80 ವರ್ಷದ ವೃದ್ದೆ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿ, ಕೊಲೆ ಮಾಡಿ, ಆಕೆಯ ಬಳಿಯಿದ್ದ ಹಣ-ಒಡವೆಗಳನ್ನು ದೋಚಿರುವ ಪೈಶಾಚಿಕ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.
ಶ್ರೀನಿವಾಸಪುರದಲ್ಲಿರುವ ಮಳುಬಾಗಿಲು ರಸ್ತೆಯ ಸಂತೆ ಮೈದಾನದ ಬಳಿ ವೃದ್ದೆಯ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿ, ಪರಿಶೀಲನೆ ನಡೆಸಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಮೃತ ಸಂತ್ರಸ್ತೆಯನ್ನು ಶ್ರೀನಿವಾಸಪುರ ತಾಲೂಕಿನ ಎಚ್.ಜಿ ಹೊಸೂರು ಗ್ರಾಮದ ಲಕ್ಷ್ಮಿದೇವಮ್ಮ ಎಂದು ಗುರುತಿಸಲಾಗಿದೆ. ಅವರು ಶನಿವಾರ ಶ್ರೀನಿವಾಸಪುರಕ್ಕೆ ಬಂದಿದ್ದರು. ಪಟ್ಟಣದಲ್ಲಿದ್ದ ದೇವಸ್ಥಾನ, ಚರ್ಚ್‌ಗಳಲ್ಲಿ ಪೂಜೆ ಸಲ್ಲಿಸಿ ಸೋಮವಾರ ಸಂಜೆ ತನ್ನೂರಿಗೆ ಮರಳಲು ಸಂತೆ ಮೈದಾನದ ಸಮೀಪ ಬಸ್‌ಗಾಗಿ ಕಾದುಕುಳಿದ್ದರು ಎಂದು ಹೇಳಲಾಗಿದೆ.
ಬಸ್‌ಗಾಗಿ ಕಾಯುತ್ತಿದ್ದ ಆಕೆಯನ್ನು ದುರುಳ ಕಾಮುಕನೊಬ್ಬ ಎಳೆದೊಯ್ದು, ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾನೆ. ಆಕೆಯ ಬಳಿಯಿದ್ದ ಹಣ-ಒಡವೆಗಳನ್ನು ದೋಚಿದ್ದಾನೆ ಎಂದು ವರದಿಯಾಗಿದೆ. ವೃದ್ಧೆಯೊಂದಿಗೆ ಕಾಮುಕ ಆರೋಪಿ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯವು ಸಮೀಪ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ.