- ಪ್ರತಿಪಕ್ಷಗಳು ಮತ್ತೆ ಒಗ್ಗೂಡುತ್ತಿದ್ದಂತೆಯೇ ದೆಹಲಿಯಲ್ಲಿ ತರಾತುರಿಯಲ್ಲಿ ಸಭೆ ಕರೆದ ಬಿಜೆಪಿ
- ಕೆಲ ವರ್ಷಗಳಿಂದ ಎನ್‌ಡಿಎ ವ್ಯಾಪ್ತಿಯು ಮತ್ತಷ್ಟು ಹೆಚ್ಚಾಗಿದೆ: ಜೆ ಪಿ ನಡ್ಡಾ
ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಸಭೆಯು ನಾಳೆ ದೆಹಲಿಯಲ್ಲಿ ನಡೆಯಲಿದ್ದು, ಒಟ್ಟು 38 ಪಕ್ಷಗಳು ಭಾಗಿಯಾಗಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ತಿಳಿಸಿದ್ದಾರೆ.
ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ರಾಜಕೀಯ ಹಾಗೂ ನರೇಂದ್ರ ಮೋದಿ ಸರ್ಕಾರದ ಯೋಜನೆ, ನೀತಿಗಳಿಂದಾಗಿ ಎನ್‌ಡಿಎ ಕೂಟದಲ್ಲಿ ಹೆಚ್ಚಿನ ಉತ್ಸಾಹವಿದೆ ಎಂದು ಹೇಳಿದರು.
“ಕಳೆದ ಒಂಭತ್ತು ವರ್ಷಗಳಲ್ಲಿ ಮೋದಿಯವರ ಉತ್ತಮ ಆಡಳಿತದ ಪರಿಣಾಮದಿಂದಾಗಿ ಡಿಜಿಟಲ್ ಯುಗದಲ್ಲಿ ಬಹಳಷ್ಟು ದೊಡ್ಡ ಬೆಳವಣಿಗೆಗಳಾಗಿವೆ. ಪಾರದರ್ಶಕತೆಯ ಆಡಳಿತದಿಂದಾಗಿ ಸಮಾಜದ ಎಲ್ಲ ವಿಭಾಗಗಳನ್ನು ಎನ್‌ಡಿಎ ಸರ್ಕಾರ ತಲುಪಿದೆ. ಕೆಲ ವರ್ಷಗಳಿಂದ ಎನ್‌ಡಿಎ ವ್ಯಾಪ್ತಿಯು ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಮಿತ್ರಕೂಟದ ಪಕ್ಷಗಳಲ್ಲಿ ಹುಮ್ಮಸ್ಸಿದೆ. ದೇಶದ ಹಿತಕ್ಕಾಗಿ ಯಾರೆಲ್ಲ ನಮ್ಮ ಜೊತೆಗೆ ಕೈ ಜೋಡಿಸುತ್ತಾರೋ ಅವರನ್ನು ನಾವು ಸ್ವಾಗತಿಸುತ್ತೇವೆ” ಎಂದರು.
ವಿಪಕ್ಷಗಳ ಸಭೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಡ್ಡಾ, “ವಿಪಕ್ಷಗಳ ಕೂಟದ ನಾಯಕ ಯಾರಾಗಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ. ಈವರೆಗೆ ಅವರ ನಾಯಕ ಯಾರೂ ಅಂತಾನೇ ಗೊತ್ತಿಲ್ಲ. ನೀತಿ-ನಿಯಮ ಏನಿದೆ? ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದೆಯೋ ಗೊತ್ತಿಲ್ಲ. ಒಂದು ವೇಳೆ ಅವರ ನಿರ್ಧಾರಗಳ ಬಗ್ಗೆ ತಿಳಿದಾಗಲಷ್ಟೇ ನಾವು ಮಾತನಾಡುತ್ತೇವೆ. ನಾವು ನಮ್ಮ ಶಕ್ತಿಯನ್ನಷ್ಟೇ ನಂಬಿಕೊಂಡು ನಮ್ಮ ಗುರಿ ಮುಟ್ಟಲಿದ್ದೇವೆ. ಇನ್ನೊಬ್ಬರ ದೌರ್ಬಲ್ಯಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಜೆಪಿ ನಡ್ಡಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ವಿಪಕ್ಷಗಳ ಒಗ್ಗಟ್ಟಿನ ಸಭೆ : ಯುಪಿಎ ಹೆಸರು ಬದಲಾವಣೆ ಸಾಧ್ಯತೆ
ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳು ಸಭೆ ಸೇರಿರುವ ನಡುವೆಯೇ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಈ ಸಭೆಯನ್ನು ದೆಹಲಿಯಲ್ಲಿ ಆಯೋಜಿಸಿದೆ. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಎಲ್ಲ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.
ವಿರೋಧ ಪಕ್ಷಗಳನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರು ಒಬ್ಬರೇ ಸಾಕು ಎಂದು ಈ ಹಿಂದೆ ಹಲವು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದರು. ಆದರೆ, ಈಗ ಮತ್ತೆ ಎನ್‌ಡಿಎ ಕೂಟವನ್ನು ಆಯೋಜಿಸುತ್ತಿರುವುದು ಕೂಡ ಕುತೂಹಲ ಮೂಡಿಸಿದೆ.