ ತಾಯಿ ಹೃದಯ ಇರುವ ದಸಂಸದ ಸಂಘಟನೆಯಲ್ಲಿ ತಮ್ಮ ಬದುಕು, ಜೀವನವನ್ನೇ ಮುಡುಪಾಗಿಟ್ಟು ನೊಂದ ಜನರ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿರುವ ಈ ಹೋರಾಟಗಾರರಿಗೆ ಜಿಲ್ಲೆಯ ದಲಿತ ಸಮಾಜದ ಪರವಾಗಿ ನಾನು ಅಭಿನಂದಿಸುತ್ತೇನೆ ಎಂದರು.
ಕಾರ್ಯಕ್ರಮ ಆಯೋಜಕ ಮಾಲ್ಗುಡಿ ಮಹದೇವಸ್ವಾಮಿ ಮಾತನಾಡಿ ” ದಸಂಸವು ಒಂದು ಸಂಘವಾಗದೆ ನೊಂದ ಜನರ ಕೈ ಬೀಸಿ ಕರೆಯುವ ದೈತ್ಯ ಶಕ್ತಿಯಾಗಿದೆ. ಕಣ್ಣೀರು ಒರೆಸುವ ಮಾತೃ ಹೃದಯವನ್ನು ಹೊಂದಿದೆ. ಯಾವುದೋ ಒಂದು ಹಳ್ಳಿಯಲ್ಲಿ ದಲಿತರ ಮೇಲೆ ಜಾತಿ ಕಾರಣಕ್ಕಾಗಿ ನಡೆಯುವ ಗಲಭೆ ಮತ್ತು ದೌರ್ಜನ್ಯಗಳನ್ನು, ಜಾತಿ ವಾದಿಗಳನ್ನು ವಿರೋಧ ಹಾಕಿಕೊಂಡು ಒಬ್ಬ ದಸಂಸ ನಾಯಕ ಮೆಟ್ಟಿ ನಿಂತು ಆ ನೊಂದ ಕುಟುಂಬಕ್ಕೆ ರಕ್ಷಣೆ ಕೊಡಿಸುವುದು ಸಾಮಾನ್ಯದ ವಿಚಾರವಲ್ಲ. ಇತ್ತೀಚೆಗಂತೂ ಕೆಲವು ದಸಂಸ ಕ್ರಿಯಾಶೀಲ ನಾಯಕರು ಅನಾಥ ಹೆಣಗಳನ್ನು ಶವ ಸಂಸ್ಕಾರ ಮಾಡಿ ಆ ಶವಕ್ಕೆ ಸದ್ಗತಿಗಳನ್ನು ಮಾಡುತ್ತಿರುವುದು ನನಗೆ ಅಚ್ಚರಿ ತರುತ್ತಿದೆ.
ಕುಟುಂಬದಿಂದಲೇ ತಿರಸ್ಕಾರಕ್ಕೆ ಒಳಗಾಗಿ ಅನಾರೋಗ್ಯ ಪೀಡಿತರಾದ ನಿರ್ಗತಿಕರನ್ನು ಆಸ್ಪತ್ರೆಗೆ ಸೇರಿಸಿ ಅವರಿಗೆ ಚಿಕಿತ್ಸೆ ಕೊಡಿಸಿ ನಿಮ್ಮ ಜೊತೆ ನಾವಿದ್ದೇವೆ ಎಂಬ ದಸಂಸ ನಾಯಕರ ಆ ಮಾತು ಸಮಾಜದ ಸ್ವಾಸ್ಥ್ಯವನ್ನೇ ಕಲಕುತ್ತಿದೆ. ದಸಂಸ ಕಾರ್ಯಕರ್ತರು ಸಮಾಜದ ಬದಲಾವಣೆ ಮಾಡುವ ಒಬ್ಬೊಬ್ಬ ಸೈನಿಕರಿದ್ದಂತೆ. ಇವರ ಬೆವರು ಮತ್ತು ಶ್ರಮ ಮತ್ತು ನಿರಂತರ ಹೋರಾಟ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಕಾರಣವಾಗುತ್ತಿದೆ. ದಸಂಸದ ಬಗ್ಗೆ ದಲಿತರಲ್ಲಿ ಇಂದಿಗೂ ಅಭಿಮಾನ, ಒಂದು ರೀತಿಯ ಭರವಸೆ ಇದೆ ” ಎಂದರು.
ಈ ಸುದ್ದಿ ಓದಿದ್ದೀರಾ?ಚಾಮರಾಜನಗರ | ಕೋವಿಡ್ -19 ತಡೆಗೆ ಸುರಕ್ಷತಾ ಹಾಗೂ ಮುಂಜಾಗೃತಾ ಕ್ರಮಗಳನ್ನು ಪಾಲಿಸಿ : ಶಿಲ್ಪಾ ನಾಗ್
ಕಾರ್ಯಕ್ರಮದಲ್ಲಿ ದಸಂಸದ ಹಿರಿಯ ಹೋರಾಟಗಾರರಾದ ಬೆಟ್ಟಯ್ಯ ಕೋಟೆ, ನಿಂಗರಾಜ್ ಮಲ್ಲಾಡಿ, ಆಲ್ಗೂಡು ಶಿವಕುಮಾರ, ದೇವಗಳ್ಳಿ ಸೋಮಶೇಖರ್, ಮಣಿಯಯ್ಯ, ಮಾಜಿ ಮೇಯರ್ ಪುರುಷೋತ್ತಮ್, ಬೌದ್ಧ ದಮ್ಮದ ಬಂತೇಜಿಗಳು, ಜಿಲ್ಲಾ ಎಸ್ಸಿ ಎಸ್ಟಿ ಜಾಗೃತಿ ಸಮಿತಿ ಸದಸ್ಯ ಅಹಿಂದ ಜವರಪ್ಪ, ಸೋಮಯ್ಯ ಮಲಿಯೂರು ಸೇರಿದಂತೆ ಇನ್ನಿತರರು ಇದ್ದರು.