ನಾರಾಯಣಪುರ ಬಲದಂಡೆ ನಾಲೆ (ಎನ್‌ಆರ್‌ಬಿಸಿ) ಕಾಮಗಾರಿಯಲ್ಲಿ ಅಕ್ರಮ ಎಸಗಿದ ಮಾನಪ್ಪ ವಜ್ಜಲ್ ಮತ್ತು ದೇವದುರ್ಗದ ಮಾಜಿ ಶಾಸಕ ಕೆ ಶಿವನಗೌಡ ನಾಯಕ ಅವರನ್ನು ಜೈಲಿಗೆ ಕಳುಹಿಸುವದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನ್‌ಆರ್‌ಬಿಸಿ ಅಕ್ರಮದ ವಿಚಾರದಲ್ಲಿ ಅವರು ಮೌನವಾಗಿದ್ದಾರೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಹನುಮಂತಪ್ಪ ಆಲ್ಕೋಡ್ ಆರೋಪಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಚುನಾವಣಾ ಪ್ರಚಾರಕ್ಕಾಗಿ ರಾಯಚೂರಿಗೆ ಬಂದಿದ್ದ ಸಿದ್ದರಾಮಯ್ಯ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎನ್‌ಆರ್‌ಬಿಸಿ ಕಾಮಗಾರಿಯಲ್ಲಿ ಅಕ್ರಮ ಎಸಗಿದವರನ್ನು 24 ಗಂಟೆಯಲ್ಲಿ ಜೈಲಿಗೆ ಕಳಿಸುತ್ತೇವೆ’ ಎಂದಿದ್ದರು. ಆದರೆ, ಭ್ರಷ್ಟಾಚಾರ ಮಾಡಿದವರ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
“ನಾರಾಯಣಪುರ ಬಲದಂಡೆ ಕಾಲುವೆ ಅಧುನೀಕರಣದಹೆಸರಿನಲ್ಲಿ ಮುಖ್ಯ ಕಾಲುವೆ ಹಾಗೂ ಉಪ ಕಾಲುವೆ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕರೇ ಆರೋಪಿಸಿದ್ದರು. ಈಗ ಅವರೇ ಮೌನವಾಗಿದ್ದಾರೆ. ಈ ಮೌನಕ್ಕೆ ಕಾರಣವೇನು” ಎಂದು ಅವರು ಪ್ರಶ್ನಿಸಿದರು.
“ಗ್ರಾಮ ಪಂಚಾಯ್ತಿಗಳು ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಚಗೊಳಿಸದೇ ಇರುವದರಿಂದ ಜನರು ಕಲುಷಿತ ನೀರು ಕುಡಿಯುವಂತಾಗಿದೆ. ಸರ್ಕಾರ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಸುತ್ತಿಲ್ಲ” ಎಂದು ಕಿಡಿಕಾರಿದರು.
“ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್‌ನಲ್ಲಿ ಜಿಲ್ಲೆಯೇ ಯಾವುದೇ ಅನುದಾನ ನೀಡಿಲ್ಲ. 5ಎ ಕಾಲುವೆ, 6ಎ ಕಾಲುವೆ ವಿಸ್ತರಣೆ ಹಾಗೂ ಇತರೆ ನೀರಾವರಿ ಯೋಜನೆಗಳ ಸಮಸ್ಯೆ ನಿವಾರಿಸಿಗೆ ಅನುದಾನ ನೀಡಿಲ್ಲ. ಕೇವಲ ಐದು ಗ್ಯಾರಂಟಿ ಯೋಜನೆಗಳಿಗೆ ಮಹತ್ವ ನೀಡಲಾಗಿದೆ. ಉಳಿದೆಲ್ಲವನ್ನು ಮರೆತು ಬಿಟ್ಟಿದ್ದಾರೆ” ಎಂದು ದೂರಿದರು.
“ರಾಯಚೂರು ಜಿಲ್ಲೆಯಲ್ಲಿ ಕೆಲಸವಿಲ್ಲದೇ ಜನರು ಗುಳೆ ಹೋಗುತ್ತಿದ್ದಾರೆ. ಮಳೆ ಕಡಿಮೆಯಾಗಿದ್ದು, ಬರಗಾಲ ಪರಸ್ಥಿತಿಯಿದ್ದರೂ ಇನ್ನೂ ಬರ ಘೋಷಣೆ ಮಾಡಿಲ್ಲ. ಪರಿಹಾರ ಕಾರ್ಯ ಕೈಗೊಳ್ಳಲು ಸರ್ಕಾರ ಮುಂದಾಗುತ್ತಿಲ್ಲ. ಈ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನೂ ಜಿಲ್ಲೆಯ ಶಾಸಕರು ಮಾಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಅಧಿಕಾರಿಗಳು ಯಾರೂ ಕೂಡ ಜನರ ಕೆಲಸ ಮಾಡದೇ ಬೆಂಗಳೂರಿಗೆ ತೆರಳುತ್ತಿದ್ದಾರೆ. ವರ್ಗಾವಣೆ ಅನಿರ್ವಾಯವಾದರೂ ಪರಸ್ಥಿತಿ ಗಂಭೀರತೆ ಅರಿತು ಸರ್ಕಾರ ಕಾರ್ಯನಿರ್ವಹಿಸಬೇಕು. ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ ಭಾರಿ ಭ್ರಷ್ಟಚಾರ ನಡೆದಿದೆ. ಶೀಘ್ರದಲ್ಲಿ ದಾಖಲೆ ಸಹಿತ ಬಹಿರಂಗಪಡಿಸುತ್ತೇವೆ” ಎಂದು ಹೇಳಿದರು.