ಗೊರವನಹಳ್ಳಿ ಹೃತಿಕ್ಷಾ ಸಾವಿನ ಬಳಿಕ ಮದ್ದೂರು ಆಸ್ಪತ್ರೆ ಸೌಕರ್ಯಗಳ ಉನ್ನತೀಕರಣ, ವೈದ್ಯರು ವೈದ್ಯಕೀಯ ಸಿಬ್ಬಂದಿಗಳಲ್ಲಿ ಸ್ಪಂದನಾಶೀಲತಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮದ್ದೂರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ವೈದ್ಯಾಧಿಕಾರಿಯೊಂದಿಗೆ ಆಸ್ಪತ್ರೆ ಸಭಾಂಗಣದಲ್ಲಿ ಸಭೆ ನಡೆಸಿದರು.
ಹೃದಯಾಘಾತವಾದ ವೇಳೆ ಪ್ರಾಥಮಿಕವಾಗಿ ನೀಡುವ ಮಾತ್ರೆಗಳ ಕುರಿತು ಪ್ರಾಂತ ರೈತ ಸಂಘದ ಅಧ್ಯಕ್ಷ ಎಸ್ ವಿಶ್ವನಾಥ್ ಕೇಳಿದ ಪ್ರಶ್ನೆಗೆ ವೈದ್ಯಾಧಿಕಾರಿ ಬಾಲಕೃಷ್ಣ ಉತ್ತರಿಸಿ, ʼಹೃದಯಾಘಾತಕ್ಕೆ ಬೇಕಾದ ಮಾತ್ರೆ ಇದೆ. ಇದಕ್ಕೆ ಬೇಕಾದ ಮಾತ್ರೆಗಳ ಕಿಟ್ ಇಡಲು ಕ್ರಮವಹಿಸಲಾಗುವುದುʼ ಎಂದರು.
ʼತಡರಾತ್ರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಬಿ ಪಿ, ಶುಗರ್ ಪರೀಕ್ಷೆಗೆ ಬೇಕಾದ ಆಗತ್ಯ ಸಲಕರಣೆಗಳಿಲ್ಲ. ಹೀಗಾದರೆ ರೋಗಿಗಳ ಸುರಕ್ಷತೆ ಹೇಗೆʼ ಎಂದು ಎಸ್ ಪ್ರಸನ್ನ ಕುಮಾರ್ ಪ್ರಶ್ನಿಸಿದರು.
“ರೋಗಿಗಳು ಬರುವ ಅಂದಾಜಿನಲ್ಲಿ ಕಡಿಮೆ ಸಲಕರಣೆ ಕೊಟ್ಟಿರುತ್ತೇವೆ. ಹೆಚ್ಚು ರೋಗಿಗಳು ಬಂದಾಗ ತೊಂದರೆಯಾಗಿದೆ.
ಇದಕ್ಕೆ ನಮ್ಮ ವೈದ್ಯಕೀಯ ಸಿಬಂದಿಗಳನ್ನು ದೂರುವುದು ಬೇಡ” ಎಂದರು
ಈ ವೇಳೆ ನ. ಲಿ. ಕೃಷ್ಣ ಮಾತನಾಡಿ, “ಸಲಕರಣೆ ದುಪ್ಪಟ್ಟುಗೊಳಿಸಿ ರೊಗಿಗಳಿಗೆ ಅನುಕೂಲ ಕಲ್ಪಿಸಿ” ಎಂದು ಸಲಹೆ ನೀಡಿದರು. ಖಂಡಿತಾ ಈ ನಿಟ್ಟಿನಲ್ಲಿ ಕ್ರಮವಹಿಸುವಾ ಭರವಸೆ ನೀಡಿದರು.
ನಾಯಿಕಡಿತ ಹಾಗೂ ಹಾವು ಕಡಿತಕ್ಕೆ ಬೇಕಾದ ಇಂಜೆಕ್ಷನ್‌ಗಳ ಲಭ್ಯತೆ ಇರುವುದಾಗಿ ಹಾಗಲಹಳ್ಳಿ ಬಸವರಾಜು ಅವರ ಪ್ರಶ್ನೆಗೆ ಮಾಹಿತಿ ನೀಡಿದರು.
