ಶೋಷಿತ ಸಮುದಾಯದ ನಾಯಕರ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಮತ್ತು ಎನ್. ರವಿಕುಮಾರ ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದುಪಡಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಜಗತ್ತ್ ವೃತ್ತದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸುವುದರ ಮೂಲಕ ಕಲಬುರಗಿ ಜಿಲ್ಲಾಧಿಕಾರಿ ಮುಖಾಂತರ ಸಿಎಂ’ಗೆ ಮನವಿ ಸಲ್ಲಿಸಿದರು.
ಬಿಜೆಪಿ ಪಕ್ಷದ ವತಿಯಿಂದ ಚಿತ್ತಾಪೂರದಲ್ಲಿ ‘ತಿರಂಗಾ ಯಾತ್ರಾ’ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ವಿಧಾನ ಪರಿಷತ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರಿಗೆ ಅವಮಾನಕರ ಶಬ್ದಬಳಸಿ ಟೀಕೆ ಮಾಡಿದಾಗ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ದಿಗ್ಬಂದನ ಹಾಕಿದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ಮೇ. 5 ರಂದು ಕಲಬುರಗಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ಅಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರಿನ ಬಹಿರಂಗ ಸಭೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಸಚೇತಕ ಎನ್. ರವಿಕುಮಾರ ಮಾತನಾಡುತ್ತ, ಕಲಬುರಗಿಯ ಜಿಲ್ಲಾಧಿಕಾರಿಗಳು (ಪೌಜಿಯಾ ತರನ್ನುಮ್) ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಐ.ಎ.ಎಸ್ ಆಫೀಸರ್ ಆಗಿದ್ದಾರೋ ಗೊತ್ತಿಲ್ಲ. ಅವರು ಬಹುಶಃ ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ಕಾಣಿಸುತ್ತದೆ ಎಂದು ನಾಲಿಗೆ ಹರಿಬಿಟ್ಟಿದ್ದರು. ಜಿಲ್ಲೆಯಲ್ಲಿರುವ ವಿಶೇಷವಾಗಿ ದಲಿತ ಸಮುದಾಯದ ದಕ್ಷ ಮತ್ತು ನಿಷ್ಠಾವಂತ ಪೊಲೀಸ್ ಅಧಿಕಾರಿಗಳಾದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘನವರ್, ಪೊಲೀಸ್ ಇನ್ಸಪೇಕ್ಟರ್ ಚಂದ್ರಶೇಖರ ತಿಗಡಿ, ಡಿ.ಎಸ್.ಪಿ ಶಂಕರರಾವ ಪಾಟೀಲ್ ಇವರ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದಾರೆ ಎಂದರು.
ಸಮಾಜದಲ್ಲಿ ಸಂಘರ್ಷವನ್ನುಂಟುಮಾಡುವ ಮತ್ತು ಜಿಲ್ಲಾಧಿಕಾರಿ ಹಾಗೂ ದಲಿತ ಪೊಲೀಸ್ ಅಧಿಕಾರಿಗಳನ್ನು ಅವಮಾನಿಸುವ ಉದ್ದೇಶದಿಂದಲೇ ಈ ಪ್ರಚೋದನೆ ಭಾಷಣ ಮಾಡಿದ್ದಾರೆ. ಅವರ ಮಾತಿನಿಂದ ಅಧಿಕಾರಿಗಳ ನೈತಿಕ ಸ್ಥೆರ್ಯ ಮತ್ತು ಕರ್ತವ್ಯಕ್ಕೆ ಕಳಂಕ ತಂದಿದೆ. ಅವರಿಗೆ ಮಾನಸಿಕ ಆಘಾತವನ್ನುಂಟು ಮಾಡಿದೆ. ಮತ್ತು ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣಸ್ವಾಮಿ, ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರ ಬಗ್ಗೆ ಮಾತನಾಡಿ ಅವಮಾನ ಮಾಡಿದ್ದಾರೆ. ಈ ಮೂಲಕ ದಲಿತರ ವಿರುದ್ಧ ದಲಿತರನ್ನು ಎತ್ತಿಕಟ್ಟಿ ಖರ್ಗೆ ಕುಟುಂಬದ ಮೇಲೆ ಗುಲಾಮಿ ಛಲುವಾದಿ ನಾರಾಯಣಸ್ವಾಮಿಯನ್ನು ಚೂ ಬಿಟ್ಟು ಕಲಬುರಗಿಯಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಕೇಸರಿಪಡೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಎನ್. ರವಿಕುಮಾರ್ ಮೇಲೆ ನಗರದ ಸ್ಟೇಷನ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೊತೆಗೆ ಕಲಬುರಗಿಯಲ್ಲಿ ಅಶಾಂತಿ ಉಂಟುಮಾಡಿ ಪ್ರಚೋದನಕಾರಿ ಮಾತುಗಳಾಡಿದ ವಿಜಯೇಂದ್ರ, ಆರ್ ಅಶೋಕ, ಸಿ.ಟಿ. ರವಿ, ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಇವರೆಲ್ಲ ಜಾತಿ ಧರ್ಮದ ಹೆಸರಿನಲ್ಲಿ ದ್ವೇಷ ಭಾಷಣಗಳ ಮಾಡಿದ್ದಾರೆ. ಇವರುಗಳ ವಿರುದ್ಧ ದೂರು ದಾಖಲಿಸಿ ಸುಪ್ರೀಂ ಕೋರ್ಟಿನ ಸ್ಪಷ್ಟ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಕೋಮುವಾದ ಹಾಗೂ ಸಂವಿಧಾನ ವಿರುದ್ಧ ಮಾತನಾಡಿದ ಎನ್. ರವಿಕುಮಾರ ಹಾಗೂ ಛಲವಾದಿ ನಾರಾಯಣಸ್ವಾಮಿ ಇವರ ವಿಧಾನ ಪರಿಷತ್ತಿನ ಸದಸ್ಯತ್ವವನ್ನು ರದ್ದುಪಡಿಸಲು ಒತ್ತಾಯಿಸಿದರು.
ಧರಣಿಯಲ್ಲಿ ರಾಜ್ಯ ಸಂ.ಸಂಚಾಲಕ ಮರಿಯಪ್ಪ ಹಳ್ಳಿ,ರಾಜ್ಯ ಸಂ. ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ರಾಜ್ಯ ಸಂಚಾಲಕ ಅರ್ಜುನ ಭದ್ರೆ, ಜಿಲ್ಲಾ ಸಂಚಾಲಕ ಎಂ.ಎಂ. ಮೇತ್ರೆ, ಮಹಾಂತೇಶ ಬಡದಾಳ, ಜಯಕುಮಾರ ನೂಲಕರ್, ಮಲ್ಲಿಕಾರ್ಜುನ ಖನ್ನಾ, ಸಂತೋಷ ತೆಗನೂರ, ಸೂರ್ಯಕಾಂತ ಅಜಾದಪೂರ,ಯಾದಗಿರಿ ಜಿಲ್ಲಾ ಮುಖಂಡ ಮಲ್ಲಿಕಾರ್ಜುನ ತಳಳ್ಳಿ, ಯಾದಗಿರಿ ಜಿಲ್ಲಾ ಸಂ ಸಂಚಾಲಕ ಅಜೀಜಸಾಬ್ ಐಕೂರ, ದತ್ತಾತ್ರಯ ಇಕ್ಕಳಕಿ, ಪೂಜಪ್ಪ ಮೇತ್ರೆ ಇನ್ನಿತರರು ಇದ್ದರು.