1972 ರಲ್ಲಿ ಸ್ಟಾಕ್ಹೋಮ್ ಸಮ್ಮೇಳನದಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಜೂನ್ 5 ಅನ್ನು 'ಪರಿಸರ ದಿನ' ಎಂದು ಘೋಷಿಸಿತು. 2025 ರ ವಿಶ್ವ ಪರಿಸರ ದಿನದ ವಿಷಯ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡುವುದಾಗಿದೆ…
ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನಕ್ಕಾಗಿ, ಭೂಮಿ ಎಂಬ ಗ್ರಹವನ್ನು ರಕ್ಷಿಸುವ ತುರ್ತು ಜಾಗತಿಕ ಕರೆಗಾಗಿ ಜಗತ್ತು ಒಂದಾಗುತ್ತದೆ. 150ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುವ ಇದು, ಪರಿಸರ ಜಾಗೃತಿ ಮೂಡಿಸಲು ಮತ್ತು ಕ್ರಮ ಕೈಗೊಳ್ಳಲು ಮೀಸಲಾಗಿರುವ ಅತಿದೊಡ್ಡ ಅಂತಾರಾಷ್ಟ್ರೀಯ ವೇದಿಕೆಯಾಗಿದೆ.
ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶ್ವ ಪರಿಸರ ದಿನದಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ವರ್ಷ, ಪ್ಲಾಸ್ಟಿಕ್ ಮಾಲಿನ್ಯದ ಮೇಲೆ ಗಮನ ಕೇಂದ್ರೀಕರಿಸಲಾಗಿದ್ದು, ಹೆಚ್ಚುತ್ತಿರುವ ಬಿಕ್ಕಟ್ಟನ್ನು ಎದುರಿಸಲು ಮತ್ತು ಭವಿಷ್ಯದ ಪೀಳಿಗೆಗೆ ಗ್ರಹವನ್ನು ರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾಮೂಹಿಕ ಕ್ರಮ ಕೈಗೊಳ್ಳಲು ಸಮುದಾಯಗಳನ್ನು ಒತ್ತಾಯಿಸುತ್ತದೆ.
2025ರ ಥೀಮ್ ಏನು?
ವಿಶ್ವ ಪರಿಸರ ದಿನದಂದು, ತುರ್ತು ಪರಿಸರ ಸಮಸ್ಯೆಗಳನ್ನು ಬೆಳಕಿಗೆ ತರಲಾಗುತ್ತದೆ. ಪ್ರತಿ ವರ್ಷ ಅರಣ್ಯನಾಶ, ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳನ್ನು ಉದ್ದೇಶಿಸಿ ವಿಭಿನ್ನ ಥೀಮ್ ಅನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ, 2025 ರ ವಿಶ್ವ ಪರಿಸರ ದಿನದ ಥೀಮ್ ‘ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡುವುದು’ ಆಗಿದೆ.
ಈ ವರ್ಷ, ವಿಶ್ವ ಪರಿಸರ ದಿನವು ಜಗತ್ತಿನಾದ್ಯಂತ ಸಮುದಾಯಗಳು ಸುಸ್ಥಿರ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸಲು ಪ್ರೋತ್ಸಾಹಿಸಲು ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್(UNEP) ನೇತೃತ್ವದಲ್ಲಿ #BeatPlasticPollution ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಇತಿಹಾಸ
1972ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಮಾನವ ಪರಿಸರದ ಕುರಿತಾದ ವಿಶ್ವಸಂಸ್ಥೆಯ ಸಮ್ಮೇಳನದ ಸಮಯದಲ್ಲಿ ವಿಶ್ವ ಪರಿಸರ ದಿನವನ್ನು ಸ್ಥಾಪಿಸಲಾಯಿತು. ಆ ವರ್ಷದ ನಂತರ, ಯುಎನ್ ಜನರಲ್ ಅಸೆಂಬ್ಲಿ ಜೂನ್ 5 ಅನ್ನು ವಿಶ್ವ ಪರಿಸರ ದಿನವೆಂದು ಅಧಿಕೃತವಾಗಿ ಘೋಷಿಸಿತು. ಮೊದಲ ಆಚರಣೆಯು 1973ರಲ್ಲಿ ‘ಓನ್ಲಿ ಒನ್ ಅರ್ಥ್’ ಎಂಬ ಥೀಮ್‌ನೊಂದಿಗೆ ನಡೆಯಿತು. ಇದು ಪರಿಸರ ಜಾಗೃತಿಗಾಗಿ ಅತಿದೊಡ್ಡ ಜಾಗತಿಕ ವೇದಿಕೆಯಾಗಿ ಉತ್ತಮ ಆರಂಭಕ್ಕೆ ನಾಂದಿಯಾಡಿತು.
