ಕನ್ನಡವು ತಮಿಳು ಭಾಷೆಯಿಂದ ಬಂದಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ, ಚರ್ಚೆ-ಆಕ್ರೋಶಕ್ಕೆ ತುತ್ತಾಗಿದ್ದ ನಟ ಕಮಲ್ ಹಾಸನ್ ಇದೀಗ ಕನ್ನಡಗರನ್ನು ಉದ್ದೇಶಿಸಿ ಪತ್ರ ಬರೆದಿದ್ದಾರೆ. ಕನ್ನಡ ತಮಿಳು ಪ್ರೀತಿ – ನಾವೆಲ್ಲರೂ ಒಂದೇ ಕುಟುಂಬ ಎಂದು ಪತ್ರದಲ್ಲಿ ಹೇಳಿದ್ದಾರೆ.
ಇತ್ತೀಚೆಗೆ, ಚೆನ್ನೈನಲ್ಲಿ ನಡೆದ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಮಲ್ ಹಾಸನ್, ‘ತಮಿಳು ಭಾಷೆಯಿಂದ ಕನ್ನಡ ಹುಟ್ಟಿದೆ’ ಎಂದು ಹೇಳಿದ್ದರು. ಅವರ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡಿಗರ ಬಳಿ ಕ್ಷಮೆಯಾಚಿಸಬೇಕೆಂದು ಕರ್ನಾಟಕದ ಜನರು ಆಗ್ರಹಿಸಿದ್ದರು. ಕ್ಷಮೆ ಕೇಳುವವರೆಗೆ ರಾಜ್ಯದಲ್ಲಿ ಅವರ ಸಿನಿಮಾ ಬಿಡುಗಡೆಗೆ ಅವಕಾಸ ನೀಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ. ಈ ನಡುವೆ, ಕನ್ನಡಿಗರನ್ನು ಉದ್ದೇಶಿಸಿ ಕಮಲ್ ಹಾಸನ್ ಪತ್ರ ಬರೆದಿದ್ದಾರೆ. ಆದರೆ, ಕ್ಷಮೆ ಕೇಳಿಲ್ಲ.
ಕಮಲ್ ಪತ್ರದಲ್ಲಿ, “ಕಾರ್ಯಕ್ರಮದಲ್ಲಿ ನಾನು ದಂತಕಥೆ ಡಾ. ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಅವರ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದೆ. ನನ್ನ ಆ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಮಾತಿನ ಉದ್ದೇಶಕ್ಕೆ ವಿರುದ್ಧವಾಗಿ ಅದರ ಅರ್ಥವನ್ನು ರೂಪಿಸಲಾಗಿದೆ. ಕನ್ನಡ ಭಾಷೆಯ ಹಿರಿಮೆಯನ್ನು ಕುಗ್ಗಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಬದಲಾಗಿ ನಾವೆಲ್ಲರೂ ಒಂದೇ ಕುಟುಂಬದವರು ಎಂಬುದು ನನ್ನ ಉದ್ದೇಶವಾಗಿತ್ತು. ಕನ್ನಡ ಭಾಷೆಯ ಶ್ರೀಮಂತ ಇತಿಹಾಸದ ಬಗ್ಗೆ ಯಾವುದೇ ಅನುಮಾನ ಇಲ್ಲ” ಎಂದು ಹೇಳಿದ್ದಾರೆ.
“ತಮಿಳು ಭಾಷೆ ರೀತಿಯೇ ಕನ್ನಡವೂ ಶ್ರೀಮಂತ ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆಯನ್ನು ಹೊಂದಿದೆ. ಅದನ್ನು ನಾನು ವರ್ಷಗಳಿಂದಲೂ ಗೌರವಿಸುತ್ತಾ ಬಂದಿದ್ದೇನೆ. ಕನ್ನಡ ಭಾಷಿಕರು, ನನ್ನ ವೃತ್ತಿ ಜೀವನದಲ್ಲಿ ನನಗೆ ತೋರಿದ ಪ್ರೀತಿ ಮತ್ತು ಗೌರವ ನನ್ನ ಎದೆಯಲ್ಲಿ ಭದ್ರವಾಗಿದೆ. ಭಾಷೆಯ ಬಗ್ಗೆ ನನಗಿರುವ ಪ್ರೀತಿ ಸ್ಪಟಿಕ ರೀತಿಯದ್ದು. ಅದನ್ನು ನಾನು ಯಾವುದೇ ಭೀತಿ ಇಲ್ಲದೆ ಹೇಳುವೆ. ಅದರಂತೆ ಕನ್ನಡಿಗರಿಗೆ ಅವರ ಭಾಷೆಯ ಬಗ್ಗೆ ಇರುವ ಅದಮ್ಯ ಪ್ರೀತಿಯ ಬಗ್ಗೆಯೂ ನನಗೆ ಗೌರವ ಇದೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಗುಲಬರ್ಗಾ ವಿವಿ ಕರ್ಮಕಾಂಡ; ಸಿಒಡಿ ತನಿಖೆಗೆ ಸಿಂಡಿಕೇಟ್ ನಿರ್ಧಾರ
“ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಈ ನೆಲದ ಎಲ್ಲ ಭಾಷೆಗಳ ಜೊತೆಗೆ ನನಗೆ ಇರುವ ನಂಟು ಅಭೇದ್ಯವಾದುದು. ಭಾಷೆಗಳ ಮೇಲೆ ಸಮಾನ ಗೌರವ ಇರಬೇಕೆಂದು ಸದಾ ಒತ್ತಾಯಿಸಿದ್ದೇನೆ. ಯಾವುದೇ ಒಂದು ಭಾಷೆಯ ಹೇರಿಕೆ ಹಾಗೂ ಒಂದು ಭಾಷೆ ಮತ್ತೊಂದು ಭಾಷೆಯ ಮೇಲೆ ಮಾಡುವ ದೌರ್ಜನ್ಯವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ದೇಶದ ಭಾಷಾ ಸಾಮರಸ್ಯವನ್ನು ಹಾಳು ಮಾಡುವ ಯಾವುದೇ ಪ್ರಯತ್ನದ ವಿರುದ್ಧ ನಾನಿದ್ದೇನೆ” ಎಂದು ವಿವರಿಸಿದ್ದಾರೆ.