ಗರ್ಭಿಣಿಯರ ಮಾಸಿಕ ತಪಾಸಣೆ ನಡೆಸುವ ವೈದ್ಯರು, ತುಂಬು ಗರ್ಭಿಣಿಯರು ಹೆರಿಗೆ ದಿನ ಸಮೀಪಿಸಿದಾಗ ಗರ್ಭದಿಂದ ನೀರು ಹೋಗುವ ಲಕ್ಷಣ ಕಂಡುಬಂದಾಗ ಸ್ತ್ರೀ ರೋಗ ವೈದ್ಯರು ದೂರವಾಣಿ ಕರೆಗೆ ಸ್ಪಂದಿಸುವ ಆಗತ್ಯವಿದೆ. ಶನಿವಾರ, ಭಾನುವಾರ ಸ್ತ್ರೀ ರೋಗ ವೈದ್ಯರ ಲಭ್ಯವಿಲ್ಲದ ಕಾರಣ ತೊಂದರೆ ಅನುಭವಿಸುವಂತಾಗಿದೆ” ಎಂದ ಮನು ಅವರು ತಿಪ್ಪೂರಿನ ಪ್ರಕರಣ ವಿವರಿಸಿ, ಮಂಡ್ಯ ಆಸ್ಪತ್ರೆಗೆ ಹೊಗುವಷ್ಟರಲ್ಲಿ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದ್ದ ಸಂಗತಿ ತಿಳಿಸಿದರು.
ಈ ವಿಷಯ ತಿಳಿದು ಮದ್ದೂರು ಸರ್ಕಾರಿ ಅಸ್ಪತ್ರೆಯ ಸೇವಾ ಕೊರತೆ ಪ್ರತ್ಯಕ್ಷದರ್ಶಿಯ ಉದಾಹರಣೆ ಕೇಳಿ ಸಭೆ ಆತಂಕ ವ್ಯಕ್ತಪಡಿಸಿ, ಹೀಗಾದರೆ ಜೀವಗಳಿಗೆ ಬೆಲೆ ಇಲ್ಲವೇ ಎಂದು ಮರುಕ ವ್ಯಕ್ತಪಡಿಸಿದರು.
“ಶಿಶುಮರಣ, ತಾಯಿ ಮರಣ ತಪ್ಪಿಸುವಲ್ಲಿ ಸರ್ಕಾರ ಎನ್‌ಎಚ್‌ಎಂ ಕಾರ್ಯಕ್ರಮದಡಿ ರೂಪಿಸಿರುವ ಕಾರ್ಯಕ್ರಮದ ಫಲಶೃತಿ ಇದೆಯೇನು” ಎಂದು ವೈಧ್ಯಾಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದ ಸಭಿಕರು, ಮುಂದೆ ಹೀಗಾಗದಂತೆ ಕ್ರಮ ವಹಿಸಲು ಒಕ್ಕೊರಲಿನಿಂದ ಆಗ್ರಹಿಸಿದರು.
“ಒಬ್ಬರೇ ಸ್ತ್ರೀ ರೋಗ ತಜ್ಞರು ಇರುವುದರಿಂದ ವಾರದ ಏಳು ದಿನವೂ ಲಭ್ಯ ಇರಲು ಆಗುತ್ತಿಲ್ಲವೆಂದು ವೈಧ್ಯಾಧಿಕಾರಿ ಸ್ಪಷ್ಟನೆ ನೀಡಿದರು.
ಈ ವೇಳೆ ಜನಾರ್ದನ್ ಹಾಗೂ ಮರಳಿಗ ಶಿವರಾಜ್ ಮಾತನಾಡಿ, ʼಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಗರ್ಭಿಣಿಯರು ತಮ್ಮ ಸರದಿ ಬರುವವರೆಗೆ ನಿಂತು ಕಾಯಬೇಕಾದ ಪರಿಸ್ಥಿತಿ ಇದೆ. ಇದು ಆಸ್ಪತ್ರೆಯ ದೋರಣೆಯನ್ನು ಬಿಂಬಿಸಲಿದೆʼ ಎಂದು ನೈಜ ಉದಾಹರಣೆ ನೀಡಿದರು.