ಇದನ್ನು ಓದಿದ್ದೀರಾ?: ಅರಣ್ಯಗಳು ಅಕ್ಷಯ ಪಾತ್ರೆಗಳಲ್ಲ: ಎಲ್ಲರೂ ಅರಿಯಬೇಕಾದ ಸತ್ಯ
ಅಂದಿನಿಂದ, ಪರಿಸರ ದಿನವು ವಿಶ್ವದ ಅತಿದೊಡ್ಡ ಪರಿಸರ ಜಾಗೃತಿ ಕಾರ್ಯಕ್ರಮವಾಗಿ ಬೆಳೆದಿದೆ. ಪ್ರತಿ ವರ್ಷ, ಆತಿಥೇಯ ರಾಷ್ಟ್ರವು ಒಂದು ನಿರ್ದಿಷ್ಟ ವಿಷಯದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಮುನ್ನಡೆಸುತ್ತದೆ.
ಮಹತ್ವವೇನು?
ಮಾಲಿನ್ಯ, ಜೀವವೈವಿಧ್ಯ ನಷ್ಟ ಮತ್ತು ಹವಾಮಾನ ಬದಲಾವಣೆಯ ಮೂರು ಪಟ್ಟು ಬೆದರಿಕೆ ಪ್ಲಾಸ್ಟಿಕ್ ಮಾಲಿನ್ಯದಿಂದ ಆಗುತ್ತಿದೆ ಮತ್ತು ವಿಶ್ವವನ್ನು ಹದಗೆಡಿಸುತ್ತಿದೆ. ಪ್ರತಿ ವರ್ಷ 11 ಮಿಲಿಯನ್ ಟನ್ ಪ್ಲಾಸ್ಟಿಕ್ ಕಸವನ್ನು ನೀರಿನ ಪರಿಸರಕ್ಕೆ ಸುರಿಯಲಾಗುತ್ತದೆ. ಜೊತೆಗೆ ಭೂಕುಸಿತಗಳು ಮತ್ತು ಒಳಚರಂಡಿಗಳಿಂದ ಬರುವ ಮೈಕ್ರೋಪ್ಲಾಸ್ಟಿಕ್‌ಗಳು ಮಣ್ಣಿನಲ್ಲಿ ಸಂಗ್ರಹವಾಗುತ್ತವೆ, ಇದು ಪರಿಸರ ಹಾನಿಯನ್ನುಂಟುಮಾಡುತ್ತದೆ. ಪ್ಲಾಸ್ಟಿಕ್ ಮಾಲಿನ್ಯದ ಅಂದಾಜು ವಾರ್ಷಿಕ ವೆಚ್ಚ 300 ರಿಂದ 600 ಬಿಲಿಯನ್ ಡಾಲರ್ ಆಗುತ್ತದೆಂದು ಅಂದಾಜಿಸಲಾಗಿದೆ.
ವಿಶ್ವ ಪರಿಸರ ದಿನ ಸರ್ಕಾರಗಳು ಸಾರ್ವಜನಿಕರಿಗೆ ಶಿಕ್ಷಣ ನೀಡಬೇಕು. ಜೊತೆಗೆ ನೀತಿ ಮತ್ತು ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಪ್ರೋತ್ಸಾಹಿಸಬೇಕು. ಇಂದು, 150ಕ್ಕೂ ಹೆಚ್ಚು ದೇಶಗಳು ಈ ದಿನವನ್ನು ಆಚರಿಸುತ್ತವೆ. ಇದು ಸ್ವಚ್ಛತಾ ಕಾರ್ಯಕ್ರಮಗಳು, ನೆಡುತೋಪು ಉಪಕ್ರಮಗಳು, ಜಾಗೃತಿ ಮೂಡಿಸುವ ಅಭಿಯಾನಗಳು, ಶಾಲಾ ಕಾರ್ಯಕ್ರಮಗಳು ಮತ್ತು ಪರಿಸರ ಪೂರಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತದೆ.

ಯಾವ ದೇಶ ಆಯೋಜಿಸುತ್ತಿದೆ?
ಈ ವರ್ಷ 2025ರ ವಿಶ್ವ ಪರಿಸರ ದಿನವನ್ನು ದಕ್ಷಿಣ ಕೊರಿಯಾ ಎಂದೂ ಕರೆಯಲ್ಪಡುವ ಕೊರಿಯಾ ಗಣರಾಜ್ಯ ಅಧಿಕೃತವಾಗಿ ಆಯೋಜಿಸಲಿದೆ. ಪರಿಸರ ಉಪಕ್ರಮಗಳು ಮತ್ತು ಸುಸ್ಥಿರ ಜೀವನ ವಿಧಾನಗಳಿಗೆ ಹೆಸರುವಾಸಿಯಾದ ಸುಂದರವಾದ ದ್ವೀಪವಾದ ಜೆಜು ಪ್ರಾಂತ್ಯವು ಆಚರಣೆಯ ಕೇಂದ್ರವಾಗಲಿದೆ. 2040ರ ವೇಳೆಗೆ ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿಸಲು ಜೆಜು ಸಭೆ ನಿರ್ಣಯ ಕೈಗೊಂಡಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರಗಳು ಮರುಬಳಕೆಯನ್ನು ಹೆಚ್ಚಿಸಿವೆ, ಪರಿಸರ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಿವೆ ಮತ್ತು ಮೂಲದಲ್ಲಿ ಕಸವನ್ನು ಬೇರ್ಪಡಿಸುವುದನ್ನು ಕಡ್ಡಾಯಗೊಳಿಸಿವೆ.
