ಐಪಿಎಲ್ ಟಿ-20 18ನೇ ಆವೃತ್ತಿಯಲ್ಲಿ ಆರ್ ಸಿ ಬಿ ತಂಡವು ಪಂಜಾಬ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ 6 ರನ್ ಗಳಿಂದ ಗೆಲ್ಲುವ ಮೂಲಕ ಐಪಿಎಲ್ ಪ್ರಾರಂಭವಾದಾಗಿನಿಂದ 18 ವರ್ಷಗಳ ಕನಸು ಸಾಕಾರಗೊಳಿಸಿಕೊಂಡಿದ್ದು, ಈ ಮೂಲಕ ಮೊದಲ ಬಾರಿಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಪಂಜಾಬ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ಜಯಭೇರಿ ಬಾರಿಸಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದ್ದು, ಆರ್ ಸಿ ಬಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಈ ಗೆಲುವಿನ ಹಿನ್ನೆಲೆಯಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತಡರಾತ್ರಿಯವರೆಗೂ ಮುಳುಗಿದ್ದರು.
ದಾವಣಗೆರೆ ನಗರದ ಹೈಸ್ಕೂಲು ಮೈದಾನ, ಜಯದೇವ ವೃತ್ತ, ಎಂಸಿಸಿ ಬ್ಲಾಕ್, ವಿದ್ಯಾನಗರ, ಮಂಡಿಪೇಟೆ, ರಾಂ ಅಂಡ್ ಕೋ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಚನ್ನಗಿರಿ, ಹರಿಹರ ನಗರದ ಹಲವೆಡೆ ಮತ್ತು ಗ್ರಾಮೀಣ ಭಾಗದಲ್ಲಿ ಕೂಡ ಆರ್ ಸಿ ಬಿ ಗೆಲುವಿಗೆ ಸಂಭ್ರಮಾಚರಣೆ ನೆಡೆಸಿದರು.
ಚಿತ್ರದುರ್ಗದ ಹೊಳಲ್ಕೆರೆ ಗೇಟ್, ಕನಕ ವೃತ್ತ, ಗಾಯತ್ರಿ ವೃತ್ತ, ಜೆಸಿಆರ್ ಬಡಾವಣೆ, ಕೆಳಗೋಟೆ, ಸ್ಟೇಟ್ ಬ್ಯಾಂಕ್ ವೃತ್ತ ಸೇರಿದಂತೆ ಹೊಳಲ್ಕೆರೆ ನಗರದಲ್ಲಿ, ಹೊಸದುರ್ಗ, ಚಳ್ಳಕೆರೆಯ ಮುಖ್ಯ ವೃತ್ತಗಳಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕನ್ನಡ ಭಾಷಾವಿವಾದ, ಕಮಲ್ ಕ್ಷಮೆ ಯಾಚಿಸದಿದ್ದರೆ ಥಗ್ ಲೈಪ್ ಚಿತ್ರ ಪ್ರದರ್ಶನಕ್ಕೆ ಅವಕಾಶವಿಲ್ಲ; ಕರವೇ
ಐಪಿಎಲ್ ಆರಂಭವಾಗಿ 18 ವರ್ಷಗಳಾದರೂ ಪ್ರತಿ ಆವೃತ್ತಿಯಲ್ಲೂ ನಿರಾಸೆ ಅನುಭವಿಸಿದ್ದ ಆರ್ ಸಿ ಬಿ 18 ವರ್ಷಗಳ ಕಾಯುವಿಕೆಗೆ ವಿರಾಮವಿಟ್ಟು ಈ ಆವೃತ್ತಿಯಲ್ಲಿ ಜಯಗಳಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ವಿಶೇಷ ಸಂಭ್ರಮ ಮೂಡಿಸಿದೆ. ಹಲವೆಡೆ ದೊಡ್ಡ ದೊಡ್ಡ ಪರದೆಗಳಲ್ಲಿ ಪಂದ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಸಂಭ್ರಮಾಚರಣೆ ವೇಳೆ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ದಯಾಳ್ ಸೇರಿದಂತೆ ಹಲವು ಆಟಗಾರರಿಗೆ ಜೈಕಾರ ಹಾಕಿ ತಂಡದ ಆಟಗಾರರ ಆಟವನ್ನು ಶ್ಲಾಘಿಸಿದ್ದುದು ಕಂಡು ಬಂದಿತು