ಇಸ್ರೇಲ್ ಜೊತೆ ಅಮೆರಿಕ ಉತ್ತಮ ಒಡನಾಟ ಹೊಂದಿದೆ. ಇತ್ತ, ಉಕ್ರೇನ್‌ಗೂ ಸಹಾಯ ಮಾಡುತ್ತಿದೆ. ಅರ್ಥಾತ್, ಪ್ಯಾಲೆಸ್ತೀನ್ ಮತ್ತು ಉಕ್ರೇನ್ ಮೇಲಿನ ದಾಳಿಗಳು ಮುಂದುವರೆಯಬೇಕು, ಸಂಘರ್ಷ ಇರಬೇಕೆಂದು ಟ್ರಂಪ್ ಭಾವಿಸಿದ್ದಾರೆ ಎಂಬ ಅಭಿಪ್ರಾಯಗಳು ಧ್ವನಿಸುತ್ತಿವೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಕೊನೆಗಾಣಿಸಿ, ಕದನ ವಿರಾಮ ಘೋಷಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಳ್ಳುತ್ತಿದ್ದಾರೆ. ಕದನ ವಿರಾಮದ ಸಂಪೂರ್ಣ ‘ಮೈಲೇಜ್’ ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ. ಆದರೆ, ಇದೇ ಡೊನಾಲ್ಡ್ ಟ್ರಂಪ್ ಕಳೆದ ಎರಡು/ಮೂರು ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಮತ್ತು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷವನ್ನು ಯಾಕೆ ಕೊನೆಗಾಣಿಸುತ್ತಿಲ್ಲ? ಆ ರಾಷ್ಟ್ರಗಳ ನಡುವೆ ಶಾಂತಿ ನೆಲೆಸುವುದು ಟ್ರಂಪ್ ಬೇಕಿಲ್ಲವೇ? ಅಥವಾ ಟ್ರಂಪ್ ದೊಡ್ಡಸ್ತಿಕೆಗೆ ರಾಷ್ಟ್ರಗಳಲ್ಲಿ ಮನ್ನಣೆ ಇಲ್ಲವೇ? ಈ ಪ್ರಶ್ನೆಗಳು ಈಗ ಜಗತ್ತಿನಾದ್ಯಂತ ಕೇಳಿಬರುತ್ತಿವೆ.
ಹಾಗೆ ನೋಡಿದರೆ, ಇಸ್ರೇಲ್ ಜೊತೆ ಅಮೆರಿಕ ಉತ್ತಮ ಒಡನಾಟ ಹೊಂದಿದೆ. ಇತ್ತ, ಉಕ್ರೇನ್‌ಗೂ ಸಹಾಯ ಮಾಡುತ್ತಿದೆ. ಅರ್ಥಾತ್, ಪ್ಯಾಲೆಸ್ತೀನ್ ಮತ್ತು ಉಕ್ರೇನ್ ಮೇಲಿನ ದಾಳಿಗಳು ಮುಂದುವರೆಯಬೇಕು, ಸಂಘರ್ಷ ಇರಬೇಕೆಂದು ಟ್ರಂಪ್ ಭಾವಿಸಿದ್ದಾರೆ ಎಂಬ ಅಭಿಪ್ರಾಯಗಳು ಧ್ವನಿಸುತ್ತಿವೆ. ರಷ್ಯಾ-ಉಕ್ರೇನ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಬೇಕೆಂದು ಅಮೆರಿಕ (ಟ್ರಂಪ್) ಬಯಸಿದ್ದರೆ, ಅದು ನಾಲ್ಕೈದು ತಿಂಗಳ ಹಿಂದೆಯೇ ಯಶಸ್ವಿಯಾಗುತ್ತಿತ್ತು. ಆದರೆ, ಅಂದುಕೊಂಡಂತೆ ಆಗಲಿಲ್ಲ.
ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ 2025ರ ಜನವರಿ 20ರಂದೇ ಟ್ರಂಪ್ ಹಲವಾರು ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಿದರು. ಅದೇ ಸಂದರ್ಭದಲ್ಲಿ ಅವರು ಉಕ್ರೇನ್‌ಗೆ ಎಲ್ಲ ಬೆಂಬಲವನ್ನು ಹಿಂಪಡೆಯುವ ಕಾರ್ಯನಿರ್ವಾಹಕ ಆದೇಶವನ್ನು ಹೊರಡಿಸಬಹುದಿತ್ತು. ಇದು ಯುದ್ಧವನ್ನು ಕೊನೆಗೊಳಿಸುವ ಸುಲಭ ಮಾರ್ಗವೂ ಆಗಿತ್ತು. ಪರಿಸ್ಥಿತಿಗಳು ಕೂಡ ಯುದ್ಧ ವಿರಾಮಕ್ಕೆ ಪೂರಕವಾಗಿದ್ದವು. ಆದರೆ, ಟ್ರಂಪ್ ಅಂತಹ ಆದೇಶ ಹೊರಡಿಸಲಿಲ್ಲ. ಯಾವುದೇ ಗಂಭೀರ ಮಾತುಕತೆ, ಚಿಂತನೆಗೂ ಮುಂದಾಗಲಿಲ್ಲ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣದಲ್ಲಿದ್ದ ಟ್ರಂಪ್, ”ರಷ್ಯಾ-ಉಕ್ರೇನ್ ಯುದ್ಧವು ಯಾವುದೇ ನಿರೀಕ್ಷೆಯಿಲ್ಲದ ದುಬಾರಿ ವೆಚ್ಚದ ಯುದ್ಧ” ಎಂದು ಕರೆದಿದ್ದರು. ಅಲ್ಲದೆ, ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಜೆಲೆನ್ಸ್ಕಿಯನ್ನು ‘ನಾಚಿಕೆಯಿಲ್ಲದೆ ಸವಾರಿ ಮಾಡುವವನು’ ಎಂದು ಬಣ್ಣಿಸಿದ್ದರು. ಯುದ್ಧವು ವಿಶ್ವ ವ್ಯವಸ್ಥೆಗೆ ಮತ್ತು ಅಮೆರಿಕ ಬಯಸುತ್ತಿರುವ ಪರಿವರ್ತನೆಗಳ ಆದ್ಯತೆಗೆ ಅಡ್ಡಿಯಾಗಿದೆ ಎಂದು ಆರೋಪಿಸಿದ್ದರು. ಜೊತೆಗೆ, ಹಿಂದಿನ ಅಮೆರಿಕ ಅಧ್ಯಕ್ಷ ಬೈಡನ್ ಅವರು ಯುದ್ಧವನ್ನು ನಿಲ್ಲಿಸಲು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಆರೋಪಿಸಿದ್ದರು.
ಆದರೆ, ಟ್ರಂಪ್ ಅಧಿಕಾರಕ್ಕೆ ಮರಳಿದ ಬಳಿಕ, ಅವರ ವರ್ತನೆಗಳು ಬದಲಾಗಿವೆ. ಉಕ್ರೇನ್ ವಿಚಾರದಲ್ಲಿ ಅವರು ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಆದರೆ, ರಷ್ಯಾದ ಹಿತಾಸಕ್ತಿಗಳನ್ನು ರಾಜಿ ಮಾಡಿಸಿ, ಯುದ್ಧ ವಿರಾಮ ಘೋಷಿಸಲು ಅಮೆರಿಕ (ಟ್ರಂಪ್) ಬಳಿ ಯಾವುದೇ ಸಾಧನಗಳು ಇಲ್ಲ. ಆದಾಗ್ಯೂ, ಉಕ್ರೇನ್ ಮೇಲೆ ಕ್ರೌರ್ಯ ಮೆರೆಯುತ್ತಿರುವ ರಷ್ಯಾ ವಿರುದ್ಧ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ವ್ಯಾಪಾರ ನಿರ್ಬಂಧ ಹೇರಿವೆ. ಇದು, ರಷ್ಯಾದ ಆರ್ಥಿಕತೆಯನ್ನು ದುರ್ಬಲಗೊಳಿಸಿದೆ. ಹೀಗಾಗಿ, ರಷ್ಯಾಗೆ ವ್ಯಾಪಾರ ನಿರ್ಬಂಧ ತೆರವಿನ ಅಗತ್ಯವಿದೆ. ಯುದ್ಧದಿಂದ ಬಸವಳಿದಿರುವ ಉಕ್ರೇನ್ ಕದನ ವಿರಾಮಕ್ಕೆ ತ್ವರಿತವಾಗಿ ಸಹಿ ಹಾಕುತ್ತದೆ. ಜೊತೆಗೆ, ರಷ್ಯಾ-ಅಮೆರಿಕ ವ್ಯಾಪಾರ ಸಂಬಂಧದಲ್ಲಿ ಸುಧಾರಣೆ ತರುವ ಪ್ರಸ್ತಾಪವಿಟ್ಟರೆ, ಆರ್ಥಿಕ ಉಪಯೋಗಗಳೊಂದಿಗೆ ತಮಗೆ ಗೆಲುವು ದೊರೆಯುತ್ತದೆ ಎಂದು ಟ್ರಂಪ್ ಭಾವಿಸಿದ್ದರು.
ಹೀಗಾಗಿಯೇ, ರಷ್ಯಾ ದಮನದ ವಿರುದ್ದದ ಹೋರಾಟದಲ್ಲಿ ಒಂದು ಹೆಜ್ಜೆ ಹಿಂದೆ ಸರಿದು, ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಉಕ್ರೇನ್ ಮೇಲೆ ಬಲವಂತದ ಒತ್ತಡ ಹೇರಲು ಟ್ರಂಪ್ ಮುಂದಾದರು. ಆದರೆ, ಟ್ರಂಪ್ ವರ್ತನೆಗೆ ಸಿಟ್ಟಾದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅಮೆರಿಕದಿಂದ ವಾಪಸ್ ಬಂದರು. ಇನ್ನು, ಪುಟಿನ್ ಅವರು ರಷ್ಯಾದ ಆರ್ಥಿಕತೆಯನ್ನು ಶಾಶ್ವತ ಪಾಶ್ಚಿಮಾತ್ಯ ನಿರ್ಬಂಧಗಳ ಸ್ಥಿತಿಗೆ ಎಳೆದೊಯ್ದಿದ್ದಾರೆ. ರಷ್ಯಾದ ಉದ್ಯಮಿಗಳು ನಿರ್ಬಂಧಗಳ ನಂತರ ಪಲಾಯನ ಮಾಡಿ ಪಾಶ್ಚಿಮಾತ್ಯ ವ್ಯವಹಾರಗಳನ್ನು ಯಶಸ್ವಿಯಾಗಿ ಬದಲಾಯಿಸಿಕೊಂಡಿದ್ದಾರೆ. ಜೊತೆಗೆ, ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟವನ್ನು ಪೂರ್ವಕ್ಕೆ (ಉಕ್ರೇನ್, ಜಾರ್ಜಿಯಾ, ಮೊಲ್ಡೊವಾ ಮತ್ತು ಇತರ ಮಾಜಿ ಸೋವಿಯತ್ ರಾಷ್ಟ್ರಗಳು) ವಿಸ್ತರಿಸದಂತೆ ‘ಲಿಖಿತ’ ಭರವಸೆ ನೀಡಬೇಕೆಂದು ಪುಟಿನ್ ಪಟ್ಟು ಹಿಡಿದಿದ್ದಾರೆ.
ಆದರೆ, ನ್ಯಾಟೋ ವಿಸ್ತರಣೆಯನ್ನು ಸ್ಥಗಿತಗೊಳಿಸಲು ಅಮೆರಿಕ (ಟ್ರಂಪ್) ಸಿದ್ದರಿಲ್ಲ. ಬದಲಾಗಿ, ಸಂಘರ್ಷವೇ ಮುಂದುವರೆಯಲಿ ಎಂಬ ಭಾವನೆ ಅವರಲ್ಲಿದೆ.
