ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಕಳಂಕ ತರುತ್ತಿರುವವರ ಪಟ್ಟಿಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರು ಮುಂಚೂಣಿಯಲ್ಲಿದ್ದಾರೆ. ವಯಸ್ಸಾಗಿದೆ, ಕಾಯಿಲೆ ಇದೆ, ಹೃದಯಕ್ಕೆ ಸರ್ಜರಿ ಆಗಿದೆ ಎಂಬ ಕಾರಣವನ್ನು ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸುವಾಗ ಹೆಸರಿಸುತ್ತಾರೆ. ಆ ಕಾರಣಕ್ಕೆ ಕೋರ್ಟ್ ಜಾಮೀನು ನೀಡುತ್ತದೆ. ಆದರೆ, ತನಗೆ ವಯಸ್ಸಾಗಿದೆ, ಕಾಯಿಲೆ ಇದೆ, ಇದೆಲ್ಲ ಸಾಕು ಎಂದು ಭಟ್ರಿಗೆ ಅನ್ನಿಸುತ್ತಿಲ್ಲ. ಸದಾ ಕೋಮುದ್ವೇಷದ ಭಾಷಣ ಮಾಡುವುದು, ಕೇಸು ಬಿದ್ದರೆ ಜಾಮೀನು ತೆಗೆದುಕೊಳ್ಳುವುದು ಇದು ಕಲ್ಲಡ್ಕ ಭಟ್ಟರ ಎಂದಿನ ಚಾಳಿಯಾಗಿದೆ.
ಕೋಮುವಾದದ ಪ್ರಯೋಗಶಾಲೆ ಎಂಬ ಹಣೆಪಟ್ಟಿ ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿಕೊಂಡ ಕಳಂಕ. ಬುದ್ದಿವಂತರ ಜಿಲ್ಲೆ ಎಂಬುದು ಈಗ ಲೇವಡಿಯ ಹೇಳಿಕೆಯಾಗಿದೆ. ಇಡೀ ರಾಜ್ಯದಲ್ಲಿ ಕರಾವಳಿಯ ಈ ಜಿಲ್ಲೆಯಲ್ಲಿ ಮಾತ್ರ ಹಿಂದು- ಮುಸ್ಲಿಂ ಪ್ರತೀಕಾರದ ಕೊಲೆಗಳು ಆಗಾಗ ಸುದ್ದಿಯಾಗುತ್ತಿವೆ. ಹಿಂದೂಗಳ ಹತ್ಯೆಗೂ ಕಾಂಗ್ರೆಸ್ ಕಾರಣ, ಮುಸ್ಲಿಂ ಹತ್ಯೆಗೂ ಕಾಂಗ್ರೆಸ್ ಕಾರಣ ಎಂಬುದು ಸಂಘಪರಿವಾರ ಮತ್ತು ಬಿಜೆಪಿಗಳ ಹಳಹಳಿಕೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಹಿಂದುತ್ವದ ಕೋಮುವಾದಿ ನಾಯಕರು ಇನ್ನಷ್ಟು ಪ್ರಚೋದಿಸುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ತಮ್ಮ ಸಂಘಟನೆಗಳ ಮುಖಂಡರ ದ್ವೇಷ ಭಾಷಣದ ವಿರುದ್ಧ ಸಣ್ಣದೊಂದು ಸಮಾಧಾನ ಅಥವಾ ಮನಪರಿವರ್ತನೆಯ ಗಾಳಿಯೂ ಅವರ ಬಳಿ ಸೋಕುವುದಿಲ್ಲ. ಬಡ ವರ್ಗದ ಅಮಾಯಕ ಯುವಕರ ಮಿದುಳಿಗೆ ಮುಸ್ಲಿಂ ದ್ವೇಷದ ವಿಷ ತುಂಬಿ ಅವರಿಂದ ಪ್ರತೀಕಾರದ ಕೊಲೆಗಳನ್ನು ಮಾಡಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಈಗ ಕೋಮುವಾದದ ಪ್ರಯೋಗಶಾಲೆಯಾಗಿ ಉಳಿದಿಲ್ಲ, ಕೋಮುವಾದಿಗಳ ಕಾರ್ಖಾನೆಯಾಗಿದೆ. ಹಿಂದೂಪರ ಎಂದು ಹೇಳಿಕೊಳ್ಳುವ ಸಂಘಟನೆಗಳ ಕಾರ್ಯಕ್ರಮಗಳಿಗೆ, ಪ್ರತಿಭಟನೆಗಳಿಗೆ ಸೇರುವ ಜನ ಸಾಗರ ನೋಡಿದರೆ ಕರಾವಳಿಯ ಈ ಜಿಲ್ಲೆಯಲ್ಲಿ ಕೋಮುವಾದ ಎಷ್ಟು ಗಟ್ಟಿಯಾಗಿ ಬೇರೂರಿದೆ ಎಂಬುದರ ಅಂದಾಜು ಸಿಗುತ್ತದೆ. ಯುವಕರು, ಮಕ್ಕಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಯಾವುದೇ ಅಂಜಿಕೆ ಭಯ ಇಲ್ಲದೇ ಘೋಷಣೆ ಕೂಗುತ್ತಾ, ಕೋಮುವಾದಿ ಭಾಷಣಗಳಿಗೆ ಬಹುಪರಾಕ್ ಹೇಳುತ್ತಾರೆ.
