ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ 2024 – 25 ನೇ ಸಾಲಿನ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ ಹಾಗೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಮಾತನಾಡಿ ‘ ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು ಮರೆಯುವುದೇ ಪ್ರಜಾಪ್ರಭುತ್ವಕ್ಕೆ ಓದಗಬಹುದಾದ ಬಹುದೊಡ್ಡ ಅಪಾಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.’
” ಈ ಹಿಂದೆ ದಲಿತ, ರೈತ ಹಾಗೂ ವಿದ್ಯಾರ್ಥಿ ಸಂಘಟನೆಗಳು ಯಾವುದೇ ಹೋರಾಟ ಮಾಡಿದರೂ ಅದರಲ್ಲಿ ಮಹಾರಾಣಿ ಕಾಲೇಜಿನ ಹೆಣ್ಣು ಮಕ್ಕಳು ಪ್ರಧಾನವಾಗಿ ಪಾಲ್ಗೊಳ್ಳುತ್ತಿದ್ದರು. ಇವತ್ತು ಆ ಪರಿಸ್ಥಿತಿ ಕಾಣುತ್ತಿಲ್ಲ ಎಂದರು. ವಿದ್ಯಾರ್ಥಿಗಳು ಚಳವಳಿ ಹಾಗೂ ಪ್ರಾಜಾಸತ್ತಾತ್ಮಕ ಮೌಲ್ಯಗಳಿಂದ ದೂರ ಉಳಿಯುವುದಲ್ಲದೆ ತಮ್ಮ ಹಕ್ಕಿಗಾಗಿಯೂ ಹೋರಾಟ ಮಾಡುವುದನ್ನು ಸಹ ಮರೆತಿರುವುದು ನೋವಿನ ಸಂಗತಿ” ಎಂದು ಹೇಳಿದರು.
” ಜಾತಿ ತಾರತಮ್ಯ ಹೆಚ್ಚಾಗುತ್ತಿರುವ ಈ ದುರಿತ ಕಾಲದಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಯೋಚಿಸಬೇಕು. ಶೋಷಿತರು, ಅನ್ಯಾಯಕ್ಕೆ ಒಳಗಾದವರು, ಸರ್ಕಾರದ ಜನ ವಿರೋಧಿ ಕ್ರಮಗಳ ವಿರುದ್ಧ ನಡೆಯುವ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು. ಶತಮಾನಗಳ ಕಾಲ ದಾಸ್ಯದಲ್ಲಿದ್ದ ಶೋಷಿತರು ಮತ್ತು ಮಹಿಳೆಯರ ವಿಮೋಚನೆಗಾಗಿ ಬಾಬಾ ಸಾಹೇಬ ಬಿ. ಆರ್. ಅಂಬೇಡ್ಕರ್ ಅವರು ತಮ್ಮ ಜೀವಮಾನವನ್ನು ಮುಡಿಪಿಟ್ಟರು. ಅವರ ಶ್ರಮ, ತ್ಯಾಗ ಅಪರಿಮಿತವಾದದ್ದು.
ಅಂಬೇಡ್ಕರ್ ಅವರನ್ನು ಜಾತಿಗೆ ಸೀಮಿತ ಮಾಡದೇ ವಿದ್ಯಾರ್ಥಿಗಳು ಮುಕ್ತವಾಗಿ ಓದಬೇಕು. ಜ್ಞಾನ ಸಂಪಾದನೆಗೆ ಅವರು ಪಟ್ಟ ಶ್ರಮದಿಂದ ಸ್ಫೂರ್ತಿ ಪಡೆದು ಅಧ್ಯಯನ ಶೀಲರಾಗಬೇಕು. ಸ್ಪರ್ಧಾತ್ಮಕ ಬದುಕಿನಲ್ಲಿ ಭವಿಷ್ಯ ರೂಪಿಸಿಕೊಳ್ಳುವುದು ಸುಲಭವಲ್ಲ. ರ‍್ಯಾಂಕ್ ಪಡೆದರು ವಿಶೇಷವಾದ ಕೌಶಲ್ಯ ಅತ್ಯಗತ್ಯವಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ಬದುಕು ಸಮೃದ್ಧವಾಗುತ್ತದೆ. ನಾಯಕತ್ವ ಗುಣವೂ ಬೆಳೆಯುತ್ತದೆ ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ದಲಿತ ಮಹಿಳೆ ಜಮೀನಿಗೆ ದಾರಿ ನೀಡದ ಸವರ್ಣಿಯರು; ಬೆಳೆ ಬೆಳೆಯಲಾರದೆ ಪಾಳು ಬಿದ್ದ ಭೂಮಿ
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಬಿ.ಚಂದ್ರಶೇಖರ, ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್, ಸಹ ಪ್ರಾಧ್ಯಾಪಕಿ ಡಾ. ಎಚ್. ಸಿ.ಪ್ರಮೀಳಾ, ಡಾ. ಸಿ. ದಾಕ್ಷಾಯಿಣಿ, ನಿಲಯ ಪಾಲಕಿ ಸಿ.ಪದ್ಮಾ ಹಾಗೂ ವಿದ್ಯಾರ್ಥಿಗಳು ಇದ್ದರು.