ಹೀಗಾಗಿಯೇ, ಜೂನ್ 2ರಂದು ರಷ್ಯಾ-ಉಕ್ರೇನ್ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಇಸ್ತಾಂಬುಲ್‌ನಲ್ಲಿ ಶಾಂತಿ ಮಾತುಕತೆಗಳು ವಿಫಲವಾಗಿವೆ. ಸಭೆಯಲ್ಲಿ ರಷ್ಯಾ ರಾಜತಾಂತ್ರಿಕರು, ‘ನ್ಯಾಟೋ ವಿಸ್ತರಣೆಯನ್ನು ಸ್ಥಗಿತಗೊಳಿಸಬೇಕು, ಉಕ್ರೇನ್ ತಟಸ್ಥವಾಗಿರಬೇಕು, ಪಾಶ್ಚಿಮಾತ್ಯ ನಿರ್ಬಂಧಗಳನ್ನು ತೆಗೆದುಹಾಕಬೇಕು, ಉಕ್ರೇನ್‌ನಲ್ಲಿ ರಷ್ಯಾ ಪ್ರಜೆಗಳಿಗೆ ರಕ್ಷಣೆ ಇರಬೇಕು’ ಎಂದು ಪ್ರತಿಪಾದಿಸಿದ್ದಾರೆ.
ರಷ್ಯಾದ ಈ ಎಲ್ಲ ಬೇಡಿಕೆಗಳನ್ನು ಯುರೋಪಿಯನ್ನರು ಅಪಹಾಸ್ಯ ಮಾಡುತ್ತಿದ್ದು, ಸಭೆಯಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ. ಹೀಗಾಗಿ, ರಷ್ಯಾ ಎಲ್ಲ ದಿಕ್ಕುಗಳಿಂದಲೂ ಉಕ್ರೇನ್ ಮೇಲೆ ಆಕ್ರಮಣ ಕಾರ್ಯಾಚರಣೆಯನ್ನು ಮುಂದುವರಿಸುತ್ತಿದೆ. ಪ್ರತಿ ದಾಳಿಗೆ ಇಳಿದಿರುವ ಉಕ್ರೇನ್ ಕೂಡ ರಷ್ಯಾದ ಹಲವಾರು ಯುದ್ಧ ವಿಮಾನಗಳನ್ನು ಜೂನ್ 2ರ ರಾತ್ರಿ ಒಡೆದುರುಳಿಸಿದೆ.
ರಷ್ಯಾ-ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಅವಕಾಶವಿಲ್ಲವೇ?
ಸದ್ಯದ ಪರಿಸ್ಥಿತಿಗಳಲ್ಲಿ ಟ್ರಂಪ್‌ಗೆ ಮೂರು ಆಯ್ಕೆಗಳಿವೆ. ಒಂದು- ಯುದ್ಧದ ಜವಾಬ್ದಾರಿಯನ್ನು ಸಂಪೂರ್ಣವಾಗಿ ತೆಗೆದುಹಾಕಿ ಉಕ್ರೇನ್‌ನಿಂದ ಹೊರನಡೆಯುವುದು. ಆದರೆ, ಈ ನಡೆಯು 2016-2020ರ ಅವರ ಮೊದಲ ಅವಧಿಯಲ್ಲಿನ ಪಾತ್ರದಿಂದ ವಿಮುಖವಾದಂತೆ ಆಗುತ್ತದೆ. ಟ್ರಂಪ್‌ರ ಮೊದಲ ಅವಧಿಯಲ್ಲಿ ಉಕ್ರೇನ್ ಜೊತೆಗಿನ ಅಮೆರಿಕ ಸಂಬಂಧವು ಒಬಾಮಾ ಆಡಳಿತದ ನೀತಿಯ ಮುಂದುವರಿಕೆಯಾಗಿತ್ತು. ಇದು ಕ್ರಿಮಿಯಾವನ್ನು ಉಕ್ರೇನ್‌ನ ಭಾಗವೆಂದು ಗುರುತಿಸಿತ್ತು. ರಷ್ಯಾದ ಆಕ್ರಮಣ ಮತ್ತು ದ್ವೀಪಗಳ ವಿಲೀನವನ್ನು ಖಂಡಿಸಿತ್ತು. ಪೂರ್ವ ಉಕ್ರೇನ್‌ನಲ್ಲಿ ನಡೆಯುವ ಸಂಘರ್ಷಕ್ಕೆ ರಷ್ಯಾ ಹೊಣೆಗಾರಿಕೆಯನ್ನು ಒತ್ತಿ ಹೇಳಿತ್ತು. ಉಕ್ರೇನ್ ಮೇಲೆ ರಷ್ಯಾ ಧೋರಣೆ, ದಾಳಿಗಳು ಅಂತಾರಾಷ್ಟ್ರೀಯ ವ್ಯವಸ್ಥೆಯ ಮೂಲಭೂತ ತತ್ವಗಳಿಗೆ ಸವಾಲು ಎಂದು ಬೊಟ್ಟುಮಾಡಿತ್ತು.
ಈ ಕಾರಣಗಳಿಗಾಗಿ, ಟ್ರಂಪ್ ಆಡಳಿತವು ಉಕ್ರೇನ್‌ನ ಸ್ವ-ರಕ್ಷಣೆಗೆ ಸಹಾಯ ಮಾಡಬೇಕು. ರಷ್ಯಾವನ್ನು ನಿರ್ಬಂಧಗಳು ಮತ್ತು ರಾಜತಾಂತ್ರಿಕ ಪ್ರತ್ಯೇಕತೆಯ ಮೂಲಕ (G7 ಸದಸ್ಯತ್ವ) ಶಿಕ್ಷಿಸಬೇಕು. ಆದರೆ, ಟ್ರಂಪ್ ಅವರಿಗೆ ರಷ್ಯಾ-ಉಕ್ರೇನ್ ಸಂಘರ್ಷದೊಳಗೆ ತಮ್ಮ ಪಾತ್ರದ ಅರಿವಿಲ್ಲ ಎಂಬಂತೆ ಕಾಣಿಸುತ್ತಿದೆ.
ಪ್ರಸ್ತುತ ಸಂದರ್ಭದಲ್ಲಿ, ಎರಡನೇ ಆಯ್ಕೆಯೆಂದರೆ- ರಷ್ಯಾದ ಹಠಮಾರಿತನ ಮತ್ತು ಶಾಂತಿ ಮಾತುಕತೆಗಳಲ್ಲಿನ ನಿರಾಸಕ್ತಿಯ ಕುರಿತು ಟ್ರಂಪ್ ಅವರು ತಮ್ಮ ಅತೃಪ್ತಿ, ಅಸಮಾಧಾನವನ್ನು ಗಟ್ಟಿಯಾಗಿ ಹೇಳುವುದು. ರಷ್ಯಾದ ಗುಪ್ತ ಉದ್ದೇಶವು ಉಕ್ರೇನ್‌ಅನ್ನು ವಶಪಡಿಸಿಕೊಳ್ಳುವುದು ಎಂದು ಟ್ರಂಪ್ ಸುಳಿವು ನೀಡಿದ್ದಾರೆ. ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರುವ ಮೂಲಕ ಮತ್ತು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ರಷ್ಯಾವನ್ನು ಶಿಕ್ಷಿಸುತ್ತೇವೆ ಎಂಬ ಸುಳಿವನ್ನು ಟ್ರಂಪ್ ನೀಡುತ್ತಿದ್ದಾರೆ. ಇದೇ ಹೊತ್ತಿನಲ್ಲಿ, ಜರ್ಮನ್ ಚಾನ್ಸಲರ್ ಫ್ರೀಡ್ರಿಚ್ ಮರ್ಜ್ ಅವರು ಜೆಲೆನ್ಸ್ಕಿಗೆ ದೀರ್ಘ ಕಾಲದಲ್ಲಿ ಶಸ್ತ್ರಾಸ್ತ್ರಗಳನ್ನು ಒದಗಿಸುವುದಾಗಿ ಘೋಷಿಸಿರುವುದು, ಟ್ರಂಪ್ ಅವರ ತಂತ್ರದ ಭಾಗವೆಂದು ಹೇಳಲಾಗುತ್ತಿದೆ.