ಮುಖ್ಯವಾಗಿ ಈ ಜಿಲ್ಲೆಗೆ ಕಳಂಕ ಹೊರಿಸುತ್ತಿರುವವರ ಪಟ್ಟಿಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರು ಮುಂಚೂಣಿಯಲ್ಲಿದ್ದಾರೆ. ವಯಸ್ಸಾಗಿದೆ, ಕಾಯಿಲೆ ಇದೆ, ಹೃದಯಕ್ಕೆ ಸರ್ಜರಿ ಆಗಿದೆ ಎಂಬ ಕಾರಣವನ್ನು ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸುವಾಗ ಹೆಸರಿಸುತ್ತಾರೆ. ಆ ಕಾರಣಕ್ಕೆ ಕೋರ್ಟ್ ಜಾಮೀನು ನೀಡುತ್ತದೆ. ಆದರೆ, ತನಗೆ ವಯಸ್ಸಾಗಿದೆ, ಕಾಯಿಲೆ ಇದೆ. ಇದೆಲ್ಲ ಸಾಕು ಎಂದು ಭಟ್ರಿಗೆ ಅನ್ನಿಸುತ್ತಿಲ್ಲ. ಸದಾ ಕೋಮುದ್ವೇಷದ ಭಾಷಣ ಮಾಡುವುದು, ಕೇಸು ಬಿದ್ದರೆ ಜಾಮೀನು ತೆಗೆದುಕೊಳ್ಳುವುದು ಇದು ಕಲ್ಲಡ್ಕ ಭಟ್ಟರ ಎಂದಿನ ಚಾಳಿ. ಇಡೀ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಬಡ, ಅಮಾಯಕ ಯುವಕರನ್ನು ಕೇಸರಿ ಶಾಲು ಹಾಕಿಸಿ ಹಿಂದೂ ಧರ್ಮ ರಕ್ಷಣೆಯ ಹೆಸರಿನಲ್ಲಿ ಬೀದಿ ಹೆಣವಾಗಿಸುವುದು ಇದೇ ಇಷ್ಟು ವರ್ಷಗಳ ಇವರ ಕಾಯಕ. ಈಗ ಮತ್ತೆ ಕಲ್ಲಡ್ಕ ಭಟ್ಟರು ಸುದ್ದಿಯಾಗಿದ್ದಾರೆ. ಮತ್ತೆ ಅದೇ ದ್ವೇಷ ಭಾಷಣದ ಮೂಲಕ, ಪ್ರಕರಣದ ದಾಖಲಾಗಿ ಜಾಮೀನು ಪಡೆದು ಸುದ್ದಿಯಾಗಿದ್ದಾರೆ. ಎರಡು ವರ್ಷದ ಹಿಂದೆ ದ್ವೇಷಭಾಷಣ ಮಾಡಿದ ಪ್ರಕರಣ ಇನ್ನೂ ಕೋರ್ಟ್ನಲ್ಲಿದೆ. ಸಲೀಸಾಗಿ ಜಾಮೀನು ಪಡೆದು ಮತ್ತೆ ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಪ್ರಾಣ ಕಳೆದುಕೊಳ್ಳುತ್ತಿರುವುದು, ಜೈಲು ಪಾಲಾಗುತ್ತಿರುವುದು ಹಿಂದೂ ಮುಸ್ಲಿಂ ಎರಡೂ ಸಮುದಾಯದ ಬಡ ಯುವಕರು. ಒಂದೊಂದು ಹೆಣ ಬಿದ್ದಾಗಲೂ ಎದ್ದೆದ್ದು ಬಂದು ಮತ್ತೆ ಕೋಮುದ್ವೇಷದ ಭಾಷಣ ಮಾಡಿ ಮನೆಯಲ್ಲಿ ಬೆಚ್ಚಗಿರುತ್ತಾರೆ. ಅಮಾಯಕರು ಕೋರ್ಟಿಗೆ ಅಲೆಯುತ್ತ ಬದುಕು ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಸತತವಾಗಿ ಬಿಜೆಪಿ ಶಾಸಕರು, ಸಂಸದರು ಗೆದ್ದು ಬರುತ್ತಿರುವುದು ಮತ್ತು ಕಲ್ಲಡ್ಕ ಪ್ರಭಾಕರ ಭಟ್ಟರ ಇತಿಹಾಸವೇ ದ್ವೇಷ ಭಾಷಣದ್ದು.