ಸಮಜಾಯಿಸಿ ನೀಡಿದ ವೈದ್ಯಾಧಿಕಾರಿ, ʼಸದ್ಯ ಇದ್ದ ಆಸನಗಳನ್ನು ಬದಲಿಸಿ ಅನುಕೂಲ ಕಲ್ಪಿಸಲು ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ. ಈಗಿನ ಪರಿಸ್ಥಿತಿಯಲ್ಲೂ ಆಸನ ವ್ಯವಸ್ಥೆ ಇದೆ. ಸುಧಾರಿತ ಆಸನ ವ್ಯವಸ್ಥೆಗೆ ಕ್ರಮವಾಗಿದೆʼ ಎಂದರು.
ವೈದ್ಯರು ಸಕಾಲಿಕವಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲವೆಂಬ ದೂರುಗಳು ಕೇಳಿಬಂದಿವೆ. ಹಾಗಾಗಿ ಇ- ಹಾಜರಾತಿಗೆ ಕ್ರಮ ವಹಿಸುವಂತೆ ಆಗ್ರಹಿಸಿದ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ ಅವರಿಗೆ ಉತ್ತರಿಸಿ, ʼಈಗಾಗಲೇ ನೂತನ ವ್ಯವಸ್ಥೆ ಜಾರಿಯಾಗಿದ್ದು, ಬೆಳಿಗ್ಗೆ ಸಂಜೆ ಇ-ಹಾಜರಿ ವ್ಯವಸ್ಥೆ ಅಳವಡಿಕೆಯಾಗಿದ್ದು, ಕರ್ತವ್ಯಕ್ಕೆ ತಡವಾಗಿ ಹಾಜರಾದರೆ ಅಷ್ಟು ಸಮಯವನ್ನು ವೈದ್ಯರ ಹಕ್ಕಿನ ರಜೆಯಲ್ಲಿ ಕಡಿತಗೊಳಿಸಲಾಗುವುದಾಗಿ ಹೇಳಿದರು.
ಕ ಕ ಜ ವೇದಿಕೆಯ ತಿಪ್ಪೂರು ರಾಜೇಶ್, ಬ್ಯಾಡರಹಳ್ಳಿ ಶಿವಕುಮಾರ್ ಮಾತನಾಡಿ, ʼವೈದ್ಯರಲ್ಲಿ ರೋಗಿಯ ಬಗ್ಗೆ ಸಹಾನುಭೂತಿ ಇಲ್ಲ. ನೆಪಗಳನ್ನು ಹುಡುಕಿ ಅನಗತ್ಯವಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಹಾಕಲಾಗುತ್ತಿದೆ. ಇದು ಸರಿಯಾದ ನಡೆಯಲ್ಲ. ಇದಕ್ಕೆ ಏನು ಕ್ರಮ ವಹಿಸುತ್ತೀರಿʼ ಎಂದು ಪ್ರಶ್ನಿಸಿದರು.
“ವೈದ್ಯರ ಇಂತಹ ಕ್ರಮ ಗುರುತಿಸಲಾಗಿದೆ. ಈವರೆಗೆ ಸೌಹರ್ದತೆಯಿಂದ ಸಮಸ್ಯೆ ಪರಿಹರಿಸಲು ಮೌಖಿಕವಾಗಿ ತಿಳುವಳಿಕೆ ನೀಡಲಾಗುತ್ತಿತ್ತು. ಇನ್ನು ಲಿಖಿತ ನೋಟಿಸ್ ನೋಡಿ ಕ್ರಮವಹಿಸಲಾಗುವುದು” ಎಂದರು
ಕೆ ರವಿಕುಮಾರ್ ಅವರು ಮಹಿಳೆ ಮಕ್ಕಳ ದಾಖಲಾತಿಗಾಗಿ ಪ್ರತ್ಯೇಕ ವಾರ್ಡ್ ಲಭ್ಯ ಇದೆಯಾ ಎಂದು ಕೇಳಿದ ಪ್ರಶ್ನೆಗೆ, ʼನೂರು ಹಾಸಿಗೆ ಆಸ್ಪತ್ರೆ ವ್ಯವಸ್ಥೆ ಇದಾಗಿದ್ದು, ಮಕ್ಕಳಿಗೆ ಹಾಗೂ ಇತರೆ ವಿಭಾಗಕ್ಕೆ ಪ್ರತೇಕ ವಾರ್ಡ್ ವ್ಯವಸ್ಥೆ ಇಲ್ಲ. ಆದರೆ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಕಲ್ಪಿಸಿದೆ. ಮಹಿಳೆಯರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆʼ ಎಂದರು.