ಆದರೆ, ಇದು ಅತ್ಯಂತ ಅಪಾಯಕಾರಿಯಾದ ನ್ಯಾಟೋ – ರಷ್ಯಾ ಸಂಘರ್ಷಕ್ಕೆ ಮೂಲ ಸೂತ್ರವಾಗುತ್ತಿದೆ. ಜರ್ಮನ್ ಮಿಸೈಲ್‌ಗಳು ರಷ್ಯಾದ ಮೇಲೆ ದಾಳಿ ಮಾಡಿದರೆ, ರಷ್ಯಾ ಪ್ರತೀಕಾರವಾಗಿ ಪ್ರತಿದಾಳಿ ಮಾಡುತ್ತದೆ. ಇದು 3ನೇ ವಿಶ್ವಯುದ್ಧಕ್ಕೂ ಕಾರಣವಾಗಹುದು. ಆದರೆ, ಅಂತಹ ಪರಿಸ್ಥಿತಿಗೆ ಅಮೆರಿಕ ಮತ್ತು ನ್ಯಾಟೋ ಇನ್ನೂ ಸಿದ್ದವಾಗಿಲ್ಲ ಎಂಬುದು ವಾಸ್ತವ.
ಈ ಲೇಖನ ಓದಿದ್ದೀರಾ?: ಬಸ್ತರ್ ಫೈಲ್ಸ್ | ಬಸವರಾಜು ಹೋಗಿರಬಹುದು, ನಕ್ಸಲ್ ಚಳವಳಿ ಇನ್ನೂ ಜೀವಂತವಿದೆ
ಒಂದು ವೇಳೆ, ರಷ್ಯಾ ಮೇಲೆ ಜರ್ಮನ್ ದಾಳಿ ಮಾಡಿದರೆ, ರಷ್ಯಾ ಪ್ರತಿದಾಳಿ ಮಾಡಿದರೆ, ಇದು ನ್ಯಾಟೋ ನಡೆಸುತ್ತಿರುವ ಕಾರ್ಯಾಚರಣೆಯ ಸಿದ್ಧತೆಗಳಿಗೆ ಹೊಡೆತ ನೀಡಬಹುದು. ಬೆಲಾರಸ್‌ನಲ್ಲಿ ನ್ಯಾಟೋ ಯುದ್ಧ ಸಾಮಗ್ರಿಗಳ ನಿಯೋಜನೆಯಲ್ಲಿ ತೊಡಗಿದೆ. ವರ್ಷಾಂತ್ಯದ ವೇಳೆಗೆ ನಿಯೋಜನೆಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ, ತಕ್ಷಣದಲ್ಲಿ ಮೂರನೇ ವಿಶ್ವಯುದ್ಧ ಎಂಬ ಭೀತಿ ಸ್ವಲ್ಪ ಉತ್ಪ್ರೇಕ್ಷಿತವಾಗಿ ಕಾಣಿಸಬಹುದು. ಆದರೆ, ಟ್ರಂಪ್ ನಡೆಗಳು ಸಂಘರ್ಷವನ್ನು ಉಲ್ಬಣಗೊಳಿಸುವಂತೆ ತೋರುತ್ತಿವೆ. ಒಂದು ವೇಳೆ ಈ ಉತ್ಪ್ರೇಕ್ಷೆ ಹೆಚ್ಚಾದಲ್ಲಿ, ಅವರ MAGA ಅಧ್ಯಕ್ಷತೆಯೇ ಕುಸಿದು ಬೀಳುವ ಸಾಧ್ಯತೆಗಳಿವೆ.