2023 ಡಿಸೆಂಬರ್ 24ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. “ಮುಸ್ಲಿಮರಿಗೆ ತಲಾಖ್ ಹೇಳುವ ಅವಕಾಶ ಇತ್ತು. ಪ್ರಧಾನಿ ಮೋದಿಯವರ ಸರ್ಕಾರದಿಂದಾಗಿ ತ್ರಿವಳಿ ತಲಾಖ್ ರದ್ದಾಗಿದೆ. ತ್ರಿವಳಿ ತಲಾಖ್ ರದ್ದುಪಡಿಸುವ ಮೂಲಕ ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ. ಅವರಿಗೆ ದಿನಕ್ಕೆ ಒಬ್ಬ ಗಂಡ ಇದ್ದ, ಪರ್ಮನೆಂಟ್ ಗಂಡ ಇರಲಿಲ್ಲ. ಬಹು ಪತ್ನಿತ್ವ ಪಿಡುಗು, ತಲಾಖ್ ಕಾಟದಿಂದ ಈ ಹಿಂದೆ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಶಾಶ್ವತ ಪತಿ ಇರಲಿಲ್ಲ. ದಿ ಕೇರಳ ಸ್ಟೋರಿ, ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿ. ಮತಾಂತರ, ಹಿಂದೂಗಳ ಮೇಲಿನ ದೌರ್ಜನ್ಯ ತೋರಿಸಿದ್ದಾರೆ. ಮುಸ್ಲಿಮ್ ಹುಡುಗರಲ್ಲ, ಯುವತಿಯರು ಮೋಸ ಮಾಡುತ್ತಿದ್ದಾರೆ. ದಿ ಕೇರಳ ಸ್ಟೋರಿ ಮೂವಿಯಲ್ಲಿ ಈ ಬಗ್ಗೆ ತೋರಿಸಿದ್ದಾರೆ. ಮತಾಂತರ ಮಾಡಲು ಲವ್ ಜಿಹಾದ್ ಪ್ರಯತ್ನಗಳಾಗುತ್ತಿವೆ ಎಂದು ಆರೋಪಿಸಿದ್ದರು.

ಇದರ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ದೂರು ನೀಡಿದ್ದರು. ಅವರ ದೂರು ಆಧರಿಸಿ ಶ್ರೀರಂಗಪಟ್ಟಣ ಟೌನ್ ಠಾಣೆಯ ಪೊಲೀಸರು ಪ್ರಭಾಕರ್ ಭಟ್ ವಿರುದ್ಧ ಐಪಿಸಿ ಸೆಕ್ಷನ್ಗಳಾದ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಮಾತುಗಳನ್ನು ಆಡುವುದು), 509 (ಮಹಿಳೆಯ ಖಾಸಗಿತನಕ್ಕೆ ಸಂಬಂಧಿಸಿದ ಮಾತುಗಳನ್ನಾಡುವುದು), 153ಎ (ಧರ್ಮದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡುವುದು) ಮತ್ತು 298 (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದರು.
ಜಾಮೀನು ರಹಿತ ಪ್ರಕರಣವಾಗಿದ್ದರೂ, ಆರೋಪಿ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ವಯಸ್ಸಾಗಿದೆ ಎಂಬ ಕಾರಣ ನೀಡಿ ಶ್ರೀರಂಗಪಟ್ಟಣ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ಆ ಸಮಯದಲ್ಲಿ ಮುಂದೆ ಇಂತಹ ಭಾಷಣ ಮಾಡಿದ ಬಗ್ಗೆ ದೂರು ದಾಖಲಾದರೆ ಈ ಜಾಮೀನು ಸಹಜವಾಗಿಯೇ ರದ್ದಾಗಲಿದೆ ಎಂದು ಹೇಳಿತ್ತು ಕೊರ್ಟ್. ಇದಾದ ನಂತರ ಪ್ರಕರಣಕ್ಕೆ ಹೈಕೋರ್ಟ್ ಸ್ಟೇ ಕೊಟ್ಟಿತ್ತು.