“ನನಗೆ ಸಿನಿಮಾ ಭಾಷೆ ಗೊತ್ತು, ನಾನು ಅದನ್ನೇ ಮಾತನಾಡುತ್ತೇನೆ. ಸಿನಿಮಾ ಭಾಷೆ ವಿಶ್ವಭಾಷೆ. ಆ ಭಾಷೆಗೆ ಪ್ರೀತಿಸುವುದು ಮಾತ್ರವೇ ಗೊತ್ತು. ನನ್ನ ಹೇಳಿಕೆ ಸಹ ನಮ್ಮ ನಡುವೆ ಇರುವ ಪ್ರೀತಿ ಮತ್ತು ಬಾಂಧವ್ಯ ಹಾಗೂ ಒಗ್ಗಟ್ಟನ್ನು ತೋರ್ಪಡಿಸುವ ಉದ್ದೇಶವನ್ನೇ ಹೊಂದಿತ್ತು. ನನ್ನ ಹಿರಿಯರು ನನಗೆ ಕಲಿಸಿಕೊಟ್ಟ ಪ್ರೀತಿ ಮತ್ತು ಗೌರವವನ್ನೇ ನಾನು ಪಾಲಿಸುತ್ತಿದ್ದೇನೆ. ಅದೇ ಪ್ರೀತಿ ಮತ್ತು ಗೌರವದ ಭಾಗವಾಗಿ ಶಿವಣ್ಣ, ಆಡಿಯೋ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಆ ಕಾರಣಕ್ಕಾಗಿ ಅವರು ಮುಜುಗರ ಅನುಭವಿಸಬೇಕಾಗಿ ಬಂದಿರುವುದಕ್ಕೆ ನನಗೆ ವಿಷಾಧವಿದೆ. ಆದರೆ ನಮ್ಮಿಬ್ಬರ ನಡುವಿನ ಪ್ರೀತಿ ಮತ್ತು ವಿಶ್ವಾಸ ಹೀಗೆಯೇ ಮುಂದುವರೆಯುತ್ತದೆ ಎಂಬ ವಿಶ್ವಾಸ ನನಗೆ ಇದೆ ಎಂದು ಭಾಷಣ ಮಾಡಿದ್ದಾರೆ” ಎಂದು ಹೇಳಿದ್ದಾರೆ.
“ಸಿನಿಮಾ ಜನರ ನಡುವೆ ಸೇತುವೆಯಾಗಿ ಇರಬೇಕು, ಜನರ ಬೇರ್ಪಡಿಸುವ ಗೋಡೆ ಆಗಬಾರದು. ಇದು ನನ್ನ ಹೇಳಿಕೆಯ ಉದ್ದೇಶವಾಗಿತ್ತು ಮತ್ತು ನಾನು ಎಂದಿಗೂ ಸಾರ್ವಜನಿಕ ಅಶಾಂತಿ ಮತ್ತು ದ್ವೇಷಕ್ಕೆ ಅವಕಾಶ ನೀಡಿಲ್ಲ ಮತ್ತು ಎಂದಿಗೂ ನೀಡಲು ಬಯಸುವುದಿಲ್ಲ. ನನ್ನ ಮಾತುಗಳ ಉದ್ದೇಶವನ್ನು ಗ್ರಹಿಸಿ, ಕರ್ನಾಟಕದ ಬಗ್ಗೆ, ಅದರ ಜನರ ಬಗ್ಗೆ ಮತ್ತು ಅವರ ಭಾಷೆಯ ಬಗ್ಗೆ ನನಗಿರುವ ನಿರಂತರ ಪ್ರೀತಿಯನ್ನು ಗುರುತಿಸಲಾಗುವುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಈ ತಪ್ಪು ತಿಳುವಳಿಕೆ ತಾತ್ಕಾಲಿಕ ಮತ್ತು ನಮ್ಮ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಮತ್ತೆ ಎತ್ತಿಹಿಡಿಯಲು ಒಂದು ಅವಕಾಶ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ” ಎಂದಿದ್ದಾರೆ.