ಸದ್ಯಕ್ಕೆ, ಮೇಲಿನ 2 ಆಯ್ಕೆಗಳಿಗಿಂತ ಟ್ರಂಪ್‌ಗೆ ಮೂರನೇ ಆಯ್ಕೆಯೇ ಸೂಕ್ತವಾಗಿದೆ. ಅದು ಸದ್ಯದ ಪರಿಸ್ಥಿತಿಯಲ್ಲಿ ಉಕ್ರೇನ್‌ನಿಂದ ನ್ಯಾಟೋ ಹೊರನಡೆದು, ಯುದ್ಧವು ಕೊನೆಗೊಂಡ ಬಳಿಕ, ಬಹುಶಃ ವರ್ಷಾಂತ್ಯದ ವೇಳೆಗೆ ಉಕ್ರೇನ್‌ಗೆ ಮರಳುವುದು. ಇದು ಟ್ರಂಪ್ ಅವರ ಖ್ಯಾತಿಗೆ ಹಾನಿಯಾಗುವುದಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.
ಇದಕ್ಕೆ ಪೂರಕವೂ, ಸಕಾರಾತ್ಮಕವೂ ಎಂಬಂತೆ ಉಕ್ರೇನ್‌ನಲ್ಲಿರುವ ಅಮೆರಿಕ ವಿಶೇಷ ರಾಯಭಾರಿ ಕೀತ್ ಕೆಲ್ಲೊಗ್ ಅವರ ಪ್ರತಿಕ್ರಿಯೆ ಬಂದಿದೆ. ”ನಾಟೋ ಯಾವುದೇ ಹೊಸ ಪೂರ್ವ ಯುರೋಪ್ ದೇಶಗಳನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳದಿರುವುದು ರಷ್ಯಾಕ್ಕೆ ರಾಷ್ಟ್ರೀಯ ಸುರಕ್ಷತಾ ವಿಷಯವಾಗಿದೆ ಎಂಬುದನ್ನು ಅಮೆರಿಕ ಅರ್ಥಮಾಡಿಕೊಂಡಿದೆ. ಉಕ್ರೇನ್ ಮಾತ್ರವಲ್ಲ, ಮೊಲ್ಡೊವಾ ಹಾಗೂ ಜಾರ್ಜಿಯಾವನ್ನು ಕೂಡ ನ್ಯಾಟೋಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ರಷ್ಯಾದ ಕಾಳಜಿಗಳು ಸಮರ್ಥನೀಯವೆಂದು ಪರಿಗಣಿಸಲಾಗಿದೆ. ಅಮೆರಿಕ ಮತ್ತು ರಷ್ಯಾ ನಡುವಿನ ಮಾತುಕತೆಗಳ ಸಮಯದಲ್ಲಿ ಒಪ್ಪಂದವು ಯಶಸ್ವಿಯಾಗಲಿದೆ” ಎಂದು ಹೇಳಿಕೊಂಡಿದ್ದಾರೆ.
ರಷ್ಯಾ ವಿರೋಧಿ ಧೋರಣೆ, ನ್ಯಾಟೋ ವಿಸ್ತರಣೆಯಲ್ಲಿ ಟ್ರಂಪ್ ನಿಲುವುಗಳು ಸ್ಪಷ್ಟವಾಗಿಲ್ಲದ ಕಾರಣ, ಅವರು ಉಕ್ರೇನ್-ರಷ್ಯಾ ಬಿಕ್ಕಟ್ಟಿನ ಮುಂದುವರಿಕೆಗೂ ಕಾರಣರಾಗಬಹುದು ಎಂಬ ಅಭಿಪ್ರಾಯಗಳು ಬಲವಾಗಿವೆ.
ಮೂಲ: ಎಂ.ಕೆ. ಭದ್ರಕುಮಾರ್, ಅನುವಾದ: ಸೋಮಶೇಖರ್ ಚಲ್ಯ