ಆ ನಂತರ ಹೆಚ್ಚಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ಪ್ರಭಾಕರ ಭಟ್ ಸುಹಾಸ್ ಶೆಟ್ಟಿ ಹತ್ಯೆಯ ನಂತರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮತ್ತೆ ದ್ವೇಷದ ಮಾತುಗಳನ್ನು ಆಡಿದ್ದಾರೆ. ಮೇ 25ರಂದು ಪೊಲೀಸರ ಅನುಮತಿ ಇಲ್ಲದೆಯೇ ಹಿಂದೂ ಸಂಘಟನೆಗಳು ಬಜ್ಪೆ ಚಲೋ ನಡೆಸಿವೆ. ಅಲ್ಲಿ ಹಿಂದುತ್ವವಾದಿ ಮುಂಖಂಡರು ಬೇಕಾಬಿಟ್ಟಿ ಪ್ರತೀಕಾರದ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಈ ಬಗ್ಗೆ ಮುಸ್ಲಿಂ ಸಂಘಟನೆಗಳು ದೂರು ದಾಖಲಿಸಿದ್ದರೂ ಆರೋಪಿಗಳನ್ನು ಪೊಲೀಸರು ಬಂಧಿಸಿರಲಿಲ್ಲ. ಮೇ 27ರಂದು ಬಂಟ್ವಾಳದ ಕೊಳತ್ತಮಜಲಿನ ಅಬ್ದುಲ್ ರೆಹ್ಮಾನ್ ಎಂಬ ಪಿಕಪ್ ಮಾಲಕನನ್ನು ತಮ್ಮ ನಿರ್ಮಾಣ ಹಂತದ ಮನೆಗೆ ಮರಳು ತರುವಂತೆ ಹೇಳಿದ ಊರಿನ ಪರಿಚಿತನೇ ಆಗಿದ್ದ ದೀಪಕ್ ಮರಳು ಅನ್ಲೋಡ್ ಮಾಡುತ್ತಿದ್ದಾಗ ತನ್ನ ತಂಡದೊಂದಿಗೆ ಬಂದು ಕೊಚ್ಚಿ ಹಾಕಿದ್ದರು. ಜೊತೆಗಿದ್ದ ಸಹಾಯಕ ಕಿರುಚಾಡಿದಾಗ ಆತನಿಗೂ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಇದು ಮುಸ್ಲಿಂ ಸಮುದಾಯವನ್ನು ಕೆರಳಿಸಿತ್ತು. ಅವರೆಲ್ಲರ ಆರೋಪ ಬಜ್ಪೆ ಚಲೋ ಮಾಡಿ ಪ್ರತೀಕಾರದ ದ್ವೇಷ ಭಾಷಣ ಮಾಡಿದ್ದವರ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಕಾಂಗ್ರೆಸ್ ಸರ್ಕಾರ ಮುಸ್ಲಿಮರ ರಕ್ಷಣೆಗೆ ಬರುತ್ತಿಲ್ಲ ಎಂಬುದಾಗಿತ್ತು. ಅಷ್ಟೇ ಅಲ್ಲ ಕಾಂಗ್ರೆಸ್ನ ಮುಸ್ಲಿಂ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಕೊಟ್ಟು ತಮ್ಮ ಆಕ್ರೋಶ ಹೊರ ಹಾಕಿದ್ದರು. ಈ ಬೆಳವಣಿಗೆಯ ನಂತರ ಎಚ್ಚೆತ್ತು ಕೊಂಡ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಬದಲಾವಣೆ ಮಾಡಲಾಗಿದೆ. ಸುಧೀರ್ ಕುಮಾರ್ ರೆಡ್ಡಿ ಅವರು ಮಂಗಳೂರು ಪೊಲೀಸ್ ಕಮಿಷನರ್ ಆಗಿ ಬಂದರೆ, ಡಾ. ಅರುಣ್ ಕೆ ಅವರು ಎಸ್ಪಿ ಆಗಿ ನಿಯೋಜನೆಗೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ ತಕ್ಷಣ ಎಸ್ಪಿ ಅರುಣ್ ಅವರು ದ್ವೇಷಭಾಷಣಕಾರರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕ್ರಮದ ಭಾಗವಾಗಿ ಜೂನ್ 2ರ ಬೆಳಿಗ್ಗೆ ಸುಹಾಸ್ ಹತ್ಯೆಯ ಪ್ರಕರಣದಲ್ಲಿ ದ್ವೇಷ ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶ್ರೀಕಾಂತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಸಂಜೆ ವೇಳೆಗೆ ಹೈಕೋರ್ಟ್ ಇವರಿಬ್ಬರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ಆದೇಶ ನೀಡಿದೆ.
