ಹಾಲು ಉತ್ಪಾದಿಸುವ ಪ್ರಮುಖ ರಾಜ್ಯವಾಗಿ ಕರ್ನಾಟಕ ತನ್ನ ಛಾಪು ಮುಂದುವರಿಸಿದ್ದು, ಕರ್ನಾಟಕ ಹಾಲು ಒಕ್ಕೂಟ (ಕೆಎಮ್‌ಎಫ್) ಸಾರ್ವಕಾಲಿಕ ಗರಿಷ್ಠ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೂಲಕ ರಾಜ್ಯದ ಡೈರಿ ವಲಯದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
ಮೇ 22ರಂದು ಈ ದಾಖಲೆ ಸಾಧ್ಯವಾಗಿದ್ದು, ಅನುಕೂಲಕರವಾದ ಪೂರ್ವ ಮುಂಗಾರು ಮಳೆ ಮತ್ತು ಹಸಿರು ಮೇವಿನ ಲಭ್ಯತೆಯ ಕಾರಣದಿಂದ ದಾಖಲೆ ಸಾಧ್ಯವಾಗಿದೆ.
ಕರ್ನಾಟಕ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ಈ ಕುರಿತು ಈ ದಿನ.ಕಾಮ್ ಜೊತೆ ಮಾಹಿತಿ ಹಂಚಿಕೊಂಡಿದ್ದು, “ಕೆಎಂಎಫ್ ಪ್ರಕಾರ, ಇದು ಕಳೆದ ವರ್ಷ ದಿನವೊಂದರಲ್ಲಿ ಸಂಗ್ರಹಿಸಿದ ಗರಿಷ್ಠ ಹಾಲಿಗಿಂತಲೂ ಹೆಚ್ಚು. ಕಳೆದ ವರ್ಷ ಜೂನ್ 28 ರಂದು 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗಿತ್ತು. ಆನಂತರ ದೈನಂದಿನ ಸರಾಸರಿ ಸಂಗ್ರಹ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡಿದೆ” ಎಂದರು.
“ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಚೆನ್ನಾಗಿ ಆದ ಕಾರಣ ಹಸಿರು ಮೇವು ಲಭ್ಯತೆಯಿಂದ ಈ ಹಾಲು ಹೆಚ್ಚಾಗಿದೆ. ಅಲ್ಲದೇ ರಾಜ್ಯ ಸರ್ಕಾರ ರೈತರಿಗೆ ನೇರವಾಗಿ ಲಭಿಸುವ ಹಾಗೇ ಹಾಲಿನ ದರ ಏರಿಸಿದ್ದರಿಂದ ಖಾಸಗಿಯಾಗಿ ಹಾಲು ಹಾಕುವುದು ಬಿಟ್ಟು ಕೆಎಮ್‌ಎಫ್‌ಗೆ ಹಾಕುತ್ತಿದ್ದಾರೆ. 5 ರೂ. ಪ್ರೋತ್ಸಾಹ ಧನ ಸೇರಿ ಒಟ್ಟು ರೈತರಿಗೆ ಪ್ರತಿ ಲೀಟರ್ ಹಾಲಿಗೆ 40 ರೂ. ವರೆಗೂ ಸಿಗುತ್ತಿದೆ. ಇದರಿಂದ ಹಾಲಿನ ಉತ್ಪಾದನೆ ಅಧಿಕವಾಗಿದೆ. ಇದೇ ಮುಂಗಾರು ಮುಗಿಯುವುದರೊಳಗೆ 1 ಕೋಟಿ 30 ಲಕ್ಷ ಹಾಲು ಸಂಗ್ರಹ ಸಾಧ್ಯತೆ ಇದೆ” ಎಂದು ಶಿವಸ್ವಾಮಿ ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯ ಸರ್ಕಾರದ ‘ಗೃಹ ಆರೋಗ್ಯ’ ಮತ್ತೊಂದು ಗ್ಯಾರಂಟಿ ಯೋಜನೆಯೇ?
ಜೂನ್ 1 ರಂದು ವಿಶ್ವ ಹಾಲು ದಿನಾಚರಣೆಯ ಅಂಗವಾಗಿ, ಕೆಎಂಎಫ್ ತನ್ನ ಜನಪ್ರಿಯ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ 18 ಹೊಸ ಬಗೆಯ ಕೇಕ್ಗಳು ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು. ಕೆಎಂಎಫ್ ಮತ್ತು ಅದರ ಅಂಗಸಂಸ್ಥೆಗಳಾದ ಹಾಲು ಒಕ್ಕೂಟಗಳು ಈಗಾಗಲೇ ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ನಂದಿನಿ ಹಲ್ವಾ, ಬ್ರೆಡ್, ಬನ್ಗಳು ಮತ್ತು ಐಸ್ ಕ್ರೀಮ್ ಸೇರಿದಂತೆ 150 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಇದೀಗ ಹೊಸ ಬೇಕರಿ ಉತ್ಪನ್ನಗಳ ಸೇರ್ಪಡೆಯೊಂದಿಗೆ, ಕೆಎಂಎಫ್ ಉದ್ಯಮ ಮತ್ತಷ್ಟು ವಿಸ್ತರಣೆಯಾಗಿದೆ.