ತುಮಕೂರಿನ ಹೇಮಾವತಿ ಲಿಂಕ್ ಕೆನಾಲ್ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಕೃಷಿ ಹಾಗೂ ಕನ್ನಡಪರ ಹೋರಾಟಗಾರರಿಂದ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರದ ಬೆನ್ನಲ್ಲೇ ಭಾರಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಪ್ರತಿಭಟನೆಯಲ್ಲಿ ಜಿಲ್ಲೆಯ ಮೂವರು ಶಾಸಕರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಭಾಗಿಯಾಗಿ ಬೆಂಬಲ ಸೂಚಿಸಿದ್ದಾರೆ.
ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ, ಎಂ ಟಿ ಕೃಷ್ಣಪ್ಪ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಈ ಹೋರಾಟಕ್ಕೆ ಬೆಂಬಲ ನೀಡಿದ್ದು, ರೈತರ ಬಂಧನ ಹಾಗೂ ಸ್ವಾಮೀಜಿಗಳ ವಿರುದ್ಧ ದಾಖಲಾದ ಎಫ್‌ಐಆರ್ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾಕಾರರು ನೇರವಾಗಿ ಎಸ್ಪಿ ಚೇಂಬರ್‌ಗೆ ತೆರಳಿ ಪ್ರಕರಣಗಳನ್ನು ಹಿಂಪಡೆಯುವಂತೆ ಮನವಿ ಸಲ್ಲಿಸಿದರು.

ಹಠಾತ್‌ಗೆ ಘಟನಾ ಸ್ಥಳಕ್ಕೆ ಆಗಮಿಸಿದ ಕೇಂದ್ರ ವಲಯ ಐಜಿಪಿ ಲಬೂರಾಮ್, ಎಸ್ಪಿ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕುರಿತಂತೆ ಮಾಹಿತಿ ಪಡೆದುಕೊಂಡರು. ಪ್ರತಿಭಟನಾ ನಿರತರ ಸಮಸ್ಯೆಗಳನ್ನು ಆಲಿಸಿದರು. ಶಾಸಕರು ಮತ್ತು ಮುಖಂಡರ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ ಲಬೂರಾಮ್, ಪರಿಸ್ಥಿತಿ ಸಮತೋಲನದಲ್ಲಿರಲಿ ಎಂಬ ಉದ್ದೇಶದಿಂದ ಸ್ಥಳೀಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಎಸ್ಪಿ ಕಚೇರಿಯ ಮೆಟ್ಟಿಲುಗಳ ಮೇಲೆಯೇ ಶಾಸಕರು ಧರಣಿ ಕೂತಿದ್ದಾರೆ. ತಕ್ಷಣವೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಸಂಪರ್ಕಿಸಿ ಎಫ್‌ಐಆರ್ ಹಿಂಪಡೆಯುವಂತೆ ತೀವ್ರ ಒತ್ತಡ ಹಾಕಿದ್ದಾರೆ.

ಇದನ್ನೂ ಓದಿ: ಹಾಸನ | ಕೌಟುಂಬಿಕ ಕಲಹ; ಹೇಮಾವತಿ ನದಿಗೆ ಹಾರಿ ಎಂಜಿನಿಯರ್ ಆತ್ಮಹತ್ಯೆ
ಪ್ರತಿಭಟನೆಯ ಹಿನ್ನೆಲೆ ತುಮಕೂರಿನ ಬಿಹೆಚ್ ರಸ್ತೆದಲ್ಲಿರುವ ಎಸ್ಪಿ ಕಚೇರಿಗೆ ಮುಂಜಾನೆಯಿಂದಲೇ ಭದ್ರತೆ ಒದಗಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳ ಸಿಬ್ಬಂದಿಯೂ ಸ್ಥಳದಲ್ಲಿದ್ದಾರೆ. ಮೂವರು ಡಿವೈಎಸ್ಪಿ, 8 ಇನ್ಸ್‌ಪೆಕ್ಟರ್‌ಗಳು ಹಾಗೂ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಎಸ್‌ಎಸ್‌ಐಟಿ ಕಾಲೇಜಿನಿಂದ ಶಿವಕುಮಾರ್ ಸ್ವಾಮೀಜಿ ವೃತ್ತದವರೆಗೆ ಸಂಪೂರ್ಣವಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಎಸ್ಪಿ ಕಚೇರಿ ಎದುರು ಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಎಲ್ಲಾ ಪ್ರಮುಖ ಅಡ್ಡ ರಸ್ತೆಗಳನ್ನೂ ನಿಗದಿತವಾಗಿ ಬಂದೋಬಸ್ತ್ ಮಾಡಲಾಗಿದೆ. ಪ್ರತಿಯೊಂದು ಪ್ರವೇಶ ಬಾಗಿಲುಗಳಲ್ಲಿ ನಾಕಾ ಬಂದಿಯನ್ನು ಸಜ್ಜುಗೊಳಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.