ಶ್ರೀರಂಗಪಟ್ಟಣದ ಪ್ರಕರಣದಲ್ಲಿಯೇ ಪ್ರಭಾಕರ ಭಟ್ ವಿರುದ್ಧ ಕೋರ್ಟ್ಗಳು ಎಚ್ಚರಿಸುವ ಕೆಲಸ ಮಾಡಿದ್ದರೆ, ಕೋರ್ಟ್ಗೆ ಅಲೆಯುವಂತೆ ಮಾಡಿದ್ದರೆ ದ್ವೇಷ ಭಾಷಣ ಮಾಡುವ ಬಗ್ಗೆ ಯೋಚಿಸುತ್ತಿದ್ದರೇನೋ ಎಂಬುದು ಹಲವರ ಅಭಿಪ್ರಾಯ. ಹರೀಶ್ ಪೂಂಜಾ ವಿರುದ್ಧ ಏಳು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಮತ್ತೊಂದು ಪ್ರಕರಣ ದಾಖಲಾಗಿದೆ. ಅದು ದ್ವೇಷ ಭಾಷಣದ ಪ್ರಕರಣ. ಇಂತಹ ನೂರು ಎಫ್ಐಆರ್ ದಾಖಲಾದರೂ ಹೆದರಲ್ಲ ಎಂದು ಎದೆಯುಬ್ಬಿಸಿ ಹೇಳಿಕೆ ನೀಡಿದ್ದಾರೆ. ಇವೆಲ್ಲವನ್ನು ಕೋರ್ಟ್ಗಳು ಗಮನಿಸುತ್ತಿಲ್ಲವೇ ಎಂಬ ಅನುಮಾನ ಕಾಡುತ್ತದೆ.

ಬಜ್ಪೆಯ ಸುಶಾಂತ್ ಶೆಟ್ಟಿ ಕೊಲೆಯಾದ ನಂತರ ಶಾಸಕ ಹರೀಶ್ ಪೂಂಜಾ ಮೇ 3ರಂದು ತೆಕ್ಕಾರುವಿನ ಭಟ್ರಬೈಲು ಎಂಬಲ್ಲಿ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮ ಕಲಶೋತ್ಸವ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಇದರ ವಿರುದ್ಧ ಪ್ರಕರಣ ದಾಖಲಾಗಿತ್ತು. “ತೆಕ್ಕಾರಿನ ಕಂತ್ರಿ ಬ್ಯಾರಿಗಳು ಟ್ಯೂಬ್ಲೈಟ್ ಒಡೆದಿದ್ದಾರೆ. ಜನರೇಟರ್ನ ಡೀಸೆಲ್ ಕದ್ದಿದ್ದಾರೆ. ನಾವು ಮಸೀದಿಗೆ ಹೋಗಿ ಆಮಂತ್ರಣ ಕೊಟ್ಟಿದ್ದರಿಂದ ಬ್ಯಾರಿಗಳು ಟ್ಯೂಬ್ ಹೊಡೆದಿದ್ದಾರೆ. ಅವರಿಗೆ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಕರೆಯಬಾರದಿತ್ತು. ಹಿಂದೂಗಳೇ ಅವರನ್ನು ಸೇರಿಸಬಾರದು. ತೆಕ್ಕಾರಿನಲ್ಲಿ 1,200 ಮುಸ್ಲಿಮರಿದ್ದಾರೆ. ನಾವು ಹಿಂದೂಗಳು 150 ಮನೆಯವರು ಇದ್ದೇವೆ. ಮುಸ್ಲಿಮರು ಐದು ಸಾವಿರ ಅಲ್ಲ, 10 ಸಾವಿರ ಆದರೂ ಅವರನ್ನು ಹೆದರಿಸಿ. ನೀವು ಸನಾತನ ಹಿಂದೂ ಧರ್ಮವನ್ನು ಪಾಲನೆ ಮಾಡಿ, ದೇವರ ಪೂಜೆ ಮಾಡಿಕೊಂಡು ಬರಬೇಕು” ಎಂದು ಹರೀಶ್ ಪೂಂಜಾ ಹೇಳಿದ್ದರು.