ಹುಲಿಗೆರೆಪುರ ರವಿ ಅವರು, ʼಕುಷ್ಠರೊಗ ವಿಭಾಗಕ್ಕೆ ವ್ಯವಸ್ಥೆ ಆಗಿದೆಯಾʼ ಎಂದು ಕೇಳಿದ ಮಾಹಿತಿಗೆ ಸದ್ಯ ಅಂತಹ ವ್ಯವಸ್ಥೆ ಇಲ್ಲʼ ಎಂದರು
ಜನರೇಟರ್ ವಿದ್ಯುತ್ ಕಡಿತವಾದಾಗ ಸ್ವಯಂಚಾಲಿತವಾಗುವ ವ್ಯವಸ್ಥೆ ಇಲ್ಲದ ಬಗ್ಗೆ ಅಜ್ಜಹಳ್ಳಿ ಬಸವರಾಜ್ ಗಮನ ಸೆಳೆದರು. ಜನೌಷಧಿ ಕೇಂದ್ರ ಜನಸಾಮಾನ್ಯರಿಗೆ ಉಪಯೊಗವಾಗಿತ್ತು. ಸರ್ಕಾರ ಇದನ್ನು ಮುಚ್ಚಲು ಹೊರಟಿರುವ ಕ್ರಮ ಸರಿಯಲ್ಲವೆಂದು ಕ ಕ ಜ ವೇದಿಕೆ ಜಿಲ್ಲಾಧ್ಯಕ್ಷ ಉಮಾಶಂಕರ್ ಆಕ್ಷೇಪಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ರೈತರು ವಿದ್ಯುತ್ ಪರಿಕರಗಳೊಂದಿಗೆ ಜಾಗೃತಿಯಿಂದ ಕೆಲಸ ಮಾಡಬೇಕು: ಬಂಗಾರಮ್ಮ ದೊಡ್ಡಮನಿ
ಹಳೆ ಕಬ್ಬಿಣ ವಿಲೇವಾರಿಗೆ ಕ್ರಮವಹಿಸಿ, ತುಕ್ಕು ಹಿಡಿದಿರುವ ಗೇಟ್‌ಗೆ ಬಣ್ಣ ಬಳಿಸಿ ಎಂದು ಲಕ್ಷ್ಮಣ ಚನ್ನಸಂದ್ರ ರಾಚಪ್ಪಾಜಿ ಆಗ್ರಹಿಸಿದರು.
“ಶುಚಿತ್ವಕ್ಕೆ ಸಂಬಂಧಿಸಿ, ನೀರಿನ ವ್ಯವಸ್ಥೆ ಕೊರತೆ ಇದೆ. ಒಂದು ನೀರಿನ ಟ್ಯಾಂಕರ್ ಇದ್ದು, ಮತ್ತೊಂದು ನೀರಿನ ಟ್ಯಾಂಕ್ ಆಗತ್ಯವಿದೆ. ಶುದ್ದ ಕುಡಿಯುವ ನೀರಿನ ವ್ಯವಸ್ತೆಗಾಗಿ ದಾನಿಗಳಿಂದ ವ್ಯವಸ್ಥೆ ಮಾಡಿಕೊಂಡಿದ್ದೇನೆ. ನಾನು ವೈದ್ಯಾಧಿಕಾರಿ ಆದಾಗ ಐದು ಜನ ವೈದ್ಯರು ಮಾತ್ರ ಇದ್ದರು. ಈಗ 12 ಮಂದಿ ವೈದ್ಯರಿದ್ದಾರೆ. ನರ್ಸ್ ಪೋಸ್ಟ್ ಮಂಜೂರಾತಿ ಹೆಚ್ಚಳ ಆಗಬೇಕಾಗಿದೆ” ಎಂದರು.
ಸಭೆಯಲ್ಲಿ ನಿವೃತ್ತ ಶಿಕ್ಷಕ ಚನ್ನಪ್ಪ, ನಿವೃತ್ತ ಪ್ರಾಧ್ಯಾಪಕ ಡಾ. ಬೋರೇಗೌಡ ಮಲವರಾಜ್, ಮಾಲಗಾರನಹಳ್ಳಿ ಶಶಿ, ಚಿಕ್ಕಣ್ಣ, ಉಮೇಶ್ ಇದ್ದರು.