12ನೇ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ಧರ್ಮ ಮತ್ತು ಕಾನೂನು ಬೇರೆಯಲ್ಲ. ಬಸವಣ್ಣನವರ ವಚನಗಳೇ ಕಾನೂನು. ಎಲ್ಲರಿಗೂ ಸಮಾನತೆ ತಂದು ಕೊಟ್ಟಿವೆ ಎಂದು ಹಿರಿಯ ನ್ಯಾಯವಾದಿ ವಿದ್ಯಾವತಿ ಅಂಕಲಗಿ ಹೇಳಿದರು.
ವಿಜಯಪುರ ನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ ʼಶರಣರ ವಚನಗಳಲ್ಲಿ ಕಾನೂನುʼ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
“ವಚನಗಳು ದೇಶದ ನ್ಯಾಯ ಸಂಹಿತೆಯಲ್ಲಿ ಕಾನೂನುಗಳ ಕಲಂಗಳಲ್ಲಿ ಅಡಕವಾಗಿವೆ. ಅವೆಲ್ಲವೂ ಮಹಿಳೆಯರಿಗೆ ಸಮಾನತೆ ತರುವಂತಹವು, ಸಮಾಜದ ಒಳತಿಗಾಗಿ ರಚಿಸಿದಂತಹವು. ಧರ್ಮ ಮತ್ತು ಕಾನೂನು ಬೇರೆಯಲ್ಲ, ಅವುಗಳನ್ನು ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಪಾಲಿಸಬೇಕು” ಎಂದರು.
ನ್ಯಾಯವಾದಿ ಶ್ರೀಕಾಂತ ಎಸ್ ಶಿರಡೋಣ ಮಾತನಾಡಿ, “ದೇಶದಲ್ಲಿ ಒಟ್ಟು 1860 ಕಾನೂನುಗಳು ಜಾರಿಯಲ್ಲಿದ್ದು, ಅವು ಎಲ್ಲವೂ ಶರಣರ ವಚನದಿಂದ ಬಂದದ್ದು. ವಚನಗಳು ಎಲ್ಲ ಕಾನೂನಿನ ಮೇಲೆ ಪ್ರಭಾವ ಬೀರಿವೆ” ಎಂದರು.
ಇದನ್ನೂ ಓದಿ: ವಿಜಯಪುರ | ಕೃಷಿ ಉಪಕರಣಗಳ ಸಮರ್ಪಕ ಪೂರೈಕೆಗೆ ರೈತ ಸಂಘ ಆಗ್ರಹ
ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾದ ಲಿಂಗಾಯತ ಜಿಲ್ಲಾಧ್ಯಕ್ಷ ವಿ ಸಿ ನಾಗಠಾಣ, ಬಿ ಟಿ ಈಶ್ವರಗೊಂಡ, ಉಪಾಧ್ಯಕ್ಷ ನಾಡಗೌಡರ, ಸಾಹಿತಿ ಸಂಗಮೇಶ ಬಾದಾಮಿ, ನ್ಯಾಯವಾದಿ ಕೆ ಎಫ್ ಅಂಕಲಗಿ, ದ ಕಣಬೂರ, ದೊಡ್ಡಣ್ಣ ಭಜಂತ್ರಿ, ಎಂ ಜಿ ಯಾದವಾಡ, ಮಹಾದೇವ ಹಾಲಳ್ಳಿ, ಜಗದೀಶ ಮೋಟಗಿ, ಎಸ್ ಎನ್ ಶಿವಣಗಿ, ಜಂಬುನಾಥ ಕಂಚ್ಯಾಣಿ, ಡಾ. ಸಂಗಮೇಶ ಮೇತ್ರಿ, ಡಾ. ರಮೇಶ ತೇಲಿ, ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.