“ಬಹಳ ಸೂಕ್ಷ್ಮ ಸನ್ನಿವೇಶದಲ್ಲಿ ಶಾಸಕ ಹರೀಶ್ ಪೂಂಜಾ ಅವರು ದ್ವೇಷ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಸ್ಥಳೀಯ ಮುಸ್ಲಿಂ ಮುಖಂಡ ಎಸ್ಎಂಎಸ್ ಇಬ್ರಾಹಿಂ ಮುಸ್ಲಿಯಾರ್ ಅವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಪೊಲೀಸರು ವಿಡಿಯೋಗಳನ್ನು ಪರಿಶೀಲಿಸಿ, ಬಿಎನ್ಎಸ್ ಕಾಯ್ದೆ ಕಲಂ 196, 353(2) ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ರದ್ದುಪಡಿಸುವಂತೆ ಆರೋಪಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಪ್ರಕರಣಕ್ಕೆ ತಡೆ ನೀಡಿದೆ.
ಪ್ರಕರಣಕ್ಕೆ ತಡೆ ನೀಡುವ ಆ ತಾಂತ್ರಿಕ ಕಾರಣವೇನು?
ಹಿರಿಯ ನ್ಯಾಯವಾದಿ ಎಸ್ ಬಾಲನ್ ಅವರು ಈ ದಿನದ ಜೊತೆ ಮಾತನಾಡಿ ಬಿಎನ್ಎಸ್ ತಿದ್ದುಪಡಿ ಕಾಯ್ದೆ ಹೇಗೆ ಪೊಲೀಸರ ಕೈಗಳನ್ನು ಕಟ್ಟಿ ಹಾಕಿದೆ, ಅಧಿಕಾರ ಕಿತ್ತುಕೊಂಡಿದೆ ಎಂದು ವಿವರಿಸಿದ್ದಾರೆ. ಕೋಕಾ ಕಾಯ್ದೆ ಸೆಕ್ಷನ್ 11ಕ್ಕೆ ತಿದ್ದುಪಡಿ ತಂದು ಅದಕ್ಕೆ ದ್ವೇಷ ಭಾಷಣ ಪ್ರಕರಣವನ್ನೂ ಸೇರಿಸಬೇಕು” ಎಂದು ಅವರು ಸಲಹೆ ನೀಡಿದ್ದಾರೆ.
ಮೊದಲು ಐಪಿಸಿ ಇತ್ತು, ಈಗ ಬಿಎನ್ಎಸ್. ಐಪಿಸಿನಲ್ಲಿ ಸೆಕ್ಷನ್ 153ಎ, 153ಬಿ, 505, ಈ ಸೆಕ್ಷನ್ಸ್ ಇತ್ತು. ಇದೆಲ್ಲ ನಾನ್ ಬೇಲೇಬಲ್ ಅಫೆನ್ಸಸ್ ಸೆಕ್ಷನ್. 154 ಸಿಆರ್ಪಿಸಿ ಪ್ರಕಾರ ಪೊಲೀಸರಿಗೆ ಎಫ್ಐಆರ್ ನೋಂದಣಿ ಮಾಡಲು, ಬಂಧಿಸಲು, ತನಿಖೆಗೆ ಒಳಪಡಿಸೋದು, ಕಸ್ಟಡಿಗೆ ತೆಗೆದುಕೊಳ್ಳುವುದು, ಕೋರ್ಟಿಗೆ ಪ್ರೊಡ್ಯೂಸ್ ಮಾಡೋದು, ಎಲ್ಲ ಅಧಿಕಾರ ಇತ್ತು. ಬಿಜೆಪಿ ಸರ್ಕಾರ ಕಾನೂನನ್ನು ಬದಲಾವಣೆ ಮಾಡಿದೆ. ಅಂದ್ರೆ ಮೂರು ವರ್ಷದಿಂದ ಏಳು ವರ್ಷದ ಒಳಗಡೆ ಶಿಕ್ಷೆ ಇರುವ ಅಪರಾಧಗಳಿಗೆ ಪೊಲೀಸರಿಗೆ ಬಂಧಿಸುವ ಅಧಿಕಾರ, ಇಂಟರಾಗೇಶನ್ ಅಧಿಕಾರ, ಕಸ್ಟೋಡಿಯಲ್ ಇಂಟರಾಗೇಶನ್ ಮಾಡಲು ಇದ್ದ ಅಧಿಕಾರವನ್ನು ಕಿತ್ತು ಹಾಕಿದ್ದಾರೆ.

“ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ ಇಲ್ಲ ಪರ್ಮನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ” ಎಂದು ಮಾತಾಡಬಹುದು, ಮುಸ್ಲಿಮರನ್ನ ಕೊಂದುಬಿಡಬೇಕೆಂದು ಮಾತಾಡಬಹುದು. ಒಬ್ಬ ಶಾಸಕ, “ಆ ಇನ್ಸ್ಪೆಕ್ಟರ್ ನಾಯಿಯ ಮಗ, ತಹಶೀಲ್ದಾರ್ ತಲೆ ಕಡಿಬೇಕು” ಎಂದು ಮಾತಾಡ್ತಾರೆ. ಇನ್ನೊಬ್ಬರು ಮಾತಾಡ್ತಾರೆ “ಸುಹಾಸ್ ಶೆಟ್ಟಿಯನ್ನ ಕೊಂದರುವವರನ್ನ ನಾವು ಬಿಡೋದಿಲ್ಲ. ಯಾವಾಗ ಎಲ್ಲಿ, ಏನು ಮಾಡಬೇಕು ಅನ್ನೋದನ್ನ ನಾವು ತೀರ್ಮಾನ ಮಾಡುತ್ತೇನೆ” ಎಂದು. ಹಾಗೆ ಹೇಳಿದ ಮಾರನೇ ದಿವಸ ರಹ್ಮಾನ್ ಕೊಲೆಯಾದ. ಇನ್ನೊಬ್ಬ ವ್ಯಕ್ತಿ ಮಾತಾಡ್ತಾರೆ “ಮಹಿಳೆಯರು ಮನೆಯಲ್ಲಿ ತಲವಾರು ಇಟ್ಕೊಬೇಕು, ವ್ಯಾನಿಟಿ ಬ್ಯಾಗ್ ನಲ್ಲಿ ಚಾಕು, ಚೂರಿ ಇಟ್ಕೊಬೇಕು” ಅಂತ. ಹೊಸ ಕಾನೂನಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದರೆ, ಲಾಟಿ ಎತ್ತಂಗಿಲ್ಲ, ಬಂಧಿಸೋ ಹಾಗಿಲ್ಲ. ಠಾಣೆಗೆ ಕರೆದುಕೊಂಡು ಬರೋ ಅಧಿಕಾರ ಇಲ್ಲ. ಎಫ್ಐಆರ್ ರಿಜಿಸ್ಟರ್ ಮಾಡೋ ಅಧಿಕಾರ ಇಲ್ಲ. ದ್ವೇಷ ಭಾಷಣ ಮಾಡಿದ್ರೆ ಅವರಿಗೆ ಒಂದು ನೋಟಿಸ್ ಕೊಡಬೇಕು. 14 ದಿವಸ ಅವಕಾಶ ಕೊಡಬೇಕು. ಕೊಡದೇ ಎಫ್ಐಆರ್ ದಾಖಲೆ ಮಾಡಿದ್ರೆ ಟೆಕ್ನಿಕಲ್ ಗ್ರೌಂಡ್ನಲ್ಲಿ ಸ್ಟೇ ಸಿಗುತ್ತೆ. ಹರೀಶ್ ಪೂಂಜಾ ಮೇಲೆ ಆರು ಕೇಸ್ ಇತ್ತು. ಏಳನೆಯದಕ್ಕೆ ಸ್ಟೇ ಆಯಿತು. 173 ಬಿಎನ್ಎಸ್ ಪ್ರಕಾರ ಪೊಲೀಸರಿಗೆ ಇರುವ ಎಲ್ಲ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಸ ಕಾನೂನಿನಿಂದ ಕಿತ್ತು ಹಾಕಿದೆ. ಅಂದ್ರೆ ಎಫ್ಐಆರ್ ನೋಂದಣಿ ಮಾಡಬಹುದು, ಯಾವಾಗ ಅಂದ್ರೆ 14 ದಿವಸ ಆದ ಮೇಲೆ. ಆದರೆ ಬಂಧಿಸಬಾರದು. ಅಡಿಗೆ ಮಾಡ್ತೀವಿ ತಿನ್ನಬಾರದು ಎಂಬಂತಾಗಿದೆ. ಕರ್ನಾಟಕದಲ್ಲಿ ಈಗ ಹೇಟ್ ಸ್ಪೀಚ್ ಬಿಲ್ ತರ್ತಾರಂತೆ, ಆಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ರಚನೆ ಮಾಡ್ತಾರಂತೆ. ಎಸ್, ಆಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ರಚನೆ ಮಾಡ್ತೀರಾ, ಅಧಿಕಾರ ಎಲ್ಲಿದೆ…? ಆಂಟಿ ಹೇಟ್ ಸ್ಪೀಚ್ ಬಿಲ್ ತರ್ತೀರ ಅಧಿಕಾರ ಎಲ್ಲಿದೆ? ಆದರೆ ಇದರಿಂದ ಏನೂ ಪ್ರಯೋಜನವಾಗದು. ಕೋಕಾ ಕಾಯ್ದೆ ಸೆಕ್ಷನ್ 11ಕ್ಕೆ ತಿದ್ದುಪಡಿ ತಂದು ಅದಕ್ಕೆ ದ್ವೇಷ ಭಾಷಣ ಪ್ರಕರಣವನ್ನೂ ಸೇರಿಸಬೇಕು” ಎಂದು ಅವರು ಹೇಳುತ್ತಾರೆ.

