ಶಿವಮೊಗ್ಗ ನಗರಕ್ಕೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಸೌಮ್ಯರೆಡ್ಡಿ ಭೇಟಿ ಕೊಟ್ಟ ನಂತರ ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ಯಾರು ಹೊಸ ಅಧ್ಯಕ್ಷರಾಗುತ್ತಾರೆ ಎಂಬುದು ಇದೀಗ ಹೆಚ್ಚು ಚರ್ಚೆಯಾಗುತ್ತಿದೆ.
ಹಾಲಿ ಅಧ್ಯಕ್ಷರಾಗಿರುವ ಲಂಬಾಣಿ ಸಮುದಾಯದ ಅನಿತಾ ಕುಮಾರಿಯವರ ಅಧಿಕಾರವಧಿ 6 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಹೊಸ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದ್ದೇ ತಡ ಶಿವಮೊಗ್ಗದ ಮಹಿಳಾ ಕಾಂಗ್ರೆಸ್ಸಿನಲ್ಲಿ ಲಾಬಿ ಹೆಚ್ಚಾಗಿದೆ.
ಅನಿತಾ ಕುಮಾರಿಗಿಂತ ಮೊದಲು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ, ಸಂಘಟಕಿ ವಿಜಯಲಕ್ಷ್ಮೀ ಪಾಟೀಲ್ ಅಧ್ಯಕ್ಷರಾಗಿದ್ದರು. ಸುಮಾರು 14 ವರ್ಷಗಳಷ್ಟು ಸುದೀರ್ಘವಾಗಿ ಯಶಸ್ವಿ ಮಹಿಳಾ ಅಧ್ಯಕ್ಷೆ ಆಗಿದ್ದರು.

ವಿಜಯಲಕ್ಷ್ಮಿ ಪಾಟೀಲ್ ಸಂಘಟನೆಯಲ್ಲಿ ನಿಪುಣರಾಗಿದ್ದು ಎಲ್ಲಾ ಕಾರ್ಯಕರ್ತರನ್ನು ಸಮಾನವಾಗಿ ನೋಡುವ ಮೂಲಕ ಸಹಕಾರ ನೀಡುವ ಜೊತೆಗೆ, ಸಂಘಟನೆ ಮಾಡುವ ಶಕ್ತಿ ಇವರಲ್ಲಿದೆ ಎಂಬುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯ. ಜಿಲ್ಲೆಯಲ್ಲಿ ಸುತ್ತಾಡಿ ಪಕ್ಷ ಸಂಘಟನೆ ಮಾಡಿದ ಸುದೀರ್ಘ ಅನುಭವ ಇವರಿಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಗೆ ಎರಡು ಬಾರಿ ಸದಸ್ಯೆಯಾಗಿದ್ದಾರೆ. ಜೊತೆಗೆ ಉಪ ಮೇಯರ್ ಆಗಿ ಕೆಲಸ ನಿರ್ವಹಿಸಿದ್ದಾರೆ.

ನೆರೆ ಬಂದಾಗ ಕಡು ಬಡವರಿಗೆ ಸ್ವಂತ ಖರ್ಚಿನಲ್ಲಿ ಪರಿಹಾರ ಒದಗಿಸಿದ್ದಾರೆ. ಹೀಗೆ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿರುವ ಉದಾಹರಣೆಗಳಿವೆ. ಕಳೆದ 18 ರಿಂದ 20 ವರ್ಷದಿಂದ ಸಾಕಷ್ಟು ಅನುಭವ ಇದ್ದು ಜೊತೆಗೆ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ, ಪ್ರಾಮಾಣಿಕ ಪಕ್ಷ ಸಂಘಟಕಿಯಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಕಾರ್ಯ ಚಟುವಟಿಕೆಗಳು, ಸಭೆಗಳು ಹಾಗೂ ಕಾರ್ಯಕ್ರಮ ಚಟುವಟಿಕೆ ಹಾಗೂ ಪ್ರತಿಭಟನೆಗಳಲ್ಲಿ ಸದಾ ಮುಂದೆ ಇರುತ್ತಾರೆ ವಿಜಯಲಕ್ಷ್ಮಿ ಪಾಟೀಲ್. ಹಾಗಾಗಿ ಪ್ರಸ್ತುತ ಶಿವಮೊಗ್ಗ ಜಿಲ್ಲೆಗೆ ಇಂತಹ ಮಹಿಳಾ ಅಧ್ಯಕ್ಷರ ಅವಶ್ಯಕತೆಯಿದೆ ಎಂಬ ಮಾತು ಪಕ್ಷದಲ್ಲಿ ಕೇಳಿಬರುತ್ತಿದೆ.
ಇದನ್ನೂ ಓದಿ: ಶಿವಮೊಗ್ಗ | ಬಂಗಾರ ಆಭರಣ ಕಳ್ಳತನ ; ಶಿಕಾರಿಪುರದಲ್ಲಿ ಆರೋಪಿ ಬಂಧನ
ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಹಿಳಾ ಸಾರಥಿಯಾಗಿ ಪಕ್ಷವು ನೇಮಕ ಮಾಡುವುದಾಗಿ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.