ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ್ ಮತ್ತು ನಂತರದ ಬೆಳವಣಿಗೆಗಳು, ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗಳ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶ ಕರೆಯುವಂತೆ ಆಗ್ರಹಿಸಿ ಇಂಡಿಯಾ ಬಣದ ನಾಯಕರು ಆಗ್ರಹಿಸಿದ್ದಾರೆ.
ಇಂದು ದೆಹಲಿಯಲ್ಲಿ ಸಭೆ ನಡೆದಿದ್ದು, ಇಂಡಿಯಾ ಬಣದ ಪಕ್ಷಗಳು ತಮ್ಮ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಒಗ್ಗಟ್ಟಿನ ಸಂದೇಶ ರವಾನಿಸಿವೆ. ವಿಶೇಷ ಅಧಿವೇಶನಕ್ಕೆ ಒತ್ತಾಯಿಸಿ ಪ್ರತಿಪಕ್ಷಗಳು ಮೋದಿಯವರಿಗೆ ಪತ್ರ ಬರೆದಿವೆ. ಮಾಧ್ಯಮಗಳ ಮೂಲಕ ಪತ್ರವನ್ನು ರವಾನಿಸಿವೆ. ಬಹುಪಕ್ಷ ನಿಯೋಗಗಳು ವಿದೇಶಗಳಿಗೆ ಮಾಹಿತಿ ನೀಡುತ್ತಿರುವ ಬಗ್ಗೆ ನಾಯಕರು ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಸರ್ಕಾರ ಸಂಸತ್ತಿನ ಅಧಿವೇಶನವನ್ನು ಕರೆಯಲು ಹಿಂಜರಿಯುತ್ತಿದೆ.
ಇಂಡಿಯಾ ಒಕ್ಕೂಟದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಉದ್ಧವ್ ಠಾಕ್ರೆ ಬಣದ ಸಂಜಯ್ ರಾವತ್, “ನಾವು ಪ್ರಧಾನಿ ಮೋದಿಗೆ ಕಳುಹಿಸಿದ ಪತ್ರಕ್ಕೆ ಪ್ರಧಾನ ವಿರೋಧ ಪಕ್ಷಗಳು ಸಹಿ ಹಾಕಿವೆ. ಇದು ಸಾಮಾನ್ಯ ಪತ್ರವಲ್ಲ. ವಿರೋಧ ಪಕ್ಷಗಳು ಜನರ ಧ್ವನಿ. ಪಹಲ್ಗಾಮ್‌ನಲ್ಲಿ ಏನಾಯಿತು ಎಂಬುದರ ಕುರಿತು ನಾವು ವಿಶೇಷ ಅಧಿವೇಶನ ನಡೆಸಿದರೆ, ದೇಶದ ಪ್ರತಿಷ್ಠೆ ಹಾಗೆಯೇ ಉಳಿಯುತ್ತದೆ. ನಾಗರಿಕರಿಗೆ ಉತ್ತರಗಳು ಸಿಗುತ್ತವೆ” ಎಂದಿದ್ದಾರೆ.
“ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಆದೇಶದ ಮೇರೆಗೆ ಕದನ ವಿರಾಮ ಘೋಷಿಸಲು ಸಾಧ್ಯವಾಗುವುದಾದರೆ, ಪ್ರತಿಪಕ್ಷಗಳ ಕೋರಿಕೆಯ ಮೇರೆಗೆ ಅವರು ವಿಶೇಷ ಅಧಿವೇಶನವನ್ನೂ ಕರೆಯಬಹುದು. ಇದಕ್ಕಾಗಿಯೂ ನಾವು ಟ್ರಂಪ್ ಅವರ ಬಳಿಗೆ ಹೋಗಬೇಕೇ?” ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಪ್ರತಿಕ್ರಿಯಿಸಿದ್ದು, “ಹದಿನಾರು ವಿರೋಧ ಪಕ್ಷಗಳು ಪ್ರಧಾನಿ ಮೋದಿಗೆ ಪತ್ರ ಬರೆದಿವೆ. ನಮ್ಮ ಸಶಸ್ತ್ರ ಪಡೆಗಳಿಗೆ ಕೃತಜ್ಞತೆ ಸಲ್ಲಿಸಲು ವಿಶೇಷ ಅಧಿವೇಶನವನ್ನು ಕರೆಯುವಂತೆ ಪಕ್ಷಗಳು ಒತ್ತಾಯಿಸಿವೆ. ಪಹಲ್ಗಾಮ್‌ನಿಂದ ಆಪರೇಷನ್ ಸಿಂಧೂರ್‌ವರೆಗೆ, ಕದನ ವಿರಾಮ ಘೋಷಣೆಯಿಂದ ಹಿಡಿದು ಇತರ ದೇಶಗಳಿಗೆ ಭೇಟಿ ನೀಡುವ ನಿಯೋಗಗಳವರೆಗೆ, ಈ ಎಲ್ಲ ವಿಷಯಗಳನ್ನು ನಾವು ಸಂಸತ್ತಿನಲ್ಲಿ ಚರ್ಚಿಸಬೇಕು” ಎಂದಿದ್ದಾರೆ.