ಆರು ತಿಂಗಳಿಂದ ಬೇಲೂರು ಪಟ್ಟಣದಲ್ಲಿ ಅನಾಥೆಯಾಗಿ ಓಡಾಡುತ್ತಿದ್ದ ಮಹಿಳೆಯೊಬ್ಬರನ್ನು ’24 x7 ಸೋಷಿಯಲ್ ಸರ್ವಿಸ್’ ತಂಡ ರಕ್ಷಿಸಿದೆ. ಆಕೆಯನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಡಿಪಿಯು ವೆಂಕಟೇಶ್ ಅವರ ಮೂಲಕ ಸಾಂತ್ವನ ಕೇಂದ್ರಕ್ಕೆ ಸೇರಿಸಿದ್ದಾರೆ.
ಮಹಿಳೆಯು ಆರು ತಿಂಗಳುಗಳಿಂದ ಯಾವುದೇ ನೆಲೆಯಿಲ್ಲದೆ, ಎಲ್ಲೆಂದರಲ್ಲಿ ಮಲಗಿ ಜೀವನ ಸವೆಸುತ್ತಿದ್ದರು. ಹಿಂದಿಯಲ್ಲಿ ಮಾತನಾಡುತ್ತಿದ್ದ ಆಕೆ, ತಾನು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ಖೇಡ್ ಗ್ರಾಮದ ಸಂಗೀತಾ ಎಂದು ಹೇಳಿಕೊಂಡಿದ್ದರೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
“ಬೇಲೂರು ಪಟ್ಟಣದಲ್ಲಿ ಅನಾಮಿಕ ಮಹಿಳೆ ತಿರುಗಾಡುತ್ತಿರುವುದನ್ನು ಸಮಾಜ ಸೇವಾ ತಂಡ ಗಮನಿಸಿದೆ. ಆ ಬಗ್ಗೆ ನಮ್ಮ ಗಮನಕ್ಕೆ ತಂದಿತ್ತು. ತಕ್ಷಣ ನಮ್ಮ ತಂಡ ಬೇಲೂರು ಪೊಲೀಸ್ ಇಲಾಖೆಯ ಸಹಾಯ ಪಡೆದು ಆ ಮಹಿಳೆಯನ್ನು ರಕ್ಷಿಸಿದೆ. ಆಕೆಯನ್ನು ಚನ್ನರಾಯಪಟ್ಟಣದ ಮಹಿಳಾ ಸ್ವಾಂತನ ಕೇಂದ್ರಕ್ಕೆ ರವಾನಿಸಲಾಗಿದೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಯು ವೆಂಕಟೇಶ್ ತಿಳಿಸಿದ್ದಾರೆ.