ಕಲ್ಲಡ್ಕ ಪ್ರಭಾಕರ ಭಟ್ ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದರ ವಿರುದ್ಧ ಪ್ರಕರಣ ದಾಖಲಿಸಿರುವ ಸಾಮಾಜಿಕ ಕಾರ್ಯಕರ್ತೆ ನಜ್ಮಾ ಚಿಕ್ಕನೇರಳೆ ಅವರು ಈ ಬಗ್ಗೆ ಬಹಳ ವಿಷಾದದಿಂದ ಮಾತನಾಡಿದ್ದಾರೆ. “ನಾವು ಇನ್ನೆಲ್ಲಿಗೆ ಹೋಗಬೇಕು? ಮುಸ್ಲಿಮರಿಗೆ, ಮುಸ್ಲಿಂ ಹೆಣ್ಣುಮಕ್ಕಳಿಗೆ ನ್ಯಾಯ ಕೊಡುವವರು ಯಾರು? ಕೋರ್ಟ್ಗಳೇ ಇಂತಹ ಕೋಮುದ್ವೇಷಕಾರರ ಪ್ರಕರಣಗಳಿಗೆ ತಡೆ ಕೊಟ್ಟರೆ ನಮಗೆ ನ್ಯಾಯ ಸಿಗುವುದು ಹೇಗೆ? ಸರ್ಕಾರಿ ಅಭಿಯೋಜಕರೂ ಇಂತಹ ಪ್ರಕರಣದ ಗಂಭೀರತೆಯ ಬಗ್ಗೆ ಸಮರ್ಪಕವಾಗಿ ವಾದಿಸುತ್ತಿಲ್ಲ ಎಂಬುದು ಇನ್ನೂ ಬೇಸರದ ಸಂಗತಿ” ಎಂದು ಹೇಳುತ್ತಾರೆ ನಜ್ಮಾ.
***
ಪೊಲೀಸ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಹರಡುವ, ಹಲವು ಅಪರಾಧ ಕೃತ್ಯಗಳ ಆರೋಪಿಗಳ ವಿರುದ್ಧ ಜಿಲ್ಲಾ ಗಡಿಪಾರು ನೋಟಿಸ್ ಜಾರಿ ಮಾಡಿದೆ. ಅದರಲ್ಲಿ ಹಿಂದೂ- ಮುಸ್ಲಿಂ ಎರಡೂ ಸಮುದಾಯದ 36 ಜನರಿದ್ದಾರೆ. ಆದರೆ ನಿಜಕ್ಕೂ ಜಿಲ್ಲೆಗೆ ಅಪಾಯಕಾರಿಯಾಗಿರುವ ಕಲ್ಲಡ್ಕ ಪ್ರಭಾಕರ ಭಟ್, ಶರಣ್ ಪಂಪ್ವೆಲ್, ಶಾಸಕತ್ರಯರಾದ ಹರೀಶ್ ಪೂಂಜಾ, ಡಾ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಅವರಂತಹ ಹಲವರ ಭಾಷಣಗಳಿಗೆ ಕಡಿವಾಣ ಹಾಕುವವರು ಯಾರು ಮತ್ತು ಯಾವಾಗ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.