ಆತಿಥೇಯ ರಾಷ್ಟ್ರವಾಗಿ, ಕೊರಿಯಾ ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಅಂತಾರಾಷ್ಟ್ರೀಯ ಚರ್ಚೆಗಳು, ನೀತಿ ನಿರ್ಧಾರಗಳು ಮತ್ತು ಚಟುವಟಿಕೆಗಳನ್ನು ಮುನ್ನಡೆಸಲಿದೆ. ಫಲಕ ಚರ್ಚೆಗಳು, ಸ್ವಚ್ಛತಾ ಅಭಿಯಾನಗಳು, ಸಾರ್ವಜನಿಕ ಪ್ರತಿಜ್ಞೆಗಳು ಮತ್ತು ಪ್ಲಾಸ್ಟಿಕ್ ಪರ್ಯಾಯಗಳ ನವೀನ ಪ್ರದರ್ಶನಗಳು- ಇವೆಲ್ಲವೂ ಅಭಿಯಾನದ ಭಾಗವಾಗಿರುತ್ತವೆ. ಆ ಮೂಲಕ ಕೊರಿಯಾ ಇತರ ದೇಶಗಳಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಈ ವರ್ಷ ಪರಿಸರ ದಿನವನ್ನು ಆಯೋಜಿಸುವ ಮೂಲಕ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುತ್ತದೆ.
ಇದನ್ನು ಓದಿದ್ದೀರಾ?: ಸಿಂಧು ನದಿ ನೀರು ಹರಿಸಲೇಬೇಕು – ಇಲ್ಲದಿದ್ದರೆ ಭಾರತಕ್ಕೇ ಗಂಭೀರ ಸಮಸ್ಯೆ!
ಭಾರತದಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ಪರಿಣಾಮ
ವಿಶ್ವದ ಪ್ಲಾಸ್ಟಿಕ್ ಕಸದ ಸರಿಸುಮಾರು ಐದನೇ ಒಂದು ಭಾಗ ಭಾರತದಲ್ಲಿ ಉತ್ಪತ್ತಿಯಾಗುತ್ತದೆ. ಪ್ರತಿ ವರ್ಷ, ದೇಶವು 9.3 ರಿಂದ 9.5 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಅಂದರೆ ಪ್ರತಿ ವ್ಯಕ್ತಿಗೆ ಪ್ರತಿದಿನ ಸುಮಾರು 0.12 ಕೆಜಿ ಕಸ ಉತ್ಪಾದನೆಯಾಗುತ್ತದೆ. ಅದು ವ್ಯಕ್ತಿಗೆ ಹಲವು ವಿಧಗಳಲ್ಲಿ ಹಾನಿಯನ್ನುಂಟುಮಾಡುತ್ತದೆ.
• ಪ್ಲಾಸ್ಟಿಕ್ ತ್ಯಾಜ್ಯವು ಮಣ್ಣು ಮತ್ತು ನೀರನ್ನು ಕಲುಷಿತಗೊಳಿಸುತ್ತದೆ, ಚರಂಡಿಗಳನ್ನು ನಿರ್ಬಂಧಿಸುತ್ತದೆ ಮತ್ತು ವನ್ಯಜೀವಿಗಳಿಗೆ ಹಾನಿ ಮಾಡುತ್ತದೆ.
• ಪ್ರತಿ ವರ್ಷ 5.8 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಕಸವನ್ನು ಸುಡುವಾಗ ವಿಷಕಾರಿ ಮಾಲಿನ್ಯಕಾರಕಗಳು ಬಿಡುಗಡೆಯಾಗುತ್ತವೆ.
• ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ತ್ಯಾಜ್ಯ ನಿರ್ವಹಣೆ ಒಂದು ದೊಡ್ಡ ಸಮಸ್ಯೆಯಾಗಿದೆ.
• ಸಮುದ್ರ ಜೀವಿಗಳು ಆಗಾಗ್ಗೆ ಪ್ಲಾಸ್ಟಿಕ್ ಅನ್ನು ಆಹಾರವೆಂದು ತಪ್ಪಾಗಿ ಭಾವಿಸಿ ತಿನ್ನುವುದರಿಂದ, ಅವುಗಳ ಪ್ರಾಣಕ್ಕೆ ಸಂಚಕಾರ ಒಡ್ಡುತ್ತದೆ. ಇದು ಸಮುದ್ರ ಪರಿಸರ ವ್ಯವಸ್ಥೆಯನ್ನು ಹಾಳು ಮಾಡುತ್ತದೆ.
• ಭಾರತವು ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ. ಆ ಮೂಲಕ, ಮರುಬಳಕೆ ಕಾರ್ಯಕ್ರಮಗಳನ್ನು ಹೆಚ್ಚಿಸುವ, ತ್ಯಾಜ್ಯ ನಿರ್ವಹಣೆ ಮತ್ತು ಸಮುದಾಯ ಶುಚಿಗೊಳಿಸುವ ಉಪಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕಾಗಿದೆ.
